ಕ್ರಿಯಾಯೋಜನೆ ರೂಪಿಸಲು ಸೂಚನೆ- ಅಬ್ಬಯ್ಯ

ಹುಬ್ಬಳ್ಳಿ,ಏ19: ಇಲ್ಲಿನ ವಾರ್ಡ ನಂ.61ರ ಶಿವಶಂಕರ ಕಾಲನಿಗೆ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಶಾಸಕ ಪ್ರಸಾದ ಅಬ್ಬಯ್ಯ ಅವರು ಸ್ಥಳೀಯರ ಸಮಸ್ಯೆ ಆಲಿಸಿದರು.
ಗಟಾರದ ಅಸ್ವಚ್ಛತೆ, ಬೆಳಗದ ಬೀದಿದೀಪ, ಅಸಮರ್ಪಕ ಕುಡಿಯುವ ನೀರಿನ ಸರಬರಾಜು ಸೇರಿದಂತೆ ಇನ್ನಿತರೆ ಸಮಸ್ಯೆಗಳನ್ನು ಆಲಿಸಿದ ಶಾಸಕರು, ಕಾಲನಿಯಲ್ಲಿನ ಹಳೇ ಗಟಾರಗಳನ್ನು ತೆರವುಗೊಳಿಸಿ ಹೊಸದಾಗಿ ನಿರ್ಮಿಸಲು ಬೇಕಾದ ಅನುದಾನದ ಬಗ್ಗೆ ಶೀಘ್ರ ಕ್ರಿಯಾಯೋಜನೆ ರೂಪಿಸುವಂತೆ ಪಾಲಿಕೆ ಅಧಿಕಾರಿಗೆ ಸೂಚನೆ ನೀಡಿದರು.
ಗಟಾರದ ಅಸ್ವಚ್ಛತೆ ಬಗ್ಗೆ ಪಾಲಿಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ಪ್ರತಿದಿನ ಕಾಲನಿಗಳಲ್ಲಿ ಸ್ವಚ್ಛತಾ ಸಿಬ್ಬಂದಿಗಳನ್ನು ಕಳುಹಿಸಿ ಗಟಾರಗಳನ್ನು ಸ್ವಚ್ಛಗೊಳಿಸಬೇಕು. ಪಾಲಿಕೆಯ ಆರೋಗ್ಯ ನಿರೀಕ್ಷಕರುಗಳು ಈ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಸಾರ್ವಜನಿಕರು ಸಹ ಕಸವನ್ನು ಗಟಾರದಲ್ಲಿ ಚೆಲ್ಲದೇ, ದಿನಂಪ್ರತಿ ಮನೆ ಬಾಗಿಲಿಗೆ ಬರುವ ತ್ಯಾಜ್ಯ ಸಂಗ್ರಹ ವಾಹನದಲ್ಲೇ ಹಾಕಿ ಕಾಲನಿಯ ಸ್ವಚ್ಛತೆಗೆ ಸಹಕರಿಸಬೇಕು ಎಂದರು.
ಕ್ಷೇತ್ರದೆಲ್ಲೆಡೆ ಬೀದಿ ದೀಪಗಳ ದುರಸ್ತಿ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿದ್ದು, ಈ ಬಗ್ಗೆ ಶೀಘ್ರದಲ್ಲೇ ಅಧಿಕಾರಿಗಳ ಸಭೆ ಕರೆದು ಚರ್ಚಿಸಲಾಗುವುದು. ಇಲ್ಲಿನ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಜಲಮಂಡಳಿ ಅಧಿಕಾರಿಗಳಿಗೆ ಕರೆ ಮಾಡಿ ಮಾತನಾಡಿದ ಶಾಸಕರು, ಕೂಡಲೇ ಸ್ಥಳ ಪರಿಶೀಲಿಸಿ ಸಮಸ್ಯೆ ಇತ್ಯರ್ಥಪಡಿಸುವಂತೆ ಸೂಚಿಸಿದರು. ಸೂಕ್ತ ಸ್ಥಳಾವಕಾಶ ದೊರೆತಲ್ಲಿ ಕಾಲನಿಯಲ್ಲಿ ಮತ್ತೊಂದು ಅಂಗನವಾಡಿ ನಿರ್ಮಾಣಕ್ಕೆ ಕೂಡಲೇ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಪಾಲಿಕೆ ಮಾಜಿ ಸದಸ್ಯರಾದ ದಶರಥ ವಾಲಿ, ವಿಜನಗೌಡ ಪಾಟೀಲ, ಮುಖಂಡರಾದ ಪ್ರಭು ಪ್ರಭಾಕರ, ಮನೋಹರ ವಾಲಿ, ಮೀರಪ್ಪ ರಘು, ಗಣೇಶ ಪೂಜಾರ, ಸೈಯದ್ ದೊಡ್ಡಮನಿ, ಶ್ಯಾಮ್ ಕಾನನ, ಪ್ರಕಾಶ ಒಂಟಮನಿ, ರಾಜೇಶ್ವರಿ ಬಿಲಾನಾ, ಪಾಲಿಕೆ ಅಧಿಕಾರಿ ಅಭಿಷೇಕ್, ಇನ್ನಿತರರು ಇದ್ದರು.