ಕ್ರೀಡಾಕೂಟ ಯಶಸ್ಸಿಗೆ ಸಹಕಾರಕ್ಕೆ ಬೆಲೆ ಕಟ್ಟಲಾಗದು

ಕೋಲಾರ,ಮಾ,೪:ಜಿಲ್ಲೆಯ ದೈಹಿಕ ಶಿಕ್ಷಕರು ನಿಷ್ಪಕ್ಷಪಾತ ತೀರ್ಪಿನ ಮೂಲಕ ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದಂತೆ ಸರ್ಕಾರಿ ನೌಕರರ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ, ಅವರ ಪರಿಶ್ರಮಕ್ಕೆ ಬೆಲೆಕಟ್ಟಲಾಗದು ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ತಿಳಿಸಿದರು.
ನಗರದ ಪವನ್ ಕಾಲೇಜು ಮೈದಾನದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಕ್ರೀಡಾಕೂಟ ನಡೆಸಿಕೊಟ್ಟ ದೈಹಿಕ ಶಿಕ್ಷಕರಿಗೆ ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ಕೊಂರಗೊಂಡಹಳ್ಳಿ ನಾರಾಯಣಸ್ವಾಮಿ ಅವರು ಕೊಡುಗೆಯಾಗಿ ನೀಡಿದ್ದ ಟ್ರ್ಯಾಕ್‌ಸೂಟ್ ವಿತರಿಸಿ ಅವರು ಮಾತನಾಡುತ್ತಿದ್ದರು.
ಸರ್ಕಾರಿ ನೌಕರರ ಕ್ರೀಡಾಕೂಟ, ಸಮ್ಮೇಳನ, ಪ್ರತಿಭಾ ಪುರಸ್ಕಾರ ಸೇರಿದಂತೆ ಜಿಲ್ಲಾಮಟ್ಟದ ಎಲ್ಲಾ ಕಾರ್ಯಕ್ರಮಗಳ ಯಶಸ್ಸಿನ ಹಿಂದೆ ಶಿಕ್ಷಕ ಗೆಳೆಯರ ಬಳಗ ಬೆನ್ನೆಲುಬಾಗಿ ನಿಂತಿದೆ, ನಾನು ಅಧ್ಯಕ್ಷನಾದ ನಂತರ ಸತತ ೪ ವರ್ಷಗಳಿಂದ ದೈಹಿಕ ಶಿಕ್ಷಕರಿಗೆ ಟ್ರ್ಯಾಕ್ ಸೂಟ್ ಕೊಡುಗೆ ನೀಡುತ್ತಿರುವ ಬಳಗದ ಅಧ್ಯಕ್ಷರಿಗೆ ಸಂಘದ ಪರವಾಗಿ ಧನ್ಯವಾದಗಳು ಎಂದರು.
ಕ್ರೀಡಾಕೂಟ ಎಂದ ಕೂಡಲೇ ನಿಷ್ಪಕ್ಷಪಾತ ತೀರ್ಪು, ಹಾಗೂ ದೈಹಿಕ ಶಿಕ್ಷಕರು ನೆನಪಾಗುತ್ತಾರೆ, ಸಾವಿರಾರು ಕ್ರೀಡಾಪಟುಗಳು ಭಾಗವಹಿಸುವ ಜಾಗದಲ್ಲಿ ಯಾವುದೇ ಗೊಂದಲಕ್ಕೆ ಅವಕಾಶ ನೀಡದೇ ಕ್ರೀಡಾಸ್ಪೂರ್ತಿಯೊಂದಿಗೆ ನೌಕರರ ಮನಸ್ಸಿಗೆ ಒಪ್ಪುವ ರೀತಿ ತೀರ್ಪು ನೀಡಿರುವ ಅವರ ಪರಿಶ್ರಮ ಶ್ಲಾಘನೀಯ ಎಂದರು.
ದೈಹಿಕ ಶಿಕ್ಷಕರಿಗೆ ನಾರಾಯಣಸ್ವಾಮಿ ಅವರು ಟ್ರ್ಯಾಕ್ ಸೂಟ್ ಹಾಗೂ ಜಿಲ್ಲಾ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಗೀತಾ ವಿಜ್ಹಿಲ್ ಕೊಡುಗೆಯಾಗಿ ನೀಡಿ ಅವರ ಸೇವೆಯನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಅಜಯಕುಮಾರ್,ರಾಜ್ಯಪರಿಷತ್ ಸದಸ್ಯ ಗೌತಮ್, ಖಜಾಂಚಿ ವಿಜಯ್,ಕಾರ್ಯಾಧ್ಯಕ್ಷ ಎನ್.ಶ್ರೀನಿವಾಸರೆಡ್ಡಿ, ಗೌರವಾಧ್ಯಕ್ಷ ರವಿಚಂದ್ರ, ನಿಕಟಪೂರ್ವ ಅಧ್ಯಕ್ಷರುಗಳಾದ ಕೆ.ಎನ್.ಮಂಜುನಾಥ್,ಕೆ.ಬಿ.ಅಶೋಕ್, ಉಪಾಧ್ಯಕ್ಷರಾದ ನಂದೀಶ್,ಮಂಜುನಾಥ್,ಕ್ರೀಡಾಸಾಂಸ್ಕೃತಿಕ ಸಂಘದ ಎಂ.ನಾಗರಾಜ್, ಶಿಕ್ಷಕ ಶ್ರೀನಿವಾಸಮೂರ್ತಿ,ಡಿಪಿಒ ಮಂಜುನಾಥ್, ಮುರಳಿಮೋಹನ್ ಮತ್ತಿತರರಿದ್ದರು.