ಕ್ರೀಡಾಪಟು ಬಡಿಗೇರಗೆ ಪದಾಧಿಕಾರಿಗಳಿಂದ ಸನ್ಮಾನ

ಬ್ಯಾಡಗಿ,ಮಾ30: ತೆಲಂಗಾಣದ ಸರ?ಯಪೇಟನಲ್ಲಿ ನಡೆದ ರಾಷ್ಟ್ರಮಟ್ಟದ ಜ್ಯೂನಿಯರ್ ಕಬಡ್ಡಿಯಲ್ಲಿ ಜಿಲ್ಲೆಯಿಂದ ಪಾಲ್ಗೊಂಡು ಕೀರ್ತಿ ತಂದ ಸ್ವಗ್ರಾಮಕ್ಕೆ ಮರಳಿದ ಮೌನೇಶ್ ಬಡಿಗೇರಗೆ ಹಾವೇರಿ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಪದಾಧಿಕಾರಿಗಳು ಎಸ್‍ಜೆಜೆಎಂ ತಾಲೂಕಾ ಕ್ರೀಡಾಂಗಣದಲ್ಲಿ ಸ್ವಾಗತಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೋಶಾಧ್ಯಕ್ಷ ಗಂಗಣ್ಣ ಎಲಿ, ಕಳೆದ 5 ವರ್ಷಗಳಿಂದ ಜಿಲ್ಲೆಯಲ್ಲಿ ಇಂತಹ ಗೌರವಕ್ಕೆ ಯಾರೂ ಪಾತ್ರರಾಗಿರಲಿಲ್ಲ, ಬಹಳಷ್ಟು ಪ್ರತಿಭಾನ್ವಿತ ಕ್ರೀಡಾಪಟುಗಳು ಅವಕಾಶ ವಂಚಿತರಾಗಿದ್ದು, ಯಾವುದೇ ಕ್ರೀಡಾಪಟುಗಳು ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಪಾಲ್ಗೊಂಡಿರಲಿಲ್ಲ, ರಾಜ್ಯ ತಂಡದಲ್ಲಿ ಮೊದಲ ಏಳರಲ್ಲಿ ಸ್ಥಾನ ಪಡೆಯುವಂತಹ ಕ್ರೀಡಾಪಟುಗಳಿದ್ದರೂ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಅವಕಾಶ ಸಿಗದಂತೆ ನೋಡಿಕೊಂಡಿದ್ದಾಗಿ ಬೇಸರ ವ್ಯಕ್ತಪಡಿಸಿದರು.

ನಿವೃತ್ತ ಜಿಲ್ಲಾ ದೈಹಿಕ ಪರಿವೀಕ್ಷಕ ಬಿ.ಎಚ್.ಎನ್.ರಾವಳ ಮಾತನಾಡಿ, ಹಾವೇರಿ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಜಿಲ್ಲೆಯಲ್ಲಿನ ಸುಮಾರು 140ಕ್ಕೂ ಹೆಚ್ಚು ಕ್ರೀಡಾಪಟುಗಳಿಗೆ ರಾಷ್ಟಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಿದ್ದಲ್ಲದೇ ನೂರಕ್ಕೂ ಹೆಚ್ಚು ಪ್ರತಿಭಾನ್ವಿತರು ಕಬಡ್ಡಿ ಹೆಸರಿನಲ್ಲಿ ನೌಕರಿ ಗಿಟ್ಟಿಸಿದ್ದಾರೆ, ಅಂತೆಯೇ ಬಡ ಕುಟುಂಬದ ಹಿನ್ನೆಲೆಯುಳ್ಳ ಮೌನೇಶ್ ಬಡಿಗೇರ ಉತ್ತಮ ಅಟಗಾರನಾಗಿದ್ದು ಆತನ ಭವಿಷ್ಯ ಇನ್ನಷ್ಟು ಉಜ್ವಲವಾಗಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಪ್ರಭಾರಿ ಕ್ರೀಡಾಧಿಕಾರಿ ಎಚ್.ಬಿ.ದಾಸರ, ಕೋಚ್ ಮಂಜುಳ ಭಜಂತ್ರಿ, ಜಿಲ್ಲಾ ತೀರ್ಪುಗಾರ ಮಂಡಳಿಯ ಅಧ್ಯಕ್ಷ ಸಿ.ಜಿ.ಚಕ್ರಸಾಲಿ, ಎ.ಟಿ.ಪೀಠದ, ಎಂ.ಆರ್.ಕೋಡಿಹಳ್ಳಿ, ಬಸವರಾಜಪ್ಪ, ಎಸ್.ಎನ್.ಮಾಗೋಡ, ಸಂತೋಷ ಉದ್ಯೋಗಣ್ಣನವರ, ನಾಗರಾಜ ಹಾವನೂರ, ಕ್ರೀಡಾಪಟುಗಳಾದ ಮಹೇಶ ನೆಗಳೂರ, ಫಯ್ಯಾಜ್, ಹರೀಶ್, ನಾಗರಾಜ ಇನ್ನಿತರರು ಉಪಸ್ಥಿತರಿದ್ದರು