ಕ್ರೀಡಾಕೂಟದಲ್ಲಿ ಪಕ್ಷಪಾತ ಸಲ್ಲದು

ಹುಳಿಯಾರು, ಆ. ೮- ತೀರ್ಪುಗಾರರು ನಮ್ಮ ಶಾಲೆ, ನಮ್ಮ ಮಕ್ಕಳು ಎಂದು ಪಕ್ಷಪಾತ ಮಾಡದೆ ಉತ್ತಮವಾಗಿ ಆಡುವವರನ್ನೇ ಗುರುತಿಸಿ ತೀರ್ಪು ನೀಡುವ ಮೂಲಕ ಅರ್ಹ ಪ್ರತಿಭೆಗಳು ಬೆಳೆಯಲು ಅನುವು ಮಾಡಿಕೊಡಬೇಕು ಎಂದು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್. ಪರಶಿವಮೂರ್ತಿ ಹೇಳಿದರು.
ಹುಳಿಯಾರಿನ ಎಂಪಿಎಸ್ ಶಾಲಾ ಮೈದಾನದಲ್ಲಿ ನಂದಿಹಳ್ಳಿ ಹಿರಿಯ ಪ್ರಾಥಮಿಕ ಪಾಠಶಾಲೆ ವತಿಯಿಂದ ಏರ್ಪಡಿಸಿದ್ದ ೨೦೨೩-೨೪ ನೇ ಸಾಲಿನ ಹುಳಿಯಾರು ಎ ವಿಭಾಗದ ಹೋಬಳಿ ಮಟ್ಟದ ಹಿರಿಯ ಪ್ರಾಥಮಿಕ ಪಾಠಶಾಲೆಗಳ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಬೆಸ್ಕಾಂನ ಎಇಇ ಎನ್.ಬಿ.ಗವೀರಂಗಯ್ಯ ಮಾತನಾಡಿ, ಕ್ರೀಡೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಅದನ್ನು ಸಮವಾಗಿ ಸ್ವೀಕರಿಸುವ ಮನೋಭಾವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಶಿಕ್ಷಣಕ್ಕೆ ಪೂರಕವಾಗಿ ಸರ್ಕಾರವೂ ಸಹ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ಕ್ರೀಡೆಗಳಿಗೂ ಸಹ ಉತ್ತೇಜನ ನೀಡುತ್ತಿದೆ. ವಿದ್ಯಾರ್ಥಿಗಳು ಅವುಗಳನ್ನು ಬಳಕೆ ಮಾಡಿಕೊಂಡು ಉತ್ತಮ ಕ್ರೀಡಾಪಟುಗಳಾಗಬೇಕು ಎಂದು ಸಲಹೆ ನೀಡಿದರು.
ಚಿಕ್ಕನಾಯಕನಹಳ್ಳಿ ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ್ ಮಾತನಾಡಿ, ಕ್ರೀಡೆ ಕೇವಲ ಬಹುಮಾನಕ್ಕೆ ಸೀಮಿತವಲ್ಲ. ಶಾಲಾ ಮಕ್ಕಳು ಪ್ರಾಥಮಿಕ ಮತ್ತು ಪ್ರೌಢಾವಸ್ಥೆಯಲ್ಲಿ ಕ್ರೀಡೆಯಲ್ಲಿ ಹೆಚ್ಚು ಭಾಗವಹಿಸುವುದರ ಮೂಲಕ ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ವೃದ್ಧಿಸಿಕೊಳ್ಳಬೇಕು. ಇದರಿಂದ ಮುಂದಿನ ದಿನಗಳಲ್ಲಿ ಉತ್ತಮ ಕ್ರೀಡಾಪಟುಗಳಾಗುವ ಜತೆಗೆ ಆರೋಗ್ಯ ಉತ್ತಮವಾಗಿರುತ್ತದೆ. ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವವರು ಸೋಲು-ಗೆಲುವು ಎರಡನ್ನೂ ಸ್ವೀಕರಿಸಿ ಕ್ರೀಡಾಸ್ಫೂರ್ತಿ ಮೆರೆಯೋಣ ಎಂದರು.
ಪ.ಪಂ. ಉಪಾಧ್ಯಕ್ಷೆ ಶೃತಿಸನತ್ ಮಾತನಾಡಿ, ಚಿಕ್ಕಂದಿನಿಂದಲೇ ಕ್ರೀಡೆಯಲ್ಲಿ ಆಸಕ್ತಿ ಮೂಡಿಸಿಕೊಂಡು, ಶಿಕ್ಷಣದ ಜತೆಗೆ ಅಭ್ಯಾಸ ಮಾಡಬೇಕು. ಆಗ ಮಾತ್ರ ಸಾಧನೆಗೆ ಹತ್ತಿರವಾಗಬಹುದು. ಹಳ್ಳಿ ವಿದ್ಯಾರ್ಥಿಗಳು ಯಾವುದರಲ್ಲೂ ಕಡಿಮೆಯಿಲ್ಲ ಎಂಬುದನ್ನು ಸಾಬೀತು ಮಾಡಲು ಈ ಕ್ರೀಡಾಕೂಟ ವೇದಿಕೆಯಾಗಿದೆ. ಇದನ್ನು ಸದ್ಬಳಕೆ ಮಾಡಿಕೊಂಡು ತಮ್ಮ ಊರು, ತಮ್ಮ ಶಾಲೆಗೆ ಕೀರ್ತಿ ತನ್ನಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ನಂದಿಹಳ್ಳಿ ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಗವೀರಂಗಯ್ಯ, ಇಸಿಒ ಹನುಮಂತರಾಯಪ್ಪ, ತಾಲ್ಲೂಕು ದೈಹಿಕ ಪರಿವೀಕ್ಷಕರಾದ ಕೇಶವಮೂರ್ತಿ, ಕೆಪಿಎಸ್ ಶಾಲೆಯ ಪ್ರಾಚಾರ್ಯ ಕೃಷ್ಣಮೂರ್ತಿ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ರಾಜಕುಮಾರ್, ಗ್ರಾ.ಪಂ. ಸದಸ್ಯ ದೇವರಾಜು, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷರಾದ ಜಯಣ್ಣ, ಲಕ್ಷ್ಮೀಬಾಯಿ, ನಿವೃತ್ತ ಮುಖ್ಯ ಶಿಕ್ಷಕ ಪಿ.ಬಿ.ನಂದವಾಡಗಿ, ಮಾಜಿ ಕಾರ್ಯದರ್ಶಿ ಈರಸಿದ್ದಯ್ಯ, ನಂದಿಹಳ್ಳಿ ಶಾಲೆಯ ಮುಖ್ಯ ಶಿಕ್ಷಕ ರಂಗಧಾಮಯ್ಯ ಮತ್ತಿತರರು ಉಪಸ್ಥಿತರಿದ್ದರು.