ಕ್ರಿಶ್ಚಿಯನ್ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆಗ್ರಹ

ಬೀದರ್:ಜು.7: ಕ್ರೈಸ್ತರ ಅಭಿವೃದ್ಧಿಗಾಗಿ ರಾಜ್ಯದಲ್ಲಿ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮ ಇಲ್ಲವೇ ಮಂಡಳಿ ರಚಿಸಬೇಕು ಎಂದು ಜಿಲ್ಲೆಯ ಕ್ರಿಶ್ಚಿಯನ್ ಸಮುದಾಯದ ಮುಖಂಡರು ಆಗ್ರಹಿಸಿದ್ದಾರೆ.

ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರೂ ಆದ ಇಂಡಿಯನ್ ಕ್ರಿಶ್ಚಿಯನ್ ವೆಲ್‍ಫೇರ್ ಅಸೋಸಿಯೇಷನ್ ರಾಜ್ಯ ಅಧ್ಯಕ್ಷ ಸಂಜಯ್ ಜಾಗೀರದಾರ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಿಯೋಗದಲ್ಲಿ ಸಚಿವರಾದ ಜಮೀರ್ ಅಹಮ್ಮದ್ ಖಾನ್, ಕೆ.ಜೆ. ಜಾರ್ಜ್, ಈಶ್ವರ ಖಂಡ್ರೆ ಹಾಗೂ ರಹೀಂಖಾನ್ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.

ರಾಜ್ಯ ಬಜೆಟ್‍ನಲ್ಲಿ ಕ್ರಿಶ್ಚಿಯನ್ ನಿಗಮ ಸ್ಥಾಪನೆ ಘೋಷಣೆ ಮಾಡಬೇಕು. ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗೆ ವಿವಿಧ ಯೋಜನೆ ರೂಪಿಸಲು ನಿಗಮಕ್ಕೆ ರೂ. 500 ಕೋಟಿ ಅನುದಾನ ಒದಗಿಸಬೇಕು ಎಂದು ಬೇಡಿಕೆ ಮಂಡಿಸಿದರು.

ಸದ್ಯ ಕ್ರಿಶ್ಚಿಯನ್ ಅಭಿವೃದ್ಧಿ ಸಮಿತಿ ಅಸ್ತಿತ್ವದಲ್ಲಿ ಇದೆ. ಆದರೆ, ನಿಗಮ ಸ್ಥಾಪಿಸಿದರೆ ಕ್ರಿಶ್ಚಿಯನ್ ವಿದ್ಯಾರ್ಥಿಗಳಿಗೆ ಶಿಷ್ಯವೇತನ, ಶೈಕ್ಷಣಿಕ ಸಾಲ, ಸಮುದಾಯದವರಿಗೆ ಸ್ವ ಉದ್ಯೋಗಕ್ಕೆ ಸಾಲ ಸೇರಿದಂತೆ ವಿವಿಧ ಯೋಜನೆಗಳು ಜಾರಿಗೊಳ್ಳುತ್ತವೆ. ಇದರಿಂದ ಸಮುದಾಯದ ಅಭಿವೃದ್ಧಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಕ್ರಿಶ್ಚಿಯನ್ ಸಮುದಾಯದವರು ಸ್ವಾತಂತ್ರ್ಯ ಬಂದಾಗಿನಿಂದಲೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತ ಬಂದಿದ್ದಾರೆ. ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಹೀಗಾಗಿ ನಿಗಮ ರಚಿಸಿ ಕ್ರಿಶ್ಚಿಯನ್ ಸಮುದಾಯದ ಹಿತ ರಕ್ಷಿಸಬೇಕು ಎಂದು ಒತ್ತಾಯಿಸಿದರು.

ತಮ್ಮ ಮನವಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅಲ್ಪಸಂಖ್ಯಾತರ ಹಾಗೂ ವಕ್ಫ್ ಸಚಿವ ಜಹೀರ್ ಅಹಮ್ಮದ್ ಖಾನ್ ಅವರು ನಿಗಮ ರಚನೆಗೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಸಂಜಯ್ ಜಾಗೀರದಾರ್ ತಿಳಿಸಿದ್ದಾರೆ.

ಫಾದರ್ ವಿಲ್ಸನ್, ಪ್ರಮುಖರಾದ ಜೀವನ್ ಜಾಗೀರದಾರ್, ಜಾಕೋಬ್ ಮುಸ್ತಾಪುರಕರ್, ಸುರೇಶ ದೊಡ್ಡಿ, ರಮೇಶ ಕಟ್ಟಿತೂಗಾಂವ್, ಪಿಂಟು ಜಾಗೀರದಾರ್, ಸಾಲೋಮನ್, ಡೀನ್ ಸ್ಟಿವನ್‍ಸನ್, ರವಿ ಗುಪ್ತಾ ಮೊದಲಾದವರು ನಿಯೋಗದಲ್ಲಿ ಇದ್ದರು.