ಕ್ರಿಯಾಶೀಲ ವ್ಯಕ್ತಿತ್ವದ ಮಂಜುನಾಥ್ ಕುರ್ಕಿಗೆ ಮತ್ತೊಮ್ಮೆ ಗೆಲುವಾಗಲಿ

ದಾವಣಗೆರೆ.ಏ.೩: ಪ್ರಾಮಾಣಿಕತೆ, ಬದ್ಧತೆ, ನಿಷ್ಠೆಗೆ ಹೆಸರಾದ ಕನ್ನಡ ಪರ ಕಳಕಳಿಯ ಕ್ರೀಯಾಶೀಲ ವ್ಯಕ್ತಿತ್ವದ ಡಾ. ಮಂಜುನಾಥ್ ಕುರ್ಕಿಯವರು ಮತ್ತೊಮ್ಮೆ ಗೆಲ್ಲಬೇಕು ಎಂದು ಸಾಹಿತಿ ಎನ್. ಟಿ ಎರ್ರಿಸ್ವಾಮಿ ಆಶಿಸಿದರು. 
ಕನ್ನಡ ಸಾಹಿತ್ಯ ಪರಿಷತ್ತಿನ ದಾವಣಗೆರೆ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಎರಡನೇ ಬಾರಿಗೆ ಆಯ್ಕೆ ಬಯಸಿ  ನಾಮಪತ್ರ ಸಲ್ಲಿಸಿದ ಡಾ. ಮಂಜುನಾಥ್ ಕುರ್ಕಿಯವರ ಪರ ಅವರ ಅಭಿಮಾನಿಗಳಿಂದ ನಗರದ ಅಪೂರ್ವ ಹೊಟೇಲ್ ನಲ್ಲಿ ಆಯೋಜಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಾತ್ಯಾತೀತ ನಿಲುವಿನ ಮಂಜುನಾಥ್ ಕುರ್ಕಿಯವರ ಸೇವೆ ಮುಂದುವರಿಯಲು ಅವರನ್ನು ಮತ್ತೊಮ್ಮೆ ಗೆಲ್ಲಿಸಲು ಶ್ರಮಿಸೋಣ ಎಂದು ಅಜೀವ ಸದಸ್ಯರಲ್ಲಿ ಮನವಿ ಮಾಡಿದರು. ಅವರು ಎರಡನೇ ಬಾರಿಗೆ ಸ್ಪರ್ಧಿಸುತ್ತಿರುವ ಕುರಿತು ಕೆಲವರಲ್ಲಿ ಅಸಮಾಧಾನ ಇರಬಹುದು. ಆದರೆ ಅವರನ್ನೇ ನಾವು ಮತ್ತೊಮ್ಮೆ ಏಕೆ ಆಯ್ಕೆ ಮಾಡಬೇಕಿದೆ ಎಂಬುದಕ್ಕೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನವನ್ನು ದಾವಣಗೆರೆಯಲ್ಲೇ ಆಯೋಜಿಸಲು ಕನಸು ಕಂಡಿರುವ ಮಂಜುನಾಥ್ ಕುರ್ಕಿಯವರು ಅದಕ್ಕಾಗಿ ಕಳಕಳಿಯಿಂದ ಶ್ರಮಿಸಿದ್ದಾರೆಂದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಕಸಾಪ ನಿರಟಪೂರ್ವ ಅಧ್ಯಕ್ಷ ಎ. ಆರ್. ಉಜ್ಜನಪ್ಪ, ಕನ್ನಡಪರ ಹೋರಾಟಗಾರರಾದ ನಾಗೇಂದ್ರ ಬಂಡಿಕರ್, ಪ್ರೊ. ಮುರಿಗೇಂದ್ರಪ್ಪ,ಮಾಜಿ ಜಿಪಂ ಸದಸ್ಯ ಲಕ್ಷ್ಮಣ್ , ನ್ಯಾಮತಿ ತಾಲ್ಲೂಕು ಕಸಾಪ ಅಧ್ಯಕ್ಷರಾದ ನಿಜಲಿಂಗಪ್ಪ, ಜಗಳೂರು ಕಸಾಪ ಅಧ್ಯಕ್ಷರಾದ ಹಜರತ್ ಅಲಿ, ಪ್ರೌಢ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಡಿ. ಹಾಲಪ್ಪ, ಮಂಜುನಾಥ್ ರೆಡ್ಡಿ, ರೈತ ಮುಖಂಡ ಲಿಂಗರಾಜು, ಜಿ. ಆರ್ ಷಣ್ಮುಖಪ್ಪ , ವಿಜಯಲಕ್ಷ್ಮೀ ಅಕ್ಕಿ, ಎ. ಕೆ. ಭೂಮೇಶ್ ಹರಿಹರ, ಬಿ. ದಿಳ್ಳೆಪ್ಪ, ಎನ್. ಎಸ್. ರಾಜು ಮತ್ತಿತರರು ಮಂಜುನಾಥ್ ಕುರ್ಕಿಯವರ ಗೆಲುವಿಗೆ ಶ್ರಮಿಸುವುದಾಗಿ ಭರವಸೆ ನೀಡಿ ಬೆಂಬಲ ಘೋಷಿಸಿದರು. ದಾಗಿನಕಟ್ಟೆ ಪರಮೇಶ್ವರಪ್ಪ, ಗಂಗಾಧರ ಬಿ ಎಲ್ ನಿಟ್ಟೂರ್ ಮತ್ತಿತರರು ಅಭ್ಯರ್ಥಿಯ ಪರವಾಗಿ ಮಾತನಾಡಿ ಮತಯಾಚಿಸಿದರು. ನಾಮಪತ್ರ ಸಲ್ಲಿಕೆ ವೇಳೆ ಮಾಜಿ ಮೇಯರ್ ವಸಂತಕುಮಾರ್, ಪತ್ರಕರ್ತ ಬಿ. ಎನ್. ಮಲ್ಲೇಶ್, ವಿಕರವೇ ರಾಜ್ಯಾಧ್ಯಕ್ಷ ಕೆ. ಜಿ ಯಲ್ಲಪ್ಪ, ಸಾಹಿತಿಗಳಾದ ಪಾಪುಗುರು, ಭಾನುವಳ್ಳಿ ಅಣ್ಣಪ್ಪ, ಕುಂದೂರು ಮಂಜಪ್ಪ, ಓಂಕಾರಯ್ಯ ತವನಿಧಿ ಮತ್ತಿತರರಿದ್ದರು.