ಕ್ರಿಕೆಟ್ ವೀಕ್ಷಣೆ ಸ್ವಯಂ ಹೊಗಳಿಕೆ: ಕೈ ಟೀಕೆ

ನವದೆಹಲಿ,ಮಾ.೯:ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದಿರುವ ಭಾರತ-ಆಸ್ಟ್ರೇಲಿಯಾ ನಡುವಣ ಕ್ರಿಕೆಟ್ ಟೆಸ್ಟ್ ಪಂದ್ಯವನ್ನು ಆಸ್ಟ್ರೇಲಿಯಾ ಪ್ರಧಾನಿ ಜತೆ ವೀಕ್ಷಿಸಿರುವುದು ಮೋದಿ ಅವರ ಸ್ವಯಂ ಹೊಗಳಿಕೆಯ ಪರಾಕಾಷ್ಠೆಯನ್ನು ಬಿಂಬಿಸುತ್ತದೆ ಎಂದು ಕಾಂಗ್ರೆಸ್ ಟೀಕಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ವಕ್ತಾರ ಜಯರಾಂ ರಮೇಶ್, ಪ್ರಧಾನಿ ನರೇಂದ್ರಮೋದಿ ಅವರಿಗೆ ಕ್ರಿಕೆಟ್ ಸ್ಟೇಡಿಯಂನಲ್ಲಿ ಗೌರವ ಸಮರ್ಪಣೆ ಮಾಡಲಿದೆ. ತಮ್ಮ ಜೀವಿತಾವಧಿಯಲ್ಲಿ ಕ್ರಿಕೆಟ್ ಸ್ಟೇಡಿಯಂಗೆ ತಮ್ಮ ಹೆಸರನ್ನಿಟ್ಟುಕೊಂಡು ಗೌರವ ಪಡೆದಿರುವ ಮೋದಿ ಅವರ ನಡೆ ಸ್ವಯಂ ಹೊಗಳಿಕೆಯ ಪರಾಕಾಷ್ಠೆ ಎಂದು ಅವರು ಟೀಕಿಸಿದ್ದಾರೆ.
ಭಾರತ-ಆಸ್ಟ್ರೇಲಿಯಾ ನಡುವಿನ ೭೫ನೇ ವರ್ಷದ ಸ್ನೇಹದ ಸಂಕೇತವಾಗಿ ಪ್ರಧಾನಿ ಮೋದಿ ಅವರು ಭಾರತಕ್ಕೆ ಭೇಟಿ ನೀಡಿರುವ ಆಸ್ಟ್ರೇಲಿಯಾ ಪ್ರಧಾನಿ ಆಂತೋಣಿ ಅಲ್ಬನಿಸ್ ಅವರ ಜತೆ ಅಹಮದಾಬಾದ್‌ನ ನರೇಂದ್ರಮೋದಿ ಕ್ರೀಡಾಂಗಣದಲ್ಲಿ ಇಂದಿನಿಂದ ಆರಂಭವಾಗಿರುವ ಭಾರತ ಮತ್ತು ಆಸ್ಟ್ರೇಲಿಯಾದ ಬಾರ್ಡರ್ ಗವಾಸ್ಕರ್ ಟ್ರೋಫಿಯ ೪ನೇ ಟೆಸ್ಟ್‌ನ ಆರಂಭಕ್ಕೂ ಮುನ್ನವೇ ಕ್ರೀಡಾಂಗಣಕ್ಕೆ ಬಂದು ಭಾರತ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ನಾಯಕರುಗಳಿಗೆ ತಂಡದ ಕ್ಯಾಪ್ ನೀಡಿದರು. ಹಾಗೆಯೇ ಕ್ರೀಡಾಂಗಣದಲ್ಲಿ ನೆರೆದಿದ್ದ ಕ್ರಿಕೆಟ್ ಪ್ರೇಮಿಗಳ ಗೌರವಕ್ಕೂ ಪಾತ್ರರಾಗಿ ಆಸ್ಟ್ರೇಲಿಯಾ ಪ್ರಧಾನಿ ಜತೆ ಪಂದ್ಯ ಆರಂಭಕ್ಕೂ ಮುನ್ನ ಕ್ರೀಡಾಂಗಣದಲ್ಲಿ ಒಂದು ಸುತ್ತು ಹಾಕಿ ಕ್ರೀಡಾ ಪ್ರೇಮಿಗಳತ್ತ ಕೈ ಬೀಸಿ ಮೋದಿ ಮತ್ತು ಆಂತೋನಿ ಅಲ್ಬರಿಸ್ ಧನ್ಯವಾದ ಹೇಳಿದರು. ಇದಾದ ಬಳಿಕ ಪಂದ್ಯ ಆರಂಭವಾಗಿ ಕ್ರಿಕೆಟ್ ಪಂದ್ಯವನ್ನು ಈ ಇಬ್ಬರು ಪ್ರಧಾನಿಗಳು ವೀಕ್ಷಿಸಿದರು.