ಕ್ರೀಡಾಪಟುಗಳಲ್ಲಿ ಸ್ಪರ್ಧಾ ಮನೋಭಾವಕ್ಕೆ ಕರೆ


ಸಂಜೆವಾಣಿ ವಾರ್ತೆ
ಕಾರಟಗಿ, ಜ:19: ಯುವಕರು ಸದೃಢರಾಗಲು ಕ್ರೀಡಾಕೂಟ ಅತೀ ಮುಖ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಗ್ರಾಮೀಣ ಕ್ರಿಡಾಕೂಟ ಆಯೋಜನೆ ಮಾಡಲಾಗಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ನರಸಪ್ಪ ಎನ್ ಅವರು ಹೇಳಿದರು.
ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಗ್ರಾಮ ಪಂಚಾಯತ್ ನಿಂದ ಶುಕ್ರವಾರ ಆಯೋಜಿಸಿದ್ದ ಗ್ರಾಮೀಣ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ಹಾಗೂ ಉತ್ತೇಜಿಸುವ ಕೆಲಸ ಮಾಡಲಾಗುತ್ತಿದೆ. ಕ್ರೀಡಾಪಟುಗಳಲ್ಲಿ ಸ್ಪರ್ಧಾ ಮನೋಭಾವ ಇರಬೇಕು. ಜೊತೆಗೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು. ಯಾವುದೇ ದುಷ್ಚಟಗಳನ್ನು ಕಲಿಯದೇ ಉತ್ತಮ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ಗ್ರಾಪಂ ಅಧ್ಯಕ್ಷರಾದ ಶ್ವೇತಾ ದೇವರಾಜ ಅವರು ಮಾತನಾಡಿ, ಗೆಲುವು ಸೋಲು ಮುಖ್ಯ ಅಲ್ಲ. ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯವಾಗಿದೆ ಎಂದರು.
ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಸಾಯಿನಾಥ, ಗ್ರಾಪಂ ಅಧ್ಯಕ್ಷರಾದ ಶ್ವೇತಾ ದೇವರಾಜ, ಉಪಾಧ್ಯಕ್ಷರಾದ ದ್ಯಾವಮ್ಮ ಕನಕಪ್ಪ, ಸರ್ವ ಸದಸ್ಯರು, ಗ್ರಾಪಂ ಎಸ್ ಡಿಎ ಶಬ್ಬೀರ್, ಸಿಬ್ಬಂದಿಗಳಾದ ಪ್ರಕಾಶ ಸಜ್ಜನ್, ವೀರೇಶ, ಚಂದ್ರಕಲಾ ಸೇರಿ ಆರೋಗ್ಯ ಇಲಾಖೆ ಅಧಿಕಾರಿಗಳು, ಗ್ರಾಮದ ಮುಖಂಡರು ಇದ್ದರು.
ಕ್ರೀಡಾಪಟುಗಳ ಎಲ್ಲಿಲ್ಲದ ಉತ್ಸಾಹ
ಸಿದ್ದಾಪುರ ಗ್ರಾಮದ ಕ್ರೀಡಾಸಕ್ತರಿಗೆ ಎಲ್ಲಿಲ್ಲದ ಉತ್ಸಾಹ, ಎಲ್ಲರೂ ಬಣ್ಣ ಬಣ್ಣದ ತಮ್ಮ ಗುಂಪಿನ ಟೀಶರ್ಟ್ ತೊಟ್ಟು ಗ್ರಾಮೀಣ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ವಿಕಲಚೇತನರು ನಾವೇನು ಕಮ್ಮಿ ಇಲ್ಲ ಎಂಬಂತೆ ಮ್ಯೂಸಿಕಲ್ ಚೇರದ ಆಟ ಆಡಿ ಎಲ್ಲರ ಗಮನ ಸೆಳೆದರು. ಇದಕ್ಕೆಲ್ಲ ಕಾರಣ ಸಿದ್ದಾಪುರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಸಾಯಿನಾಥ, ಗ್ರಾಪಂ ಆಡಳಿತ ಮಂಡಳಿಯವರ ವಿಶೇಷ ಆಸಕ್ತಿಯಿಂದ ಗ್ರಾಮದಲ್ಲಿ ಕ್ರೀಡಾ ಹಬ್ಬದ ವಾತಾವರಣವೇ ಮೂಡಿತ್ತು. ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ನರಸಪ್ಪ ಎನ್ ಅವರು ಕಬಡ್ಡಿ ಆಡುವ ಮೂಲಕ ಕ್ರೀಡಾಪಟುಗಳನ್ನು ಹುರಿದುಂಬಿಸಿದರು.
ಇದಕ್ಕೂ ಮುನ್ನ ಗ್ರಾಮೀಣ ಕ್ರೀಡಾಕೂಟದ ಕ್ರೀಡಾಜ್ಯೋತಿ ಪಂಥ ಸಂಚಲನಕ್ಕೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಪಂ ಅಧ್ಯಕ್ಷರು ಜಂಟಿಯಾಗಿ ಚಾಲನೆ ನೀಡಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ನೂರಾರು ಕ್ರೀಡಾಪಟುಗಳೊಂದಿಗೆ ಪಥಸಂಚಲನ ಸಾಗಿತು.
ಗ್ರಾಮದ ಸರಕಾರಿ ಪ್ರೌಢಶಾಲೆ ಮೈದಾನದಲ್ಲಿ ಖೋಖೋ, ಕಬಡ್ಡಿ, ವಾಲಿಬಾಲ್ ಪಂದ್ಯಗಳು ನಡೆದವು. ಮಹಿಳೆಯರಿಗೆ ರನ್ನಿಂಗ್, ಕಬಡ್ಡಿ, ಮನೋರಂಜನೆ ಕ್ರೀಡೆಗಳು ನಡೆದವು. ಗ್ರಾಪಂ ಸದಸ್ಯರು ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸಿದರು. ಪುರುಷರ 19 ತಂಡಗಳು, ಮಹಿಳೆಯರ 5 ತಂಡಗಳು ಭಾಗವಹಿಸಿದ್ದವು.