ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಪೆರೆರಾ

ಕೊಲಂಬೊ, ಮೇ ೪- ಶ್ರೀಲಂಕಾದ ಆಲ್‌ರೌಂಡರ್ ಮತ್ತು ಮಾಜಿ ನಾಯಕ ತಿಸರಾ ಪೆರೆರಾ ಅವರು ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ.
ಪೆರೆರಾ ಅವರು ಶ್ರೀಲಂಕಾ ಕ್ರಿಕೆಟ್‌ಗೆ (ಎಸ್‌ಎಲ್‌ಸಿ) ಸಲ್ಲಿಸಿದ ಪತ್ರದಲ್ಲಿ, ಕಿರಿಯ ಆಟಗಾರರಿಗೆ ಅವಕಾಶ ಮಾಡಿಕೊಡುವ ಉದ್ದೇಶಕ್ಕಾಗಿ ವಿದಾಯ ಹೇಳಲು ಇದು ಸರಿಯಾದ ಸಮಯವೆಂದು ಭಾವಿಸಿರುವುದಾಗಿ ಹೇಳಿದರು. ಪೆರೆರಾ ೬ ಟೆಸ್ಟ್, ೧೬೬ ಏಕದಿನ ಮತ್ತು ೮೪ ಟ್ವೆಂಟಿ-೨೦ ಪಂದ್ಯಗಳಲ್ಲಿ ಶ್ರೀಲಂಕಾ ತಂಡವನ್ನು ಪ್ರತಿನಿಧಿಸಿದ್ದರು. ೩೨ರ ಹರೆಯದ ಪೆರೆರಾ ವಿಶ್ವದ ವಿವಿಧ ಫ್ರಾಂಚೈಸ್ ಕ್ರಿಕೆಟ್ ತಂಡದ ಪರ ಆಡುವುದನ್ನು ಮುಂದುವರಿಸುವ ನಿರೀಕ್ಷೆ ಇದೆ. ನನಗೆ ಏಳು ಕ್ರಿಕೆಟ್ ವಿಶ್ವಕಪ್‌ಗಳಲ್ಲಿ ಶ್ರೀಲಂಕಾವನ್ನು ಪ್ರತಿನಿಧಿಸಲು ಸಾಧ್ಯವಾಗಿರುವುದಕ್ಕೆ ಹೆಮ್ಮೆ ಪಡುತ್ತೇನೆ. ಬಾಂಗ್ಲಾದೇಶದಲ್ಲಿ ನಡೆದ ೨೦೧೪ರ ಟ್ವೆಂಟಿ -೨೦ ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಗೆಲುವಿಗೆ ಕೊಡುಗೆ ನೀಡಿರುವುದು ನನ್ನ ಜೀವನದ ಪ್ರಮುಖ ಅಂಶ ಎಂದು ಪೆರೆರಾ ಎಸ್‌ಎಲ್‌ಸಿಗೆ ಬರೆದ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ರಾಷ್ಟ್ರೀಯ ತಂಡದ ಯಶಸ್ಸಿಗೆ ಪೆರೆರಾ ಅವರ ಕೊಡುಗೆಯನ್ನು ಎಸ್‌ಎಲ್‌ಸಿ ಶ್ಲಾಘಿಸಿದೆ. ತಿಸಾರಾ ಉತ್ತಮ ಆಲ್‌ರೌಂಡರ್ ಆಗಿದ್ದು. ಅವರು ಶ್ರೀಲಂಕಾ ಕ್ರಿಕೆಟ್‌ಗೆ ಆಟಗಾರನಾಗಿ ಅಪಾರ ಕೊಡುಗೆ ನೀಡಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್‌ನ ಸಿಇಒ ಆಶ್ಲೇ ಡಿ ಸಿಲ್ವಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.