ಕ್ರೀಡಾಚಟುವಟಿಕೆಗಳಿಂದ ದೈಹಿಕ, ಮಾನಸಿಕ ವೃದ್ಧಿ

ರಾಯಚೂರು,ಆ.೧೦-
ದೈಹಿಕ ಚಟುವಟಿಕೆಗಳು ಮತ್ತು ಕ್ರೀಡೆಗಳಲ್ಲಿ ಭಾಗವಹಿಸಿದರೆ ಆತ್ಮವಿಶ್ವಾಸ ಮತ್ತು ಕೌಶಲ್ಯ ಗುಣಗಳು ಬೆಳೆಸುತ್ತದೆ ಎಂದು ಎಲ್‌ವಿಡಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಪವನ್ ಕುಮಾರ ಸುಖಾಣಿ ತಿಳಿಸಿದರು.
ನಗರದ ಎಲ್‌ವಿಡಿ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಪದವಿಪೂರ್ವ ಕಾಲೇಜು ಹಾಗೂ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಪುರುಷರಿಗೆ ಕ್ರಿಕೆಟ್ ಹಾಗೂ ಮಹಿಳೆಯರಿಗೆ ಆಯೋಜಿಸಿದ್ದ ತ್ರೋಬಾಲ್ ಪಂದ್ಯಾವಳಿ ಉದ್ಘಾಟಿಸಿ ನಂತರ ಮಾತನಾಡಿ, ವಿದ್ಯಾರ್ಥಿಗಳ ಮಾನಸಿಕ, ದೈಹಿಕ ಬೆಳವಣಿಗೆಗೆ ದೈಹಿಕ ಶಿಕ್ಷಣ ಮುಖ್ಯವಾಗಿದೆ. ವಿದ್ಯಾರ್ಥಿಗಳ ಭವಿಷ್ಯದಲ್ಲಿ ನೆರವಾಗುತ್ತದೆ ಹಾಗೂ ಸಕರಾತ್ಮಕ ಚಿಂತನೆ ಮೂಡಿಸುತ್ತದೆ ಎಂದು ಹೇಳಿದರು.
ಎಲ್‌ವಿಡಿ ಕಾಲೇಜಿನ ಆಡಳಿತ ಮಂಡಳಿ ಕಾರ್ಯದರ್ಶಿ ಜಟ್ರಂ ಶ್ರೀನಿವಾಸ ಮಾತನಾಡಿ, ಮಾನವರ ವ್ಯಕ್ತಿತ್ವದ ವಿಕಾಸನಕ್ಕೆ ಕ್ರೀಡೆಗಳು ಪ್ರಮುಖವಾಗಿದೆ. ಕ್ರೀಡೆಗಳಿಂದ ಮನುಷ್ಯನು ಸ್ವಾವಲಂಬಿಯಾಗುತ್ತಾನೆ ಮತ್ತು ಜೀವನದಲ್ಲಿ ಯಶಸ್ಸನ್ನು ಸಾಧಿಸುತ್ತಾನೆ ಎಂದು ಹೇಳಿದರು.
ತಾರಾನಾಥ ಶಿಕ್ಷಣ ಸಂಸ್ಥೆಯ ಕ್ರೀಡಾ ಸಮಿತಿಯ ಅಧ್ಯಕ್ಷ ವಿಜಯಕುಮಾರ ಮಟಮಾರಿ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಸಮಯವನ್ನು ನಿರ್ವಹಿಸಲು ಮತ್ತು ಆದ್ಯತೆಯ ಕ್ಷೇತ್ರಗಳನ್ನು ಹೊಂದಿಸಲು ಸಹಾಯ ಮಾಡುತ್ತದೆ. ಜೊತೆಗೆ ಪ್ರಪಂಚದ ಬಗ್ಗೆ ಅವರ ದೃಷ್ಟಿಕೋನವನ್ನು ವಿಶಾಲವಾಗಿ ವಿಸ್ತರಿಸುತ್ತದೆ. ಆಸಕ್ತ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸಾಧನೆ ಮಾಡಲು ಮುಂದೆ ಬಂದರೆ ಸಂಸ್ಥೆಯಿಂದ ಅಗತ್ಯ ಪ್ರೋತ್ಸಾಹ ನೀಡಲಾಗುವುದು ಎಂದರು.
ಎಲ್‌ವಿಡಿ ಕಾಲೇಜಿನ ದೈಹಿಕ ನಿರ್ದೇಶಕಿ ಡಾ. ತಾಯಮ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು.
ಒಟ್ಟು ಆರು ತಂಡಗಳು ಭಾಗವಹಿಸಿದ್ದು, ಎಲ್‌ವಿಡಿ ಮಹಾವಿದ್ಯಾಲಯ ಪ್ರಥಮ ಸ್ಥಾನ ಪಡೆದರೆ, ಸಿಎಮ್‌ಎನ್ ಕಾಲೇಜು ದ್ವಿತೀಯ ಸ್ಥಾನ ಪಡೆಯಿತು.
ಪುರುಷರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಆರು ತಂಡಗಳ ಪೈಕಿ ಎಲ್‌ವಿಡಿ ಮಹಾವಿದ್ಯಾಲಯ ೪೬ ರನ್ ಗಳಿಸಿ ವಿಜೇತರಾಗಿ ಪ್ರಥಮ ಸ್ಥಾನ ಪಡೆದರೆ, ಬಿಆರ್‌ಬಿ ಕಾಲೇಜು ೪೫ರನ್ ಗಳಿಸಿ ದ್ವಿತೀಯ ಸ್ಥಾನ ಪಡೆದಿದೆ.
ಕ್ರಿಕೆಟ್ ಪಂದ್ಯಾವಳಿಯಲ್ಲಿ ಬಿಆರ್‌ಬಿ ಕಾಲೇಜಿನ ವಿದ್ಯಾರ್ಥಿ ಬೆಸ್ಟ್ ಬ್ಯಾಟ್ಸ್ ಮನ್ ಆಗಿ ಅಕ್ಷಯ, ಎಲ್ ವಿಡಿ ಕಾಲೇಜಿನ ವೀರೇಶ ಬೆಸ್ಟ್ ಬೌಲರ್ ಹಾಗೂ ಸುನಿಲ್ ಪಂದ್ಯ ಶ್ರೇಷ್ಟ, ಸರಣಿ ಶ್ರೇಷ್ಟರಾಗಿ ಅನಿಲ್ ಗೌರವಸ್ವೀಕರಿಸಿದರು. ಕ್ರಿಕೆಟ್ ಪಂದ್ಯಾವಳಿಯ ತೀರ್ಪುಗಾರರಾಗಿ ಸಂಜುನಾಯಕ, ಕೌಶಲ್, ರಾಹುಲ್ ಹಾಗೂ ದೈಹಿಕ ಶಿಕ್ಷಣ ಸಮಿತಿಯ ಸದಸ್ಯ ಹುಸೇನಪ್ಪ, ಹನುಮಂತರಾಯ್ ನಾಯಕ ಹಾಗೂ ಪ್ರವೀಣ ಸ್ಕೋರರ್ ಆಗಿ ಕಾರ್ಯ ನಿರ್ವಹಿಸಿದರು.
ಕಾಲೇಜಿನ ಪ್ರಾಚಾರ್ಯ ಡಾ. ವೆಂಕಟೇಶ ಬಿ ದೇವರು ಅಧ್ಯಕ್ಷತೆ ವಹಿಸಿದ್ದರು. ಎಸ್‌ಆರ್‌ಪಿಎಸ್ ಕಾಲೇಜಿನ ದೈಹಿಕ ನಿರ್ದೇಶಕ ಮಲ್ಲಪ್ಪ, ಬಿಆರ್‌ಬಿ ಕಾಲೇಜಿನ ದೈಹಿಕ ನಿರ್ದೇಶಕ ಸಂಪತ್ ಅಂಗಡಿ, ಎಸ್‌ಎಸ್‌ಆರ್‌ಜಿ ಕಾಲೇಜಿನ ದೈಹಿಕ ನಿರ್ದೇಶಕ ವೀರೇಶ ನಾಯಕ, ದೈಹಿಕ ಶಿಕ್ಷಣ ಸಮಿತಿಯ ಸದಸ್ಯರಾದ ಡಾ. ಆಂಜನೇಯ, ಹುಸೇನಪ್ಪ, ಡಾ. ಮಂಜುನಾಥ, ರಾಘವೇಂದ್ರ ಕುಲಕರ್ಣಿ, ವಿಮಲಾ ಇದ್ದರು.
ಸಂಗೀತ ವಿಭಾಗದ ಮುಖ್ಯಸ್ಥ ಸಿಎನ್ ರಾಘವೇಂದ್ರ ಪ್ರಾರ್ಥಿಸಿದರು. ದೈಹಿಕ ಶಿಕ್ಷಣ ಸಮಿತಿಯ ಸದಸ್ಯೆ ಗಾಯಿತ್ರಿ ಸ್ವಾಗತಿಸಿದರು. ಡಾ.ಅರುಣಾ ಹಿರೇಮಠ್ ನಿರೂಪಿಸಿದರು. ಹನುಮಂತರಾಯ ನಾಯಕ ವಂದಿಸಿದರು.