ಕ್ಯಾಸಿನೋ ಏಜೆಂಟ್‌ರಿಗೆ ಇ.ಡಿ ಶಾಕ್

ಹೈದರಾಬಾದ್, ಜು.೩೦-ಹವಾಲಾ ಹಣ ವರ್ಗಾವಣೆ ಪ್ರಕರಣ ಸಂಬಂಧ ಕ್ಯಾಸಿನೊ ಡೀಲರ್‌ಗಳು ಮತ್ತು ಏಜೆಂಟ್‌ಗಳಿಗೆ ಸೇರಿದ ಏಳು ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ವೇಳೆ ವಿದೇಶಿ ಪ್ರಾಣಿಗಳು ಕಂಡು ಅಚ್ಚರಿಯಾಗಿದ್ದಾರೆ.
ಜುಲೈ ೨೭ರಂದು ಮಾಧವ ರೆಡ್ಡಿ ಎಂಬ ಉದ್ಯಮಿಯ ಬೋವೆನ್‌ಪಲ್ಲಿಯ ನಿವಾಸ ಹಾಗೂ ಚಿಕೋಟಿ ಪ್ರವೀಣ್ ಎಂಬುವರ ಸೈದಾಬಾದ್ ನಿವಾಸದ ಒಳಗೊಂಡಿತೆ ಇತರೆ ೬ ಸ್ಥಳಗಳಲ್ಲೂ ದಾಳಿ ಮಾಡಲಾಗಿತ್ತು.
ಈ ವೇಳೆ ಇಡಿ ಅಧಿಕಾರಿಗಳು ಲ್ಯಾಪ್‌ಟಾಪ್ ಮೊಬೈಲ್ ಫೋನ್ ಹಾಗೂ ದಾಖಲೆಗಳನ್ನು ವಶಪಡಿಸಿಕೊಂಡಿದ್ದು, ಹೆಚ್ಚುವರಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಮತ್ತೊಂದೆಡೆ, ಚಿಕೋಟಿ ಪ್ರವೀಣ್ ಅವರ ಫಾರ್ಮ್‌ಹೌಸ್‌ನಲ್ಲಿ ಹಲವು ಪ್ರಾಣಿಗಳನ್ನು ಸಾಕಿರುವ ಬಗ್ಗೆ ಮಾಹಿತಿ ದೊರೆತ ಬೆನ್ನಲ್ಲೇ ಅರಣ್ಯಾಧಿಕಾರಿಗಳು ಸಹ ಪ್ರವೀಣ್ ಫಾರ್ಮ್‌ಹೌಸ್ ಮೇಲೆ ದಾಳಿ ನಡೆಸಿದ್ದಾರೆ.
ಹಾಗೆ, ವನ್ಯಜೀವಿ ಸಂರಕ್ಷಣಾ ಕಾಯಿದೆಯ ನಿಯಮಗಳ ಉಲ್ಲಂಘನೆಯಾಗಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮುಂಗುಸಿ, ವಿವಿಧ ರೀತಿಯ ದೊಡ್ಡ ಗಾತ್ರದ ನಾಯಿಗಳು, ವಿದೇಶಿ ಜೇಡಗಳು, ಕುದುರೆಗಳು (ಕ್ರಾಸ್ ಬ್ರೀಡ್ ಕುದುರೆಗಳು ಸೇರಿದಂತೆ), ಹಂಸಗಳು, ಬಾತುಕೋಳಿಗಳು, ಗಿಳಿಗಳು, ಪಾರಿವಾಳಗಳು, ಆಸ್ಟ್ರಿಚ್, ಹಸುಗಳು ಮತ್ತು ಎಮ್ಮೆಗಳು ಕಂಡುಬಂದಿವೆ.
ಕುದುರೆಯೊಂದಕ್ಕೆ ಖ್ಯಾತ ಹಾಲಿವುಡ್ ನಟಿ ಏಂಜೆಲಿನಾ ಜೋಲಿ ಎಂಬ ಹೆಸರನ್ನಿಟ್ಟಿದ್ದಾರೆ ಎಂದೂ ವರದಿಯಾಗಿದೆ.
ಜೂನ್ ೧೦ ಹಾಗೂ ೧೩ ರ ನಡುವೆ ತೆಲಂಗಾಣದ ಪಂಟರ್‌ಗಳು ನೇಪಾಳದ ಅತಿ ದೊಡ್ಡ ಕ್ಯಾಸಿನೋವಿನಿಂದ ಕೋಟ್ಯಂತರ ರೂ. ಹಣವನ್ನು ಜೂಜು ಸೇರಿ ಹಲವು ಈವೆಂಟ್‌ಗಳಿಗೆ ಖರ್ಚು ಮಾಡಿದ್ದಾರೆ ಎನ್ನಲಾಗಿದೆ.
ಅಲ್ಲದೆ, ಅವರು ಹೈದರಾಬಾದ್‌ನಿಂದ ಪಶ್ಚಿಮ ಬಂಗಾಳದ ಬಾಗ್ಡೋಗ್ರಾ ವಿಮಾನ ನಿಲ್ದಾಣಕ್ಕೆ ಚಾರ್ಟಡ್ ವಿಮಾನಗಳಲ್ಲಿ ತೆರಳಿದ್ದರು, ನೇಪಾಳದ ಕ್ಯಾಸಿನೋಗೆ ಹೋಗಿದ್ದರು ಎಂದೂ ಹೇಳಲಾಗಿದೆ. ಈ ಮಾಹಿತಿಯ ಆಧಾರದ ಮೇಲೆ ಇಡಿ ಅಧಿಕಾರಿಗಳು ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ (ಫೆಮಾ) ದ ಉಲ್ಲಂಘನೆಯಾಗಿದ್ಯಾ ಎಂಬ ಬಗ್ಗೆ ತನಿಖೆ ಮಾಡಲು ಇಡಿ ರೇಡ್ ನಡೆದಿದೆ ಎಂದು ತೀಳಿದುಬಂದಿದೆ.