ಕ್ರಿಕೆಟ್ ಜಗಳ: ಹಲ್ಲೆ ಮಾಡಿದ ಮೂವರಿಗೆ ದಂಡ

ಕಲಬುರಗಿ ಮಾ 29: ಕ್ರಿಕೆಟ್ ಪಂದ್ಯದಲ್ಲಿ ಎದುರಾಳಿ ತಂಡದ ಮೇಲೆ ಮೇಲೆ ಹಲ್ಲೆ ನಡೆಸಿದ ಮೂವರಿಗೆ ಚಿಂಚೋಳಿಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‍ಸಿ ನ್ಯಾಯಾಲಯದ ನ್ಯಾಯಾಧೀಶರಾದ ರವಿಕುಮಾರ ಅವರು 40500 ರೂ ದಂಡ ವಿಧಿಸಿ ಆದೇಶ ನೀಡಿದ್ದಾರೆ.
ಚಿಂಚೋಳಿ ತಾಲೂಕಿನ ಭಿಕ್ಕುನಾಯಕ ತಾಂಡಾದ ಬಬಲು ಶಿವರಾಮ್,ರಘು ರಾವಜಿ ರಾಠೋಡಮತ್ತು ವೈಜನಾಥ ಚಿನ್ನಾ ರಾಠೋಡ ದಂಡದ ಶಿಕ್ಷೆಗೊಳಗಾದವರು.
2014 ರ ಅಕ್ಟೋಬರ್ 25 ರಂದು ಭಿಕ್ಕುನಾಯಕ ತಾಂಡಾದಲ್ಲಿ ಕ್ರಿಕೆಟ್ ಪಂದ್ಯ ನಡೆದಾಗ ಈ ಮೂವರು,ಜವಾಹರ ನಗರ ತಾಂಡಾದ ದ್ರೋಣಾಚಾರಿ,ಜಗದೀಶ,ವಿಜಯಕುಮಾರ,ಬಲಭೀಮ ಎಂಬ ಆಟಗಾರರ ಮೇಲೆ ಕಲ್ಲು ಬ್ಯಾಟ್ ನಿಂದ ಹಲ್ಲೆ ನಡೆಸಿ, ನಮ್ಮೂರಿಂದ ಅದು ಹೇಗೆ ಕ್ರಿಕೆಟ್ ಪಂದ್ಯ ಗೆದ್ದುಕೊಂಡು ಹೋಗ್ತೀರಿ ನೋಡ್ತೀವಿ ಎಂದು ಜೀವ ಬೆದರಿಕೆ ಹಾಕಿದ್ದರು.ಕುಂಚಾವರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ದಂಡದ 40500 ರೂಗಳಲ್ಲಿ ಗಾಯಾಳು ದ್ರೋಣಾಚಾರಿಗೆ 25000 ರೂ ಮತ್ತು ಉಳಿದ ಜಗದೀಶ,ವಿಜಯಕುಮಾರ,ಬಲಭೀಮ ಎಂಬುವವರಿಗೆ ತಲಾ 2500 ರೂ ನೀಡುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ.ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ಶಾಂತಕುಮಾರ ಜಿ ಪಾಟೀಲ ಅವರು ವಾದ ಮಂಡಿಸಿದ್ದರು.