ಕ್ರೀಡಾಸಂಘ: ಮಕ್ಕಳಿಗೆ ಬೇಸಿಗೆ ಶಿಬಿರ

ಕೋಲಾರ,ಏ,೧೨:ಕೋಲಾರ ಕ್ರೀಡಾ ಸಂಘದ ವತಿಯಿಂದ ನಡೆಯುತ್ತಿರುವ ೨೦೨೩ ನೇ ಸಾಲಿನ ಬೇಸಿಗೆ ತರಬೇತಿ ಶಿಬಿರದ ಮಕ್ಕಳು ನಗರ ಹೊರವಲಯದ ಟಮಕದಲ್ಲಿರುವ ಕರ್ನಾಟಕ ಅಗ್ನಿಶಾಮಕ ದಳದ ಕಛೇರಿಗೆ ಮಂಗಳವಾರ ಭೇಟಿ ನೀಡಿದ್ದು, ಮಕ್ಕಳಿಗೆ ಅಗ್ನಿ ಆಕಸ್ಮಿಕಗಳನ್ನು ತಡೆಯುವ ಕುರಿತು ಪ್ರಾತ್ಯಕ್ಷಿಕೆ ಮೂಲಕ ಅರಿವು ಮೂಡಿಸಲಾಯಿತು.
ಅಗ್ನಿ ಶಾಮಕ ದಳ ಕಚೇರಿಗೆ ಧಾವಿಸಿದ ನೂರಾರು ಚಿಣ್ಣರಿಗೆ ಅಗ್ನಿಶಾಮಕ ದಳದ ಉಪ ನಿರೀಕ್ಷಕ ಮುನಿರಾಜು ಅಗ್ನಿಶಾಮಕ ದಳದ ಕಾರ್ಯವಿಧಾನಗಳ ಬಗ್ಗೆ ಮಾಹಿತಿ ನೀಡಿದರು. ಬೆಂಕಿಯ ವಿಧಗಳು, ಅದು ಹುಟ್ಟಿಕೊಳ್ಳುವ ರೀತಿ, ಅವುಗಳನ್ನು ನಂದಿಸುವ ರೀತಿಯ ಬಗ್ಗೆ ಸವಿವರವಾಗಿ ತಿಳಿಸಿದರು. ಆಪತ್ಕಾಲದಲ್ಲಿ ಸಾರ್ವಜನಿಕರು ಹೇಗೆ ನಡೆದುಕೊಳ್ಳಬೇಕು, ಬೆಂಕಿ ಅವಘಡದ ಸಂಧರ್ಭದಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ತಿಳಿಸಿದರು.
ಅಗ್ನಿಶಾಮಕ ದಳದಲ್ಲಿ ಕಾರ್ಯನಿರ್ವಹಿಸುವ ವಿವಿಧ ಬಗೆಯ ಅಗ್ನಿಶಾಮಕ ವಾಹನಗಳ ಮತ್ತು ಅದರಲ್ಲಿರುವ ವಿವಿಧ ರೀತಿಯ ಉಕಕರಣಗಳನ್ನು ಮಕ್ಕಳಿಗೆ ಪ್ರತ್ಯಕ್ಷವಾಗಿ ತೋರಿಸಿ ಉಪಯೋಗಿಸುವ ವಿಧಾನಗಳ ಬಗ್ಗೆ ವಿವರಿಸಿದರು. ಈ ಸಂಧರ್ಭದಲ್ಲಿ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ಆರಿಸುವ ವಿಧಾನಗಳ ಗ್ಗೆ ಆಕರ್ಷಕ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಿದರು.
ಅಗ್ನಿಶಾಮಕ ದಳದ ಹಿರಿಯ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದು ಮಕ್ಕಳಿಗೆ ಅಗ್ನಿಶಾಮಕ ದಳದ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕೋಲಾರ ಕ್ರೀಡಾಸಂಘದ ತರಬೇತುದಾರರಾದ ಸುರೇಶ್ ಬಾಬು, ನವೀನ್, ,ಕ್ರೀಡಾ ಸಂಘದ ಹಿರಿಯ ತರಬೇತಿದಾರ ಮತ್ತು ಜಿಲ್ಲಾ ನೌಕರರ ಸಂಘದ ಉಪಾಧ್ಯಕ್ಷ ಪುರುಷೋತ್ತಮ, ಸಹಸದಸ್ಯರಾದ ಅಭಿರಾಮ್, ನಂದೀಶ್,ಇತರರು ಇದ್ದರು.