`ಕ್ರಾಂತಿ’ ಡಬ್ಬಿಂಗ್ ಆರಂಭ ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟು..

•   ಚಿ.ಗೋ ರಮೇಶ್

 “ಯಜಮಾನ” ಚಿತ್ರದ ಬಳಿಕ ನಿರ್ಮಾಪಕರಾದ ಶೈಲಜಾ ನಾಗ್, ಬಿ.ಸುರೇಶ್ ದಂಪತಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗಾಗಿ ನಿರ್ಮಾಣ ಮಾಡುತ್ತಿರುವ ಬಹು ನಿರೀಕ್ಷಿತ ಚಿತ್ರ “ ಕ್ರಾಂತಿ”. ಅದ್ದೂರಿ ಬಜೆಟ್, ಮೇಕಿಂಗ್, ಬಹುತಾರಾಗಣ ಸೇರಿದಂತೆ ವಿವಿಧ ಕಾರಣಕ್ಕಾಗಿ “ಕ್ರಾಂತಿ” ಚಿತ್ರರಂಗದಲ್ಲಿ  ಸದ್ದಿಲ್ಲದೆ “ಕ್ರಾಂತಿ”ಯ ಕಹಳೆ ಮೊಳಗಿಸಿದೆ. ಚಿತ್ರ ಯಾವಾಗ ತೆರೆಗೆ ಬರಲಿದೆ ಎನ್ನುವ ಕುತೂಹಲ ಅಭಿಮಾನಿಗಳನ್ನು ತುದಿಗಾಲ ಮೇಲೆ ನಿಲ್ಲುವಂತೆ ಮಾಡಿರುವ ಚಿತ್ರ ಇದು.

ವಿಭಿನ್ನ ಸಂಗೀತದ ಮೂಲಕ ಅಭಿಮಾನಿಗಳನ್ನು ಮೋಡಿ ಮಾಡಿರುವ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ, ಆಕ್ಷನ್ ಕಟ್ ಹೇಳಿರುವ ಚಿತ್ರ “ಕ್ರಾಂತಿ”. ಜೊತೆಗೆ ಚಿತ್ರಕ್ಕೆ ಅವರೇ ಸಂಗೀತ ನೀಡಿದ್ದಾರೆ.

ಇತ್ತೀಚೆಗಷ್ಟೇ ಚಿತ್ರತಂಡ ಪೋಲೆಂಡ್‍ನಲ್ಲಿ ಚಿತ್ರೀಕರಣ ಪೂರ್ಣಗೊಳಿಸಿ ವಾಪಾಸ್ಸಾಗಿತ್ತು. ಇದರ ಬೆನ್ನಲ್ಲೇ “ ಕ್ರಾಂತಿ” ಚಿತ್ರತಂಡ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದೆ. “ಕ್ರಾಂತಿ” ಚಿತ್ರದ ಡಬ್ಬಿಂಗ್ ಆರಂಭವಾಗಿದ್ದು ನಟ ದರ್ಶನ್ ಅವರು ತಮ್ಮ ಪಾತ್ರದ ಡಬ್ಬಿಂಗ್‍ನಲ್ಲಿ ಭಾಗಿಯಾಗಿದ್ದಾರೆ.ಇದು ಅಭಿಮಾನಿಗಳಿಗೆ ಚಿತ್ರದ ಮೇಲಿರುವ ನಿರೀಕ್ಷೆ ಮತ್ತಷ್ಟು ಹೆಚ್ಚು ಮಾಡಿದ್ದು ತಮ್ಮ ಅಚ್ಚು ಮೆಚ್ಚಿನ “ಬಾಸ್” ಅನ್ನು ಯಾವಾಗ ತೆರೆಯ ಮೇಲೆ ನೋಡುತ್ತೇವೆ ಎಂದು ಚಾತಕ ಪಕ್ಷಿಯಂತೆ ಎದುರು ನೋಡುವಂತೆ ಮಾಡಿದೆ.

ಅಕ್ಷರ ಕ್ರಾಂತಿಗಾಗಿ ಹೋರಾಡುವ ನಾಯಕನಾಗಿ ದರ್ಶನ್ ಅವರು ಚಿತ್ರದಲ್ಲಿ ಕಾಸಿಕೊಂಡಿದ್ದಾರೆ.ಜೊತೆಗೆ ಭರಪೂರ ಆಕ್ಷನ್, ಲವ್, ಕಮರ್ಷಿಯಲ್ ಮಾಸ್ ಎಲಿಮೆಂಟ್ ಹೊಂದಿರುವ ಮನರಂಜನಾತ್ಮಕ ಚಿತ್ರ ಇದು.

ದರ್ಶನ್ ಅವರಿಗೆ ಜೋಡಿಯಾಗಿ ರಚಿತಾ ರಾಮ್ ಮಗದೊಮ್ಮೆ ಕಾಣಿಸಿಕೊಂಡಿದ್ದಾರೆ.ಹಿರಿಯ ಕಲಾವಿದರಾದ ಸುಮಲತಾ ಅಂಬರೀಷ್, ಕ್ರೇಜಿಸ್ಟಾರ್ ರವಿಚಂದ್ರನ್, ಸಾಧುಕೋಕಿಲಾ ಸೇರಿದಂತೆ ಹಲವು ಕಲಾವಿದರ ದೊಡ್ಡ ದಂಡು ಚಿತ್ರದಲ್ಲಿದೆ. ಕ್ರಾಂತಿಗೆ ಬೆಂಗಳೂರು, ಮೈಸೂರು ಸೇರಿದಂತೆ ಹಲವು ಕಡೆ ಚಿತ್ರೀಕರಣ ಮಾಡಲಾಗಿದೆ.

ದರ್ಶನ್ ಸಾರ್ ಭಾಗಿ

“ಕ್ರಾಂತಿ” ಚಿತ್ರದ ಡಬ್ಬಿಂಗ್ ಆರಂಭವಾಗಿದ್ದು ದರ್ಶನ್ ಸಾರ್ ಡಬ್ಬಿಂಗ್‍ನಲ್ಲಿ ಪಾಲ್ಗೊಂಡಿದ್ದಾರೆ. ಒಮ್ಮೆ ಸಿನಿಮಾ ಕಾರ್ಯ ಸಂಪೂರ್ಣ ಮುಗಿದ ಮೇಲೆ ಚಿತ್ರವನ್ನು ಯಾವಾಗ ಬಿಡುಗಡೆ ಮಾಡಬೇಕು ಎನ್ನುವುದನ್ನು ನಿರ್ಧಾರ ಮಾಡುತ್ತೇವೆ.ಒಳ್ಳೆಯ ಚಿತ್ರ ನಿಡುವುದು ನಮ್ಮ ಉದ್ದೇಶ.”

– ಶೈಲಜಾ ನಾಗ್, ನಿರ್ಮಾಪಕಿ