ಕ್ರಿಯಾಶೀಲವಾದರೆ ಗ್ರಾಮೀಣ ಪ್ರದೇಶದಲ್ಲಿ ಕೊರೋನಾ ನಿಗ್ರಹ ಸಾಧ್ಯ

ಬಂಟ್ವಾಳ, ಮೇ ೨೨- ಗ್ರಾಮಪಂಚಾಯತ್ ಗಳ ಟಾಸ್ಕ್ ಫೋರ್ಸ್ ಸಮಿತಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡಾಗ ಮಾತ್ರ ಗ್ರಾಮೀಣ ಪ್ರದೇಶದಲ್ಲಿ ಕೊರೋನಾ ನಿಗ್ರಹ ಸಾಧ್ಯ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು.
ಅವರು ಶುಕ್ರವಾರ ವಿಟ್ಲಪಡ್ನೂರು ಗ್ರಾ.ಪಂ.ನಲ್ಲಿ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ತಾಲೂಕಿನಲ್ಲಿ ಜನಜಾಗೃತಿಯಿಂದ ತೊಡಗಿ, ಲಸಿಕೆ ನೀಡುವಿಕೆ ವಿಚಾರದಲ್ಲಿಯೂ ಸಮಿತಿ ಹೆಚ್ಚು ಮುತುವರ್ಜಿ ವಹಿಸುವಂತೆ ಅವರು ಮನವಿ ಮಾಡಿದರು. ಹೊರರಾಜ್ಯದಿಂದ ಬಂದವರಲ್ಲಿ ಹೆಚ್ಚಿನ ಫಾಸಿಟಿವ್ ಪ್ರಕರಣ ವರದಿಯಾಗಿದ್ದು, ಬೇರೆ ಊರುಗಳಿಂದ ಬಂದವರ ಕುರಿತಾಗಿ ಮುಂದಿನ ದಿನಗಳಲ್ಲಿಯೂ ನಿಗಾವಹಿಸಿ ಕ್ವಾರಂಟೈನ್ ಗೆ ಒಳಪಡಿಸುವಂತೆ ಶಾಸಕರು ಸೂಚನೆ ನೀಡಿದರು.
ತಹಶೀಲ್ದಾರ್ ರಶ್ಮಿ ಎಸ್. ಆರ್. ಮಾತನಾಡಿ, ಲಸಿಕೆ ಪಡೆಯದೇ ಇರುವವರು ನೋಂದಣಿ ಮಾಡಿಕೊಂಡ ಬಳಿಕವಷ್ಟೇ ಪ್ರಥಮ ಲಸಿಕೆ ನೀಡಲಾಗುತ್ತದೆ, ಈ ಕುರಿತಾಗಿ ಹೆಚ್ಚಿನ ಪ್ರಚಾರ ಅಗತ್ಯ ಎಂದು ತಿಳಿಸಿದರು.
ತಾ.ಪಂ.ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಮಾತನಾಡಿ, ಗ್ರಾಮಮಟ್ಟದಲ್ಲಿ ಟಾಸ್ಕ್ ಫೋರ್ಸ್ ಸಮಿತಿಯ ಜವಾಬ್ದಾರಿ ಮಹತ್ತರವಾಗಿದ್ದು, ಕೋರೋನಾ ಸೋಂಕಿತ ರಿಗೆ ಅಗತ್ಯ. ನೆರವು ಒದಗಿಸಬೇಕು, ವಾರಕ್ಕೆ ಒಂದು ಸಭೆ ನಡೆಸಬೇಕು, ಪಂ.ಮಟ್ಟದ ಆಶಾಕಾರ್ಯಕರ್ತೆಯರಿಗೆ ಮಾಸ್ಕ್, ಸ್ಯಾನಿಟೇಸರ್, ಕೊಡೆಯಂತಹಾ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಪಂಚಾಯತ್ ಅನುದಾನ ಬಳಸುವಂತೆ ಸೂಚಿಸಿದರು.
೧೬ ಸಕ್ರೀಯ ಪ್ರಕರಣಗಳಿದ್ದು, ಈ ಪೈಕಿ ೧೨ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನಾಲ್ವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಸಹಾಯಕಿ ಮಾಹಿತಿ ನೀಡಿದರು.
ವಿಟ್ಲಪಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ರೇಶ್ಮಾಶಂಕರಿ ಉಪಾಧ್ಯಕ್ಷ ನಾಗೇಶ್ ಕುಮಾರ್,ಬಂಟ್ವಾಳ ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ , ತಹಶಿಲ್ದಾರ್ ರಶ್ಮಿ.ಎಸ್.ಆರ್, ತಾ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಪಿ.ಡಿ.ಒ.ಸುಜಯ, ಕಂದಾಯ ನಿರೀಕ್ಷಕ ದಿವಾಕರ ಮುಗುಳಿಯ, ಗ್ರಾಮಕರಣಿಕ ವೈಶಾಲಿ ,ಶಾಸಕರ ವಾರ್ ರೂಂ ಪ್ರಮುಖ ರಾದ ರವೀಶ್ ಶೆಟ್ಟಿ ಕರ್ಕಳ, ಟಾಸ್ಕ್
ಫೋರ್ಸ್ ಸಮಿತಿ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.