ಕ್ರಿಮಿನಲ್ ಮೊಕದ್ದಮೆಗೆ ದೂರುಕಳಪೆ ಆಹಾರ, ಮಕ್ಕಳ ಅಸ್ವಸ್ಥ ಪ್ರಕರಣ ಸಿಓ ಅಮಾನತ್‌ಗೆ ಆಗ್ರಹ

(ಸಂಜೆವಾಣಿ ಪ್ರತಿನಿಧಿಯಿಂದ)
ರಾಯಚೂರು,ಮಾ.೨೬-
ದೇವದುರ್ಗ ತಾಲ್ಲೂಕಿನ ಬುಡಕಟ್ಟು ಕಲ್ಯಾಣ ಇಲಾಖೆ ಅಧಿಕಾರಿಯನ್ನು ಕರ್ತವ್ಯ ಲೋಪದಡಿ ಅಮಾನತುಗೊಳಿಸಬೇಕು ಹಾಗೂ ತಾಲ್ಲೂಕಿನ ಅರಕೆರಾ ಪಟ್ಟಣದ ಪರಿಶಿಷ್ಟ ಮೆಟ್ರಿಕ್‌ಪೂರ್ವ ಬಾಲಕಿಯರ ವಸತಿ ನಿಲಯಕ್ಕೆ ಆಹಾರ ಪದಾರ್ಥಗಳನ್ನು ಸರಬರಾಜು ಮಾಡುತ್ತಿರುವ ಗುತ್ತೇದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಒತ್ತಾಯಿಸಿ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ದೂರು ಸಲ್ಲಿಸಲಾಗಿದೆ.
ದೇವದುರ್ಗ ತಾಲ್ಲೂಕಿನ ಅರೆಕೆರಾ ಪಟ್ಟಣದ ಪರಿಶಿಷ್ಟ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ತಯಾರಿಸಿದ್ದ ಅಡುಗೆ ಸೇವಿಸಿದ ೪೫ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಈ ಕಳಪೆ ಆಹಾರ ಸೇವನೆಗೆ ವಸತಿ ನಿಲಯಕ್ಕೆ ಆಹಾರ ಸರಬರಾಜು ಮಾಡುವ ಗುತ್ತೇದಾರರು ಮತ್ತು ಅವರಿಗೆ ಸಹಕಾರ ನೀಡಿರುವ ಬುಡಕಟ್ಟು ಕಲ್ಯಾಣ ಇಲಾಖೆ ತಾಲ್ಲೂಕು ಅಧಿಕಾರಿಯನ್ನು ಕರ್ತವ್ಯ ಲೋಪದಡಿ ಅಮಾನತುಗೊಳಿಸಬೇಕು. ಹಾಗೂ ಆಹಾರ ಸರಬರಾಜು ಮಾಡುತ್ತಿರುವ ಗುತ್ತೇದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವುದನ್ನು ಬಿಟ್ಟು ಕೇವಲ ವಾರ್ಡನ್ ಅವರನ್ನು ಅಮಾನತು ಮಾಡಿ ಬಲಿಪಶುಮಾಡಿರುವುದು ಎಷ್ಟರ ಮಟ್ಟಿಗೆ ಸರಿ ಅಧಿಕಾರಿಗಳ ಭ್ರಷ್ಟಾಚಾರ ಮುಚ್ಚಿಡಲು ಸಿಬ್ಬಂದಿಗಳು ಬಲಿಯಾಗುತ್ತಿರುವುದು ಯಾವ ನ್ಯಾಯ ಎನ್ನುವುದು ಸಾಮಾಜಿಕ ಹೋರಾಟಗಾರ ಶರಣುಹೂಗಾರ್ ಪ್ರಶ್ನಿಸಿದ್ದಾರೆ.
ವಸತಿ ನಿಲಯದಲ್ಲಿ ದಾಸ್ತಾನು ಕೊಠಡಿ, ಶೌಚಾಲಯ, ಭೋಜನಾಲಯ ಸೇರಿ ಸುತ್ತಮುತ್ತಲಿನ ಪ್ರದೇಶ ಸ್ವಚ್ಛತೆ ಇಲ್ಲದಿರುವುದೇ ವಿದ್ಯಾರ್ಥಿಗಳ ಈ ಅಸ್ವಸ್ಥೆಗೆ ಕಾರಣ. ವಸತಿ ನಿಲಯದ ಮಕ್ಕಳು ಈ ವಾತಾವರಣದಿಂದ ಭಯದ ಭೀತಿಯಲ್ಲಿದ್ದಾರೆ. ಪೋಷಕರು ಮಕ್ಕಳನ್ನು ವಸತಿ ನಿಲಯಕ್ಕೆ ಕಳುಹಿಸಲು ಹಿಂದೆ-ಮುಂದೆ ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಎಲ್ಲ ಅವ್ಯವಸ್ಥೆಗೆ ಮೇಲ್ವಿಚಾರಕ ಅಧಿಕಾರಿಗಳೇ ಕಾರಣ.ಮಕ್ಕಳಿಗೆ ಹಾನಿಯಾದರೆ ಯಾರು ಜವಾಬ್ದಾರಿ ಎಂದು ಪ್ರಶ್ನಿಸಿರುವ ಹೂಗಾರ್, ಮಕ್ಕಳಿಗೆ ಗುಣಮಟ್ಟದ ಹಾಗೂ ಪೌಷ್ಠಿಕ ಆಹಾರ ವಿತರಣೆಗೆ ಕ್ರಮಕೈಗೊಳ್ಳದೆ ಬೇಜವಾಬ್ದಾರಿಯಿಂದ ವರ್ತಿಸಿರುವ ಪರಿಶಿಷ್ಟ ಪಂಗಡದ ತಾಲ್ಲೂಕು ಅಧಿಕಾರಿ ಮಂಜುಳಾ ವಿಜಯಲಕ್ಷ್ಮಿ ಅವರನ್ನು ಕರ್ತವ್ಯದಿಂದ ಅಮಾನತು ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಮಕ್ಕಳಿಗೆ ವಸತಿ ನಿಲಯದಲ್ಲಿ ಊಟ ತಯಾರಿಸುವ ಉದ್ದೇಶದಿಂದ ಆಹಾರ ಖರೀದಿಸುವ ವೇಳೆ ಆಹಾರದ ಗುಣಮಟ್ಟವನ್ನು
ಪರಿಶೀಲನೆ ಮಾಡದೆ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ ಹಾಗೂ ಆಹಾರ ಸರಬರಾಗು ಮಾಡುವ ಗುತ್ತಿಗೆದಾರರಿಗೂ ಈ ಅಧಿಕಾರಿ ಯಾವುದೇ ಎಚ್ಚರಿಕೆ ನೀಡಿಲ್ಲ. ಕೂಡಲೇ ಬುಡಕಟ್ಟು ಕಲ್ಯಾಣ ಇಲಾಖಾಧಿಕಾರಿಯನ್ನು ಅಮಾನತು ಮಾಡಬೇಕು ಹಾಗೂ ಗುತ್ತೇದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ತಿಳಿಸಿರುವ ಸಾಮಾಜಿಕ ಹೋರಾಟಗಾರ ಶರಣು ಹೂಗಾರ್ ಈ ದೂರಿಗೆ ಸೂಕ್ತ ಸ್ಪಂದನೆ ದೊರೆಯದಿದ್ದರೆ ಪ್ರತಿಭಟನೆ ನಡೆಸಲಾಗುವುದು ಹಾಗೂ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗುವುದೆಂದು ಎಚ್ಚರಿಸಿದ್ದಾರೆ.
ವಾರ್ಡನ್ ಅಮಾನತು
ಕಳೆದ ೨ ದಿನಗಳ ಹಿಂದೆ ಅರೆಕೆರೆ ಪಟ್ಟಣದ ವಸತಿ ನಿಲಯದ ವಿದ್ಯಾರ್ಥಿನಿಯರು ಆಹಾರ ಸೇವನೆಯಿಂದ ಅಸ್ವಸ್ಥರಾಗಿದ್ದರು. ವಿದ್ಯಾರ್ಥಿಗಳ ಈ ಪರಿಸ್ಥಿತಿಗೆ ವಸತಿ ನಿಲಯ ಮೇಲ್ವಿಚಾರಕರ ಬೇಜವಾಬ್ದಾರಿಯೇ ಕಾರಣ ಎಂದು ಆರೋಪಿಸಲಾಗಿದೆ.
ವಸತಿ ನಿಲಯದಲ್ಲಿ ಕುಡಿಯುವ ನೀರು,ಆಹಾರ ಸಾಮಾಗ್ರಿಗಳ ಸಮರ್ಪಕ ನಿರ್ವಹಣೆ ಮಾಡದಿರುವುದು, ಸೆಪ್ಟಿಕ್‌ಟ್ಯಾಂಕ್‌ನಲ್ಲಿ ಅಶುದ್ಧನೀರು,ಸ್ವಚ್ಚಗೊಳಿಸದ ಶೌಚಾಲಯಗಳ ದುರಸ್ಥಿಗೊಳಿಸದಿರುವುದು, ಕಾರಣವನ್ನು ನೀಡಿ ವಾರ್ಡನ್ ಅವರನ್ನು ಅಮಾನತು ಮಾಡಲಾಗಿದೆ.
ಆದರೆ, ಈ ಅವ್ಯವಸ್ಥೆಗೆ ವಾರ್ಡನ್ ಮಾತ್ರ ಕಾರಣರಲ್ಲ,ಅಧಿಕಾರಿಗಳೇ ಮುಖ್ಯ ಕಾರಣ ಎಂದು ಆರೋಪಿಸಿರುವ ಸಾಮಾಜಿಕ ಹೋರಾಟಗಾರ ಶರಣುಹೂಗಾರ್ ಕ್ರಮಕೈಗೊಳ್ಳುವಂತೆ ಎಚ್ಚರಿಸಿದ್ದಾರೆ.

ಬಾಕ್ಸ್
ವಸತಿ ನಿಲಯಕ್ಕೆ ಕಳಪೆ ಆಹಾರ ಸರಬರಾಜು ಮಾಡಿರುವುದೇ ವಿದ್ಯಾರ್ಥಿಗಳ ಅಸ್ವಸ್ಥತೆಗೆ ಕಾರಣವಾಗಿದೆ. ವಾರ್ಡ್‌ನ ಅವರನ್ನು ಅಮಾನತ್ತು ಮಾಡಿ ಬಲಿಪಶು ಮಾಡಲಾಗಿದೆ. ಮೇಲಾಧಿಕಾರಿಗಳ ಆದೇಶವಿಲ್ಲದೆ ಸಿಬ್ಬಂದಿಗಳು ಏನು ಮಾಡಲು ಸಾಧ್ಯವಿಲ್ಲ ಎನ್ನುವುದನ್ನು ಅಧಿಕಾರಿಗಳು ಅರಿತುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಕಳಪೆ ಆಹಾರ ಧಾನ್ಯ ಸರಬರಾಜು ಮಾಡಿರುವ ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಗುತ್ತಿಗೆದಾರರಿಗೆ ಸಹಕರಿಸಿರುವ ತಾಲ್ಲೂಕು ಅಧಿಕಾರಿಯನ್ನು ಅಮಾನತ್ತು ಮಾಡಬೇಕು. ಈಗಾಗಲೇ ಈ ಸಂಬಂಧ ಇಲಾಖೆ ಕಾರ್ಯದರ್ಶಿಗಳಿಗೆ ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕರಿಗೆ ರಾಯಚೂರು ಜಿಲ್ಲಾಧಿಕಾರಿಗಳು ಮತ್ತು ಸಿಇಓ ಗಳಿಗೆ ದೂರು ಸಲ್ಲಿಸಲಾಗಿದೆ.
-ಶರಣು ಹೂಗಾರ್
ಸಾಮಾಜಿಕ ಹೋರಾಟಗಾರ.