ಕ್ರಿಕೆಟ್ ಕ್ರೀಡಾಂಗಣಕ್ಕೆ ವಿಜಯರೆಡ್ಡಿ ನಾಮಕರಣ ಶಾಸಕರು ಸಲಹೆ

ಕ್ರಿಕೆಟ್ ಪಟು ವಿಜಯರೆಡ್ಡಿ ಸ್ಮರಣಾರ್ಥ ರಕ್ತದಾನ ಶಿಬಿರ ಕಾರ್ಯಕ್ರಮ
ರಾಯಚೂರು.ಜು.೨೪- ಕ್ರಿಕೆಟ್ ಆಟದಲ್ಲಿ ರಾಯಚೂರು ರಾಜ್ಯದಲ್ಲಿ ಅತ್ಯಂತ ಅತ್ಯುತ್ತಮ ಖ್ಯಾತಿ ಹೊಂದಿದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಕ್ರಿಕೆಟ್ ಎಂದರೆ ರಾಯಚೂರು ಎನ್ನುವ ಪ್ರತೀತಿ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಗುರುತಿಸುವ ರೀತಿಯಲ್ಲಿ ಪ್ರತಿಭೆಗಳು ಇಲ್ಲಿ ಇವೆ ಎಂದು ಶಾಸಕ ಡಾ.ಶಿವರಾಜ ಪಾಟೀಲ್ ಅವರು ಹೇಳಿದರು.
ಅವರಿಂದು ನಗರದ ಎಸ್‌ಇಎಬಿ ಮಹಾವಿದ್ಯಾಲಯದಲ್ಲಿ ಸಿಟಿ-೧೧ ಕ್ರಿಕೆಟ್ ಕ್ಲಬ್ ಮತ್ತು ಸೇಠ್ ಚುನಿಲಾಲ್ ಅಮರಚಂದ್ ಬೋಹರಾ ಕಾನೂನು ಮಹಾವಿದ್ಯಾಲಯ ಹಾಗೂ ವೀರ ಸಾವರ್ಕರ್ ಅಸೋಸಿಯೇಷನ್ ಇವರ ಸಂಯುಕ್ತಾಶ್ರಯದಲ್ಲಿ ದಿ.ವಿಜಯರೆಡ್ಡಿ ಪ್ರಥಮ ವಾರ್ಷಿಕ ಪುಣ್ಯಸ್ಮರಣೆ ಅಂಗವಾಗಿ ಆಯೋಜಿಸಿದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು. ವಿಜಯರೆಡ್ಡಿ ಅವರ ಅತ್ಯುತ್ತಮ ಕ್ರಿಕೆಟ್ ಕ್ರೀಡಾಪಟುವಾಗಿದ್ದರು. ಅವರ ಆಟವನ್ನು ನಾನು ನೋಡಿದ್ದೇನೆ. ಪ್ರತಿಭಾನ್ವಿತ ಆಟಗಾರರೊಂದಿಗೆ ಅತ್ಯುತ್ತಮ ನಡೆ, ನುಡಿ ಹೊಂದಿದವರಾಗಿದ್ದರು.
ಕ್ರಿಕೆಟ್ ಪಂದ್ಯಾವಳಿ ರಾಜ್ಯದಲ್ಲಿ ಜಿಲ್ಲೆ ಅತ್ಯಂತ ಖ್ಯಾತಿ ಹೊಂದಿದೆ. ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಈ ಕಾರಣಕ್ಕಾಗಿಯೇ ಜಿಲ್ಲೆಗೆ ಕ್ರೀಡಾಂಗಣವನ್ನು ನೀಡಿದೆ. ಇತ್ತೀಚಿಗಷ್ಟೆ ಬ್ರಿಜೇಶ್ ಪಾಟೀಲ್ ಅವರು ಜಿಲ್ಲೆಗೆ ಆಗಮಿಸಿ, ಕ್ರೀಡಾಂಗಣ ಅಭಿವೃದ್ಧಿಗೆ ೧೦ ಕೋಟಿ ನೀಡುವುದಾಗಿ ಹೇಳಿದ್ದರು. ಕೆಲ ಕಾರಣಾಂತರಗಳಿಂದ ಈ ಕಾರ್ಯಕ್ರಮ ಮುಂದೂಡಲಾಗಿದೆ. ಯರಗೇರಾ ಭಾಗದಲ್ಲಿರುವ ಕ್ರೀಡಾಂಗಣಕ್ಕೆ ವಿಜಯರೆಡ್ಡಿ ಅವರ ಹೆಸರು ನಾಮಕರಣಗೊಳಿಸುವ ಮೂಲಕ ಅವರ ಶಾಶ್ವತವಾಗಿ ಎಲ್ಲರ ಮನದಾಳದಲ್ಲಿ ಇರುವಂತೆ ಮಾಡಬೇಕಾಗಿದೆ.
ಅವರ ಸ್ಮರಣಾರ್ಥವಾಗಿ ಅವರ ರಕ್ತದಾನ ಶಿಬಿರ ಹಮ್ಮಿಕೊಂಡಿರುವುದು ಅತ್ಯಂತ ಶ್ಲಾಘನೀಯವಾಗಿದೆ. ಅನ್ನದಾನ, ವಿದ್ಯಾದಾನಕ್ಕಿಂತ, ರಕ್ತದಾನ ಅತ್ಯಂತ ಶ್ರೇಷ್ಠವಾಗಿದೆ. ರಕ್ತದಾನದಿಂದ ನೂರಾರು ವ್ಯಕ್ತಿಗಳನ್ನು ನಾವು ಬದುಕಿಸುವಂತಹ ಕಾರ್ಯವಾಗುತ್ತಿದೆಂದು ಹೇಳಿದರು. ಈ ಸಂದರ್ಭದಲ್ಲಿ ತಾರಾನಾಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಪಾರಸಮಲ್ ಸುಖಾಣಿ ಅವರು ಮಾತನಾಡುತ್ತಾ, ಕ್ರೀಡಾಂಗಣಕ್ಕೆ ವಿಜಯರೆಡ್ಡಿ ಹೆಸರು ಇಡುವುದಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತೇನೆ. ಎಲ್‌ವಿಡಿ ಕಾಲೇಜಿನಲ್ಲಿ ಇಂಡೋರ್ ಸ್ಟೇಡಿಯಂ ಅತ್ಯವಶ್ಯಕವಾಗಿದೆ.
ಇದಕ್ಕಾಗಿ ನೆರವು ನೀಡುವಂತೆ ಕೇಳಿದ ಅವರು, ತಾರಾನಾಥ ಶಿಕ್ಷಣ ಸಂಸ್ಥೆ ಯಾವುದೇ ವ್ಯವಹಾರಿಕವಾಗಿ ಸಂಸ್ಥೆ ನಡೆಯುತ್ತಿಲ್ಲ. ಇದೊಂದು ಸೇವಾ ಮನೋಭಾವನೆಯಿಂದ ನಿರ್ವಹಿಸಲಾಗುತ್ತಿದೆ. ರಕ್ತದಾನ ಶಿಬಿರ ಅತ್ಯಂತ ಸಮಯೋಚಿತ ಕಾರ್ಯಕ್ರಮವಾಗಿದೆಂದರು. ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ಶಂಕ್ರಪ್ಪ ಅವರು ಮಾತನಾಡುತ್ತಾ, ವಿಜಯರೆಡ್ಡಿ ಅವರು ಬಿಟ್ಟು ಹೋದ ಕಾರ್ಯವನ್ನು ನೀವೆಲ್ಲ ಮುಂದುವರೆಸುತ್ತಿರುವುದು ಅತ್ಯಂತ ಶ್ಲಾಘನೀಯವಾಗಿದೆ. ವಿಜಯರೆಡ್ಡಿ ಈ ರೀತಿ ಎಲ್ಲರೊಂದಿಗೆ ಅಮರವಾಗಿ ಉಳಿಯಲು ಕಾರಣವಾಗುತ್ತದೆಂದು ಹೇಳಿದರು.