ಕ್ರಿಕೆಟ್ ಬೆಟ್ಟಿಂಗ್ ಪ್ರಕರಣ: ಬಿಜೆಪಿ ಶಾಸಕ ಮತ್ತಿಮೂಡ್ ರಾಜೀನಾಮೆಗೆ ವಿಜಯಕುಮಾರ್ ಆಗ್ರಹ

ಕಲಬುರಗಿ:ನ.15: ಐಪಿಎಲ್ ಬೆಟ್ಟಿಂಗ್ ಪ್ರಕರಣ ಸೇರಿದಂತೆ ವಿವಿಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ಹಿನ್ನೆಲೆಯನ್ನು ಹೊಂದಿರುವ ಗ್ರಾಮೀಣ ಮತಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ್ ಮತ್ತಿಮೂಡ್ ಅವರು ಕೂಡಲೇ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಇಲ್ಲದೇ ಹೋದಲ್ಲಿ ಭ್ರಷ್ಟಾಚಾರ ನಿರ್ಮೂಲನೆಯ ಕುರಿತು ಮಾತನಾಡುವ ಬಿಜೆಪಿ ವರಿಷ್ಠರು ಕೂಡಲೇ ಮತ್ತಿಮೂಡ್ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಕಾಂಗ್ರೆಸ್ ಮುಖಂಡ ವಿಜಯಕುಮಾರ್ ಜಿ. ರಾಮಕೃಷ್ಣ ಅವರು ಇಲ್ಲಿ ಒತ್ತಾಯಿಸಿದರು.
ಭಾನುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಪ್ರಕರಣದಲ್ಲಿ ಪರಾರಿಯಾಗಿರುವ ಮತ್ತಿಮೂಡ್ ಅವರ ಭಾಮೈದ (ಪತ್ನಿ ತಮ್ಮ) ಗೋರಖನಾಥ್ ಅವರನ್ನು ಕೂಡಲೇ ಪೋಲಿಸರು ಬಂಧಿಸಬೇಕು ಎಂದು ಆಗ್ರಹಿಸಿದರು.
ಶಾಸಕ ಬಸವರಾಜ್ ಮತ್ತಿಮೂಡ್ ಅವರ ವಿರುದ್ಧ ಕೇವಲ ಇದೊಂದೇ ಪ್ರಕರಣ ಅಲ್ಲ. ಈ ಹಿಂದೆ ಸೇಡಂ ತಾಲ್ಲೂಕಿನ ಅಡಕಿ ಮತಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದಾಗ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರಾಗುವ ಮುನ್ನವೂ ಸಹ ಹಲವಾರು ಪ್ರಕರಣಗಳು ಅವರ ವಿರುದ್ಧ ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳು ಸೇರಿ ವಿವಿಧ ಪೋಲಿಸ್ ಠಾಣೆಗಳಲ್ಲಿ ದಾಖಲಾಗಿವೆ. ಆ ಪ್ರಕರಣಗಳು ಇನ್ನೂ ವಿಚಾರಣೆಯಲ್ಲಿ ಇರುವಾಗಲೇ ಬಿಜೆಪಿ ಶಾಸಕರ ಮತ್ತೊಂದು ಕ್ರಿಕೆಟ್ ಬೆಟ್ಟಿಂಗ್ ಪ್ರಕರಣ ಹೊರಬಿದ್ದಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಎಂ.ಬಿ. ನಗರ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಮನೆಯೊಂದರಲ್ಲಿ ಐಪಿಎಲ್ ಕ್ರಿಕೆಟ್ ಟೂರ್ನಿಯ ಬೆಟ್ಟಿಂಗ್ ನಡೆಯುತ್ತಿದ್ದ ವೇಳೆ ಇಬ್ಬರನ್ನು ವಶಕ್ಕೆ ಪಡೆದಿರುವ ಸೊಲ್ಲಾಪೂರದ ಸಿಸಿಬಿ ಪೋಲಿಸರು ಗ್ರಾಮೀಣ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ್ ಮತ್ತಿಮೂಡ್ ಅವರ ಪತ್ನಿ ಶ್ರೀಮತಿ ಜಯಶ್ರೀ ಮತ್ತಿಮೂಡ್ ಅವರ ಹೆಸರಿನಲ್ಲಿ ಇರುವ ಇನ್ನೋವಾ ಕ್ರಿಸ್ಟಾ ಕಾರನ್ನು ವಶಕ್ಕೆ ಪಡೆದಿದ್ದಾರೆ. ಮತ್ತಿಮೂಡ್ ಅವರ ಭಾಮೈದ (ಅಳಿಯ) (ಪತ್ನಿಯ ತಮ್ಮ) ಗೋರಖನಾಥ್ ಪರಾರಿಯಾಗಿದ್ದಾನೆ. ಬೆಟ್ಟಿಂಗ್ ಪ್ರಕರಣದಲ್ಲಿ ಬಂಧಿತರಾಗಿರುವ ಅತುಲ್ ಸಿರಶೆಟ್ಟಿ, ಪ್ರದೀಪ್ ಮಲ್ಲಯ್ಯ ಕಾರಂಜೆ ಎಂಬುವವರಿಂದ 38.44 ಲಕ್ಷ ರೂ.ಗಳ ನಗದು, ನಾಲ್ಕು ಲ್ಯಾಪ್‍ಟಾಪ್‍ಗಳು, ಟಿವಿ ವಶಕ್ಕೆ ಪಡೆದಿರುವ ಮಹಾರಾಷ್ಟ್ರದ ಸೊಲ್ಲಾಪೂರದ ಸಿಸಿಬಿ ಪೋಲಿಸರು ಎರಡು ಕಾರುಗಳು ಹಾಗೂ ಒಂದು ಸ್ಕೂಟರ್ ಸಹ ಜಪ್ತಿ ಮಾಡಿಕೊಂಡಿದ್ದಾರೆ ಎಂದು ಅವರು ಹೇಳಿದರು.
ಗ್ರಾಮೀಣ ಮತಕ್ಷೇತ್ರದಲ್ಲಿ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಜನರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮಹಾಮಾರಿ ಕೊರೋನಾ ಭೀತಿ ಹಾಗೂ ಮೂರು ಬಾರಿ ಅತಿವೃಷ್ಟಿ, ನೆರೆ ಹಾವಳಿಯಿಂದ ಇಡೀ ಜನಜೀವನ ಅಸ್ತವ್ಯಸ್ತಗೊಂಡಿದೆ. ಬಡವರು, ಕೃಷಿ, ಕಾರ್ಮಿಕರು ಚಿಂತಾಜನಕವಾಗಿದ್ದಾರೆ. ಇಡೀ ಕ್ಷೇತ್ರದಲ್ಲಿ ಸರ್ಕಾರದಿಂದ ಪರಿಹಾರ ನಿರೀಕ್ಷಿಸುತ್ತಿರುವ ಸಂತ್ರಸ್ತರಿಗೆ ಸೂಕ್ತ ನೆರವು ನೀಡಬೇಕಾದ ಶಾಸಕರು ತಮ್ಮ ಸಂಬಂಧಿಕರು ಹಾಗೂ ಬೆಂಬಲಿಗರೊಂದಿಗೆ ಬೆಟ್ಟಿಂಗ್ ದಂಧೆಯಲ್ಲಿ ರಾಜಾರೋಷವಾಗಿ ತೊಡಗಿಸಿಕೊಂಡಿದ್ದಾರೆ ಎಂದು ಅವರು ಆಕ್ರೋಶ ಹೊರಹಾಕಿದರು.
ನಾವು ಗ್ರಾಮೀಣ ಮತಕ್ಷೇತ್ರದಲ್ಲಿ ಪ್ರತಿಯೊಂದು ಗ್ರಾಮದಲ್ಲಿ ಮಟಕಾ ಹಾಗೂ ಇಸ್ಪೇಟ್ ದಂಧೆ ಅವ್ಯಾಹತವಾಗಿ ನಡೆದಿದೆ. ಯುವಕರು ಹಾಗೂ ನಿರುದ್ಯೋಗಿಗಳಿಗೆ ದಾರಿ ತಪ್ಪಿಸುತ್ತಿದ್ದಾರೆ. ಈಗಾಗಲೇ ಬಡವರು ಹಾಗೂ ರೈತರು ಹಾಗೂ ಉದ್ಯಮಿಗಳೂ ಸೇರಿದಂತೆ ಸಾಲಬಾಧೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಕಂಡಿದ್ದೇವೆ. ಇನ್ನು ಮುಂದೆ ಕ್ರಿಕೆಟ್ ಬೆಟ್ಟಿಂಗ್‍ದಲ್ಲಿ ಹಣ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವಂತಹ ಅತ್ಯಂತ ಭಯಾನಕ ದಿನಗಳು ಬರುತ್ತಿವೆ. ಅದಕ್ಕೆಲ್ಲ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ್ ಮತ್ತಿಮೂಡ್ ಅವರೇ ನೇರ ಹೊಣೆಗಾರರು ಎಂದು ಅವರು ಆರೋಪಿಸಿದರು.
ಗ್ರಾಮೀಣ ಕ್ಷೇತ್ರದಲ್ಲಿ ಈಗ ಬಿಜೆಪಿ ಎಂದರೆ ಕ್ರಿಕೆಟ್ ಬೆಟ್ಟಿಂಗ್ ಎನ್ನುವಂತಾಗಿದೆ. ಇಂತಹ ಕೆಟ್ಟ ವ್ಯವಸ್ಥೆ ಹರಡಬಾರದು. ನಿಜವಾಗಿಯೂ ಸ್ಥಳೀಯ ಪೋಲಿಸರು ಇಂತಹ ಅಪರಾಧಗಳನ್ನು ತಡೆಯುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ ಎನ್ನುವುದಕ್ಕೆ ಮಹಾರಾಷ್ಟ್ರ ಪೋಲಿಸರ ಕಾರ್ಯಾಚರಣೆಯೇ ಪ್ರಮುಖ ಸಾಕ್ಷಿಯಾಗಿದೆ.
ಇದಕ್ಕಿಂತ ಮುನ್ನ ಅಕ್ರಮ ಗಾಂಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೋಲಿಸರು ಜಿಲ್ಲೆಯ ಚಿಂಚೋಳಿಯಲ್ಲಿ ಕಾರ್ಯಾಚರಣೆ ಮಾಡಿ ಆರೋಪಿಯನ್ನು ಬಂಧಿಸಿದ್ದರು. ಆಗಲೂ ಪೋಲಿಸ್ ಇಲಾಖೆ ವೈಫಲ್ಯಗೊಂಡಿತ್ತು. ಈಗ ಕ್ರಿಕೆಟ್ ಬೆಟ್ಟಿಂಗ್ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಿದ್ದರೂ ಸಹ ಜಿಲ್ಲಾ ಪೋಲಿಸರು ಮಾತ್ರ ಯಾವುದೇ ರೀತಿಯಲ್ಲಿ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಒಂದು ಕಡೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಭ್ರಷ್ಟಾಚಾರ ಮುಕ್ತಗೊಳಿಸುತ್ತೇವೆ ಎಂದು ಹೇಳುತ್ತಾರೆ. ಬಿಜೆಪಿ ರಾಷ್ಟ್ರೀಯ ಪಕ್ಷ. ಭ್ರಷ್ಟಾಚಾರ ರಹಿತ ಆಡಳಿತ ನೀಡುವುದಾಗಿ ಘೋಷಿಸುತ್ತಾರೆ. ಆದಾರೂ ಸಹ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅವರ ಮೇಲೆ ಸಾಕಷ್ಟು ಆರೋಪಗಳಿದ್ದರೂ, ಪ್ರಕರಣಗಳನ್ನು ಎದುರಿಸುತ್ತಿದ್ದರೂ ಸಹ ಕಳಂಕಿತ ಬಸವರಾಜ್ ಮತ್ತಿಮೂಡ್ ಅವರಿಗೆ ಬಿಜೆಪಿ ಟಿಕೆಟ್‍ನ್ನು ಕಲಬುರ್ಗಿ ಗ್ರಾಮೀಣ ಮತಕ್ಷೇತ್ರದಿಂದ ನೀಡಲಾಯಿತು. ಅದರಲ್ಲಿಯೂ ಬಿಜೆಪಿಯಲ್ಲಿ ಅತ್ಯಂತ ಹಿರಿಯರಾಗಿದ್ದ, ಮೂರು ಬಾರಿ ಶಾಸಕರಾಗಿ, ಒಮ್ಮೆ ಸಚಿವರಾಗಿದ್ದ ಶ್ರೀ ರೇವು ನಾಯಕ್ ಬೆಳಮಗಿ ಅವರಿಗೆ ಟಿಕೆಟ್ ನಿರಾಕರಿಸಿ ಹೊರಗಿನ ಕ್ಷೇತ್ರದ ಮತ್ತಿಮೂಡ್ ಅವರಿಗೆ ಟಿಕೆಟ್ ಕೊಟ್ಟಿದ್ದೇ ಬಿಜೆಪಿ ಪಕ್ಷ ಅಕ್ಷಮ್ಯ ಅಪರಾಧ ಎಸಗಿ, ಇಂತಹ ಪ್ರಕರಣಗಳಿಗೆ ಸಹಕರಿಸಿದೆ ಎಂದು ಅವರು ಛೇಡಿಸಿದರು.
ಮುಖ್ಯಮಂತ್ರಿಗಳು ಹಾಗೂ ರಾಜ್ಯದ ಗೃಹ ಸಚಿವರಿಗೆ ಏನಾದರೂ ಭ್ರಷ್ಟಾಚಾರ ಮುಕ್ತ ರಾಜ್ಯವನ್ನಾಗಿಸುವ ಇಚ್ಛೆ ಇದ್ದಲ್ಲಿ ಮೊದಲು ಶಾಸಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಕಲಬುರ್ಗಿ ಜಿಲ್ಲಾ ಪೋಲಿಸರ ವೈಫಲ್ಯದ ವಿರುದ್ಧವೂ ಸಹ ಶಿಸ್ತು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ರಾಜ್ಯದ ಜನತೆ ಬಿಜೆಪಿಯನ್ನು ಎಂದಿಗೂ ಕ್ಷಮಿಸಲಾರರು. ನಾವು ಮುಂದಿನ ದಿನಗಳಲ್ಲಿ ಶಾಸಕರ ಹಾಗೂ ಸರ್ಕಾರದ ವಿರುದ್ಧ ಪ್ರತಿಭಟನೆಯನ್ನೂ ಆರಂಭಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಶರಣಗೌಡ ಡಿ. ಪಾಟೀಲ್, ಮುಖಂಡರಾದ ಶರಣಬಸವಪ್ಪ ಹಾಗರಗಿ, ಸಂಜೀವಕುಮಾರ್ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಶ್ರೀಮತಿ ನಿರ್ಮಲಾ ಬರಗಾಲಿ, ವಿಠಲ್ ಹೊಡೆಲ್, ಚೇತನ್ ಗೋನಾಯಕ್, ಪ್ರವೀಣ್ ಅಡವಿಕರ್, ಬಲರಾಮ್ ಪೂಜಾರಿ, ನಾರಾಯಣ್, ಇಬ್ರಾಹಿಂಸಾಬ್ ಅಕ್ತಾರ್, ಮೆಹರಾಜ್ ಪಟೇಲ್, ಶಿವರಾಜ್ ಇಂಚಗೇರಿ, ಜಗದೇವಪ್ಪ ಅಂಕಲಗಿ ಮುಂತಾದವರು ಉಪಸ್ಥಿತರಿದ್ದರು.