ಕ್ಯೂ ಆರ್ ಕೋಡ್ ಅಳವಡಿಸಿ ದಂಡ ಪಾವತಿ ನೋಟಿಸ್

ಬೆಂಗಳೂರು,ಮಾ.೧-ನಗರದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ವಾಹನದ ಮಾಲೀಕರಿಗೆ ಇದೇ ಮೊದಲ ಬಾರಿಗೆ ನೋಟಿಸ್‌ನಲ್ಲಿ ಕ್ಯೂ ಆರ್ ಕೋಡ್ ಅಳವಡಿಸಿ ದಂಡ ಪಾವತಿಯ ನೋಟಿಸ್ ಕಳುಹಿಸಲು ನಗರ ಸಂಚಾರ ವಿಭಾಗದ ಪೊಲೀಸರು ಮುಂದಾಗಿದ್ದಾರೆ.
ನಗರದಲ್ಲಿ ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ಇಂದಿನಿಂದ ಕ್ಯೂ ಆರ್ ಕೋಡ್ ಒಳಗೊಂಡಿರುವ ನೋಟಿಸ್ ಕಳುಹಿಸಲಾಗುತ್ತಿದೆ. ಆಟೊಮೇಷನ್ ಸೆಂಟರ್‌ನಿಂದ ನೋಟಿಸ್ ಜಾರಿ ಮಾಡಲಾಗುತ್ತಿದ್ದು, ಅಂಚೆ ಮೂಲಕ ಸವಾರರ ಮನೆ ಬಾಗಿಲಿಗೆ ತಲುಪಲಿದೆ.
ನಿಯಮ ಉಲ್ಲಂಘನಾ ದಿನಾಂಕ, ಸಮಯ, ಯಾವ ರೀತಿ ಸಂಚಾರ ಉಲ್ಲಂಘನೆ ಹಾಗೂ ದಂಡದ ಮೊತ್ತದ ಜೊತೆಗೆ ನೋಟಿಸ್ ಬಲಭಾಗದಲ್ಲಿ ಕ್ಯೂ ಆರ್ ಕೋಡ್ ನಮೂದಿಸಲಾಗಿದೆ. ಸವಾರರು ಸ್ಕ್ಯಾನ್ ಮಾಡಿ, ತಾನು ಉಲ್ಲಂಘನೆ ಮಾಡಿರುವ ಬಗ್ಗೆ ವಿಡಿಯೋ ಹಾಗೂ ಫೋಟೊ ವೀಕ್ಷಿಸಬಹುದಾಗಿದೆ.
ದಂಡ ಪಾವತಿಸಲು ಆನ್‌ಲೈನ್ ಮೂಲಕ ಲಿಂಕ್ ಕಲ್ಪಿಸಲಾಗಿದೆ. ೨೦೨೧ ರ ನಂತರ ಉಲ್ಲಂಘಿಸಿದ ವಿಡಿಯೋ ಅಥವಾ ಫೋಟೊ ಲಭ್ಯವಿರಲಿವೆ. ಈಗಾಗಲೇ ೧೩೩ ಮಾಲೀಕರಿಗೆ ಈ ರೀತಿಯ ನೋಟೀಸ್ ಕಳುಹಿಸಿರುವುದಾಗಿ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.