ಕ್ರಿಕೆಟ್ ಬೆಟ್ಟಿಂಗ್ 8 ಮಂದಿ ಸೆರೆ

ವಿಜಯಪುರ,ಏ.18-ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ 8 ಮಂದಿಯನ್ನು ಬಂಧಿಸಿ 16 ಮೊಬೈಲ್, 92,810 ನಗದನ್ನು ನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇಂಡಿ ಪಟ್ಟಣದ ಡಿಸಿಸಿ ಬ್ಯಾಂಕ್ ಬಳಿಯ ಕಾಂಪ್ಲೆಕ್ಸ್ ಮಹಡಿಯ ಬಳಿ ದಾಳಿ ನಡೆಸಿ ಬೆಟ್ಟಿಂಗ್ ನಡೆಸುತ್ತಿದ್ದ ಇಂಡಿಯ ಶಿವು, ಶಿವಪುತ್ರ ಚಂದ್ರಾಮ ಬಗಲಿ, ಧರ್ಮು ಉರ್ಫ್ ಧರ್ಮೇಂದ್ರ ಹುಚ್ಚಪ್ಪ ಹರಿಜನ, ಅಶ್ವತ್ಥ್ ಅಶೋಕ ಬನಸೋಡೆ, ಮಹ್ಮದ ಶಫೀಕ್ ಶಕೀಲ ಶೇಖ್, ಮಹೇಶ ಭೀಮಪ್ಪ ಆನಂದ, ರಾಹುಲ್ ಮನೋಹರ ಶೇರಖಾನೆ ಚಡಚಣದ ಸಾಗರ ಸಿದ್ಧರಾಮ ಸಿಂಧೆ ಉರ್ಫ್ ಬಾಟ ಎಂಬುವರನ್ನು ಬಂಧಿಸಲಾಗಿದೆ.
ನಗರದ ಸಿಇಎನ್ ಸಿಪಿಐ ಸುರೇಶ್ ಬೆಂಡೆಗುಂಬಳ ಮತ್ತು 17 ಜನರ ತಂಡದಿಂದ ದಾಳಿ ನಡೆಸಲಾಗಿದ್ದು ನಿನ್ನೆ ರಾತ್ರಿ ನಡೆದ ಮುಂಬಯಿ ಇಂಡಿಯನ್ಸ್ ಮತ್ತು ಹೈದರಾಬಾದ ಸನ್ ರೈಸರ್ಸ್ ತಂಡಗಳ ನಡುವಿನ ಐಪಿಎಲ್ ಪಂದ್ಯದ ಮೇಲೆ ಬೆಟ್ಟಿಂಗ್ ನಡೆಸುತ್ತಿರುವುದನ್ನು ಪತ್ತೆಹಚ್ಚಲಾಗಿದೆ.
ಮುಂಬಯಿ ಇಂಡಿಯನ್ಸ್ ಗೆದ್ದರೆ 3000ಗೆ ₹5000, ಸನ್ ರೈಸರ್ಸ್ ಹೈದರಾಬಾದ್ ಗೆದ್ದರೆ ರೂ.4000ಗೆ 7000 ಹಣ ನೀಡುವ ಒಪ್ಪಂದದಂತೆ ಮೊಬೈಲ್‌ನಲ್ಲಿ ಬೆಟ್ಟಿಂಗ್ ವ್ಯವಹಾರ ಕುದುರಿಸುತ್ತಿದ್ದರು.
ಮತ್ತೋರ್ವ ಆರೋಪಿ ಯೋಗಿರಾಜ ಉರ್ಫ್ ಯೋಗೀಶ್ ಮನೋಹರ ಶೇರಖಾನೆ ಪರಾರಿಯಾಗಿದ್ದಾನೆ. ವಿಜಯಪುರ ಜಿಲ್ಲೆಯ ಇಂಡಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.