ಕ್ರೀಡಾ ಪಟುಗಳಲ್ಲಿ ನಿರಂತರ ಪರಿಶ್ರಮ ಅಗತ್ಯ


ಬಾಗಲಕೋಟೆ,ಅ.19 : ಕ್ರೀಡಾಪಟುಗಳಲ್ಲಿ ನಿರಂತರ ಪರಿಶ್ರಮ ಅಗತ್ಯವಾಗಿದ್ದು, ಆಟದಲ್ಲಿ ವಿಶ್ವಾಸ ಮತ್ತು ನಂಬಿಕೆ ಮುಖ್ಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಹೇಳಿದರು.
ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಇಲಾಖೆ ಹಾಗೂ ಪ್ರಾರ್ಥನಾ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡ ರಾಜ್ಯ ಮಟ್ಟದ ಪುಟ್‍ಬಾಲ್ ಪಂದ್ಯಾವಳಿಯ ಕ್ರೀಡಾ ಧ್ವಜಾರೋಹಣ ನೆರವೇರಿಸಿ, ಕ್ರೀಡಾ ಜ್ಯೋತಿಯನ್ನು ಸ್ವಾಗತಿಸಿ, ಮಾತನಾಡಿದ ಅವರು ಕ್ರೀಡಾ ಮನೋಬಾವನೆಯಿಂದ ಭಾಗವಹಿಸಬೇಕು. ಸೋಲನ್ನು ಮುಂದಿನ ಗೆಲುವಿನ ಮೆಟ್ಟಿಲು ಎಂದು ತಿಳಿಯಬೇಕು ಎಂದರು.
ಪುಟ್‍ಬಾಲ್ ಕ್ರೀಡೆಗೆ ಕೇಂದ್ರ ಸರಕಾರ ಬಹಳಷ್ಟು ಪ್ರಾಮುಖ್ಯತೆ ನೀಡುತ್ತಿದೆ. ಏಷ್ಯನ್ ಕ್ರೀಡಾಕೂಟಗಳಲ್ಲಿ 7 ಪದಕಗಳನ್ನು ಪಡೆಯುವ ಮೂಲಕ ದೇಶದ ಹಿರಿಮೆಯನ್ನು ಹೆಚ್ಚಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರು ಕ್ರೀಡಾಪಟುಗಳಿಗೆ ಅನೇಕ ಸೌಲಭ್ಯ ಹಾಗೂ ಹಣಕಾಸಿನ ನೆರವು ನೀಡುತ್ತಿದ್ದಾರೆ. ಜಿಲ್ಲೆಯಲ್ಲಿಯೂ ಸಹ ಕ್ರೀಡಾಪಟುಗಳು ಹೆಚ್ಚಿಗೆ ಇದ್ದು, ರಾಜ್ಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಹೆಸರು ತಂದಿದ್ದಾರೆ ಎಂದರು.
ಬಹಳ ದಿನಗಳಿಂದ ಪುಟ್‍ಬಾಲ್ ಕ್ರೀಡಾಕೂಟಗಳು ಜಿಲ್ಲೆಯಲ್ಲಿ ನಡೆಯುತ್ತಿರುವುದು ಸಂತೋಷದ ವಿಷಯ. ರಾಜ್ಯಮಟ್ಟದ ಕ್ರೀಡೆಗಳು ಜಿಲ್ಲೆಯಲ್ಲಿ ನಡೆಯುತ್ತಿದ್ದು, ಪ್ರತಿಯೊಂದು ಕ್ರೀಡೆಗಳಿಗೆ ಬೆನ್ನು ತಟ್ಟುವ ಕೆಲಸ ಮಾಡುತ್ತಾ ಬಂದಿದೆ. ಈ ಭಾಗದಲ್ಲಿ ನಡೆದ ಪುಟ್‍ಬಾಲ್ ಪಂದ್ಯಾವಳಿಯಲ್ಲಿ ಜಯಶಾಲಿಯಾಗಿರಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಸರ್ಗ ಎಜ್ಯೂಕೇಶನಲ್ ಅಕಾಡೆಮಿಯ ಅಧ್ಯಕ್ಷ ಶ್ರೀನಿವಾಸಗೌಡ ಗೌಡರ ಮಾತನಾಡಿ ಕ್ರೀಡೆಗಳಲ್ಲಿ ಸೋಲು-ಗೆಲುವು ಮುಖ್ಯವಲ್ಲ ಕ್ರೀಡಾಸ್ಪೂರ್ತಿಯಿಂದ ಭಾಗವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಜಶೇಖರ ಪಟ್ಟಣಶೆಟ್ಟಿ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಗುರುಪಾದ ಡೂಗನವರ, ನಿಸರ್ಗ ಎಜ್ಯೂಕೇಶನ್ ಅಕಾಡೆಮಿಯ ಉಪಾದ್ಯಕ್ಷ ವಿ.ಬಿ.ನಡಮನಿ, ಪ್ರಾರ್ಥನಾ ಪ.ಪೂ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಪುರುಷೋತ್ತಮ ಬಿ.ವಿ, ಜಿಲ್ಲಾ ಪದವಿ ಪೂರ್ವ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಎಂ.ಕೆ.ಮುರಗೋಡ ಸೇರಿದಂತೆ ಇತರರು ಉಪಸ್ಥಿತರಿದ್ದರು.