ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರ ಬಲಿದಾನ ಮರೆಯುವಂತಿಲ್ಲ

ಕಲಬುರಗಿ:ಮಾ.23: ಭಗತಸಿಂಗ್,ಸುಖದೇವ ಮತ್ತು ರಾಜಗುರು ಅವರು ಬ್ರಿಟೀಷರನ್ನು ಭಾರತದಿಂದ ಹೊಡೆದೋಡಿಸಿ, ನಮ್ಮ ದೇಶಕ್ಕೆ ಸ್ವಾತಂತ್ರ್ಯವನ್ನು ನೀಡುವಲ್ಲಿ ಸಾಕಷ್ಟು ಪ್ರಯತ್ನಿಸಿದ್ದಾರೆ.ಅದಕ್ಕಾಗಿ ಬಾಲ್ಯದಲ್ಲಿಯೇ ನೇಣುಗಂಬ ಏರಿದ ಅವರು ಸ್ವಾತಂತ್ರ್ಯ ಹೋರಾಟದ ತ್ರಿರತ್ನಗಳಾಗಿದ್ದಾರೆ. ಅವರಲ್ಲಿರುವ ಅಪ್ಪಟ ದೇಶಭಕ್ತಿ ಇಂದಿನ ಯುವಕರಿಗೆ ಮಾದರಿಯಾಗಿದ್ದು, ಅವರ ಬಲಿದಾನ ಅಮರವಾಗಿದೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.
ನಗರದ ಮಹಾದೇವ ನಗರದಲ್ಲಿರುವ ಸ್ವಾತಿ, ಶಿವಾ ವಿದ್ಯಾ ಮಂದಿರ ಪ್ರೌಢಶಾಲೆಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ಭಗತಸಿಂಗ, ಸುಖದೇವ ಮತ್ತು ರಾಜಗುರು ಹುತಾತ್ಮ ದಿನಾಚರಣೆಯಲ್ಲಿ ಪುಷ್ಪ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಗಾರಂಪಳ್ಳಿ ಮಾತನಾಡಿ, ಬ್ರಿಟಿಷರಿಗೆ ಸಿಂಹ ಸ್ವಪ್ನರಾಗಿ ಕಾಡಿದ್ದ ಭಗತಸಿಂಗ, ಸುಖದೇವ ಮತ್ತು ರಾಜಗುರು ಅಪ್ಪಟ ದೇಶಭಕ್ತರಾಗಿದ್ದಾರೆ. ಇಂತಹ ಸ್ವಾತಂತ್ರ ಹೋರಾಟಗಾರರೇ ದೇಶದ ನೈಜ ಹಿರೋಗಳಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಶಿವಯೋಗೆಪ್ಪಾ ಎಸ್. ಬಿರಾದಾರ, ಶಾಲೆಯ ಮುಖ್ಯ ಶಿಕ್ಷಕಿ ಸಂಗೀತಾ ಸಿ.ಗಾರಂಪಳ್ಳಿ, ಶಿಕ್ಷಕರಾದ ಪ್ರೀತಿ ಜೆ.ಬಿರಾದಾರ, ಚಂದ್ರಲೇಖಾ ಪೂರ್ಮಕರ್, ಸಾವಿತ್ರಿ ಎನ್.ಪಾಟೀಲ, ಕಾಶಮ್ಮ ಎಸ್.ಚಿಂಚೋಳಿ, ವರ್ಷಾರಾಣಿ, ಈಶ್ವರಿ ಹಂಗರಗಿ, ರೋಹಿತ್ ಸಿ.ವೈ., ಶಿಲ್ಪಾ ಎಸ್.ಕೆ., ಮಾಯಾದೇವಿ ಸೇರಿದಂತೆ ಶಾಲೆಯ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.