ಕ್ರಿಮಿನಲ್‌ಗಳ ಮೇಲೆ ದಾಳಿ: ೧೮ ಮಂದಿ ಸಾವು

ರಿಯೋ ಡಿಜನೈರೋ (ಬ್ರೆಜಿಲ್), ಜು.೨೨- ಇಲ್ಲಿನ ಕೊಳಗೇರಿ ಪ್ರದೇಶದಲ್ಲಿದ್ದ ಕ್ರಿಮಿನಲ್ ಹಿನ್ನೆಲೆಯ ಗುಂಪಿನ ಮೇಲೆ ೪೦೦ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಕನಿಷ್ಠ ೧೮ ಮಂದಿ ಮೃತಪಟ್ಟ ಘಟನೆ ನಡೆದಿದೆ.


ಮೃತ ೧೮ ಮಂದಿಯಲ್ಲಿ ೧೬ ಮಂದಿ ಶಂಕಿತ ಕ್ರಿಮಿನಲ್‌ಗಳು, ಓರ್ವ ಪೊಲೀಸ್ ಅಧಿಕಾರಿ ಹಾಗೂ ಮತ್ತೋರ್ವ ಸಾಮಾನ್ಯ ಪ್ರಜೆ ಸೇರಿದ್ದಾರೆ ಎನ್ನಲಾಗಿದೆ. ರಿಯೋ ಡಿಜನೈರೋದ ಕೊಳಗೇರಿ ಪ್ರದೇಶದ ಅಲೆಮಾವೋ ಕಟ್ಟಡದಲ್ಲಿ ಕ್ರಿಮಿನಲ್ ಹಿನ್ನೆಲೆಯ ಗುಂಪೊಂದು ಕ್ರಿಮಿನಲ್ ಕೃತ್ಯಕ್ಕೆ ಹೊಂಚು ಹಾಕಿ ಕುಳಿತಿತ್ತು ಎಂಬ ಮಾಹಿತಿ ಆಧಾರದ ಮೇಲೆ ಪೊಲೀಸ್ ಹಾಗೂ ಮಿಲಿಟರಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ.

ಅಲ್ಲದೆ ಈ ಕಾರ್ಯಾಚರಣೆಗೆ ಬರೊಬ್ಬರಿ ೪೦೦ ಅಧಿಕಾರಿಗಳ ತಂಡ, ೪ ವಿಮಾನ ಹಾಗೂ ೧೦ ಶಸ್ತ್ರಸಜ್ಜಿತ ವಾಹನಗಳು ಭಾಗಿಯಾಗಿದ್ದವು. ಈ ಕ್ರಿಮಿನಲ್ ಗುಂಪು ಈ ಹಿಂದೆ ಕಾರ್ಗೋ ಕಳವು, ಬ್ಯಾಂಕ್ ದರೋಡೆ ಮುಂತಾದ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದು, ಮುಂದೆ ಇತರೆ ಕೊಳಗೇರಿ ಪ್ರದೇಶಗಳಲ್ಲಿ ದಾಳಿಗೆ ಯೋಜನೆ ರೂಪಿಸಿತ್ತು ಎಂಬ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸ್ ಹಾಗೂ ಮಿಲಿಟರಿ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಪರಿಣಾಮ ೧೮ ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಸದ್ಯ ದಾಳಿಯ ಬಗ್ಗೆ ಮಾನವ ಹಕ್ಕುಗಳ ಉಲ್ಲಂಘನೆಯ ಆರೋಪ ಬಲವಾಗಿ ಕೇಳಿಬಂದಿದೆ. ರಿಯೋ ಡಿ ಜನೈರೋದಲ್ಲಿ ಈ ರೀತಿಯ ಪೊಲೀಸ್ ದಾಳಿಗಳು ಸಾಮಾನ್ಯವಾಗಿದ್ದರೂ ಸಾವಿನ ಸಂಖ್ಯೆಯ ಹೆಚ್ಚಳವಾಗಿರುವುದು ಇದೇ ಮೊದಲು ಎನ್ನಲಾಗಿದೆ.