ಕ್ರಿಕೆಟ್ ವಿಶ್ವಕಪ್ ಗೆಲುವಿಗೆ ದಶಕದ ಸಂಭ್ರಮ

ನವದೆಹಲಿ.ಏ.೨- ಭಾರತೀಯ ಕ್ರಿಕೆಟ್ ತಂಡ ೨೦೧೧ರಲ್ಲಿ ವಿಶ್ವಕಪ್ ಕ್ರಿಕೆಟ್ ಪ್ರಶಸ್ತಿಯನ್ನು ಮುಡಿಗೇರಿಸಿ ಇಂದಿಗೆ ೧೦ ವರ್ಷ ಪೂರೈಸಿದೆ. ಆದರೆ, ಈ ಐತಿಹಾಸಿಕ ಘಳಿಗೆ ಇನ್ನು ಅಭಿಮಾನಿಗಳ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ.
ಈ ಒಂದು ದಶಕದ ಸಂತಸವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನೆನಪುಗಳನ್ನು ಮೆಲುಕು ಹಾಕಿದೆ. ವಿಶ್ವಕಪ್ ಗೆದ್ದು ೧೦ ವರ್ಷದ ನಂತರವು ನಮ್ಮ ಮನಸ್ಸಿನಲ್ಲಿ ಆ ಅಭೂತಪೂರ್ವ ನೆನಪುಗಳು ಇನ್ನು ಅಚ್ಚಳಿಯದೆ ಉಳಿದಿದೆ ಎಂದು ಬಿಸಿಸಿಐ ಟ್ವೀಟ್ ಮಾಡಿದೆ.
೨೦೧೧ರ ವಿಶ್ವಕಪ್ ಬಗ್ಗೆ ತಮ್ಮ ನೆಚ್ಚಿನ ನೆನಪುಗಳನ್ನು ದಾಖಲಿಸಲು ಕ್ರಿಕೆಟ್ ಅಭಿಮಾನಿಗಳಿಗೆ ಹೇಳಿದೆ. ಧೋನಿ ತಮ್ಮದೇ ಶೈಲಿಯಲ್ಲಿ ಫೈನಲ್ ಪಂದ್ಯವನ್ನು ಮುಗಿಸಿದ್ದರು. ಆಗ ೨೮ ವರ್ಷದ ಬಳಿಕ ಭಾರತ ವಿಶ್ವಕಪ್ ಗೆದ್ದಿದೆ.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಪಂದ್ಯಾವಳಿಯಲ್ಲಿ ಶ್ರೀಲಂಕಾದ ವೇಗದ ಬೌಲರ್ ನುವಾನ್ ಗುಣಶೇಖರ ಬೌಲಿಂಗ್‌ನಲ್ಲಿ ಧೋನಿ ಸಿಕ್ಸರ್ ಬಾರಿಸಿದ್ದರು. ಆ ಸಂದರ್ಭದಲ್ಲಿ ರವಿಶಾಸ್ತ್ರಿ ಹೇಳಿದ ಮಾತುಗಳು ಇಂದಿಗೂ ಕ್ರಿಕೆಟ್ ಅಭಿಮಾನಿಗಳ ಕಿವಿಗಳಲ್ಲಿ ಪ್ರತಿಧ್ವನಿಸುತ್ತಿದೆ.
ಬ್ಯಾಟಿಂಗ್ ದಂತಕತೆ ಸಚಿನ್ ತೆಂಡೂಲ್ಕರ್ ಅವರ ಬಹುಕಾಲದ ಕನಸ್ಸನ್ನು ಈಡೇರಿಸಿದ್ದ ಈ ವಿಶ್ವಕಪ್ ಅವರ ವೃತ್ತಿ ಬದುಕಿನ ಮಹತ್ವದ ಘಟ್ಟ. ಈ ಟ್ರೋಫಿಯನ್ನು ಎತ್ತಲು ೨೨ ವರ್ಷಗಳಿಂದ ಸಚಿನ್ ಕಾಯುತ್ತಿದ್ದರು. ಆ ಕನಸು ಏ. ೨, ೨೦೧೧ ರಂದು ಈಡೇರಿತ್ತು. ವಿಶೇಷವೆಂದರೆ ಸಚಿನ್ ಅವರ ತವರಿನ ಮೈದಾನದಲ್ಲೇ ಧೋನಿ ಪಡೆ ವಿಶ್ವಕಪ್ ಪ್ರಶಸ್ತಿ ಗೆದ್ದು ಬೀಗಿತ್ತು.
೧೯೮೩ರಲ್ಲಿ ಕಪಿಲ್‌ದೇವ್ ಸಾರಥ್ಯದ ಭಾರತ ತಂಡ ಕ್ರಿಕೆಟ್ ಕಾಶಿ ಲಾರ್ಡ್ಸ್‌ನಲ್ಲಿ ಮೊದಲ ಬಾರಿಗೆ ವಿಶ್ವಕಪ್ ಕಿರೀಟ ಧರಿಸಿತ್ತು. ಆದರೆ ೨೦೧೧ರ ಹೊರಗೆ ಈ ಸಾಧನೆ ಮಾಡಲಾಗಿರಲಿಲ್ಲ.
ಈ ಪಂದ್ಯದಲ್ಲಿ ಎಂ.ಎಸ್ ಧೋನಿ ಪಂದ್ಯ ಪುರುಷ ಪ್ರಶಸ್ತಿಗೆ ಭಾಜನರಾಗಿದ್ದರೆ ಸ್ಫೋಟಕ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ಸರಣಿ ಶ್ರೇಷ್ಠ ಆಟಗಾರರಾಗಿ ಹೊರಹೊಮ್ಮಿದ್ದರು.
ವಿಶ್ವಕಪ್ ಸಂಭ್ರಮದಲ್ಲಿ ತೆಂಡೂಲ್ಕರ್ ಅವರನ್ನು ಆಟಗಾರರು ಹೆಗಲ ಮೇಲೆ ಹೊತ್ತುಕೊಂಡು ಮೈದಾನದುದ್ದಕ್ಕೂ ಮೆರವಣಿಗೆ ಮಾಡಿ ವಿಜಯದ ಕಹಳೆಯನ್ನು ಮೊಳಗಿಸಿತ್ತು.
ತ್ರಿವರ್ಣ ಧ್ವಜವನ್ನು ಬೀಸುತ್ತ ರಾಷ್ಟ್ರಗೀತೆಯನ್ನು ಹಾಡಿ ಭರ್ಜರಿಯಾಗಿ ವಿಜಯೋತ್ಸವ ಆಚರಿಸಲಾಗಿತ್ತು.