ಕ್ಯಾಲೆಂಡರ್‌ನಂತೆ ಹೊಸ ಹೆಜ್ಜೆ ಇಡೋಣ-ಗೋಪಿನಾಥ್

ಕೋಲಾರ,ಜ,೨- ಜೀವನದ ಜಂಜಾಟದ ನಡುವೆ ವೈಮನಸ್ಯ ತೊರೆದು ಮುಕ್ತವಾಗಿ ಮಾತಾಡೋಣ, ಹೊಸ ಕ್ಯಾಲೆಂಡರ್‌ನಂತೆ ಹೊಸ ಹೆಜ್ಜೆ ಇಡುತ್ತಾ ಧನಾತ್ಮಕ ಚಿಂತನೆಯೊಂದಿಗೆ ಸಾಗೋಣ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಕರೆ ನೀಡಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಹೊಸ ವರ್ಷದ ಮುನ್ನಾದಿನ ನಡೆದ ಸ್ನೇಹಮಿಲನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಹೊಸ ವರ್ಷದಲ್ಲಿ ಪ್ರತಿಯೊಂದು ನೇರನುಡಿಯಿರಲಿ, ಪ್ರತಿಯೊಂದನ್ನೂ ಧನಾತ್ಮಕವಾಗಿ ಸ್ವೀಕರಿಸೋಣ,ನಾವು ಯಾರನ್ನು ಹಾಳು ಮಾಡಲು ಸಾಧ್ಯವಿಲ್ಲ, ಅದರಿಂದ ನಮ್ಮ ಮನಸ್ಸೇ ಹಾಳಾಗುತ್ತದೆ ಎಂಬ ಅರಿವು ಅಗತ್ಯ ಎಂದು ತಿಳಿಸಿ, ಜಿ.ಸೋಮಶೇಖರ್ ನೆನಪಿನಲ್ಲಿ ಛಾಯಾಗ್ರಾಹಣ ವಸ್ತುಪ್ರದರ್ಶನ ನಡೆಸುವ ಇಂಗಿತ ವ್ಯಕ್ತಪಡಿಸಿ, ಪದಬಂಧ ರಚನೆಯಲ್ಲಿ ಜಿಲ್ಲೆಯಲ್ಲಿ ಹೆಸರುಮಾಡಿದ್ದ ಅ.ನಾ.ಪ್ರಹ್ಲಾದರಾವ್ ಅವರನ್ನು ಸ್ಮರಿಸಿದರು.
ಹಿರಿಯ ಪತ್ರಕರ್ತ ಎಂ.ಜಿ.ಪ್ರಭಾಕರ್ ಮಾತನಾಡಿ, ಕೋಲಾರ ಜಿಲ್ಲೆಯ ಮಟ್ಟಿಗೆ ಶಾಸಕಾಂಗ ದಿವಾಳಿಯಾಗಿದೆ, ರಸ್ತೆಗಳು ಹಾಳಾಗಿದ್ದರೂ ಕೇಳೋರಿಲ್ಲ, ಪತ್ರಕರ್ತರು ಈ ಹಾದಿಯಲ್ಲಿ ಸಾಗುವುದು ಬೇಡ, ಜಿಲ್ಲೆಯ ಅಭಿವೃದ್ದಿಯನ್ನು ಅವನತಿಗೆ ತಳ್ಳುವ ರಾಜಕಾರಣಿಗಳ ಪ್ರಯತ್ನಕ್ಕೆ ನಾವು ಸಹಕಾರ ನೀಡುವುದು ಬೇಡ ಎಂದರು.
ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸದಸ್ಯ ಕೆ.ಎಸ್.ಗಣೇಶ್ ಮಾತನಾಡಿ, ಎಲ್ಲರ ಅಭಿಪ್ರಾಯದಂತೆ ಸಂಘ ಮುನ್ನಡೆಸುವ ಜವಾಬ್ದಾರಿ ಎಲ್ಲರ ಮೇಲೂ ಇದೆ, ಇಲ್ಲಿ ಪ್ರತಿಯೊಬ್ಬರೂ ಜವಾಬ್ದಾರರೇ ಎಂದ ಅವರು, ವಾರ್ತಾ ಇಲಾಖೆ-ಪತ್ರಕರ್ತರ ನಡುವೆ ಮೊದಲು ಇದ್ದ ಸಂಬಂಧ ಇಲ್ಲವಾಗಿದೆ ಇದನ್ನು ಸರಿಪಡಿಸುವ ಕೆಲಸವಾಗಬೇಕು ಎಂದು ತಿಳಿಸಿದರು.
ರಾಜ್ಯಕಾರ್ಯಕಾರಿ ಸದಸ್ಯ ವಿ.ಮುನಿರಾಜು ಮಾತನಾಡಿ, ಕಳೆದೆರಡು ವರ್ಷಗಳಲ್ಲಿ ಕೊರೋನಾ ಹಾವಳಿಯಿಂದ ಪತ್ರಕರ್ತರು ಸಂಕಷ್ಟಕ್ಕೀಡಾದರು. ಇದೀಗ ಒಳ್ಳೆಯ ಕಾಲ ಬಂದಿದೆ, ದ್ವೇಷ,ಅಸೂಯೆ ಬಿಡೋಣ, ಎಲ್ಲರೂ ಹೊಸ ವರ್ಷದಲ್ಲಿ ಒಟ್ಟಾಗಿ ಮುನ್ನಡೆಯೋಣ ಎಂದು ಕರೆ ನೀಡಿದರು.
ಹಿರಿಯ ಸಹಕಾರಿ ಅಬ್ಬಣಿ ಶಂಕರ್, ಕಳೆದ ವರ್ಷ ಸಿಹಿ,ಕಹಿ ಹಂಚಿಕೊಂಡಿದ್ದೇವೆ, ಭವನದಲ್ಲಿ ನಡೆಯುವ ಸುದ್ದಿಗೋಷ್ಟಿಗಳಲ್ಲಿ ಪಕ್ಷಗಳ ಕಾರ್ಯಕರ್ತರು ತುಂಬುವು ದನ್ನು ತಡೆಯಬೇಕು, ಹಲವಾರು ಪತ್ರಕರ್ತರಿಗೆ ಆಸನಗಳೇ ಇಲ್ಲದ ಪರಿಸ್ಥಿತಿ ಎದುರಾಗಿದೆ, ಇದನ್ನು ಸರಿಪಡಿಸಿ ಎಂದು ಮನವಿ ಮಾಡಿದರು.
ಜ.೧೪ ಸಂಕ್ರಾಂತಿ ಸುಗ್ಗಿ ಆಚರಿಸೋಣ-ಸುರೇಶ್
ಪತ್ರಕರ್ತರ ಸಂಘದ ಖಜಾಂಚಿ ಎ.ಜಿ.ಸುರೇಶ್‌ಕುಮಾರ್ ಮಾತನಾಡಿ, ಜ.೧೪ ರಂದು ಸಂಕ್ರಾಂತಿ ಸುಗ್ಗಿ ಆಚರಿಸೋಣ, ಎಲ್ಲ ಪತ್ರಕರ್ತರು ಕುಟುಂಬ ಸಮೇತ ಪತ್ರಕರ್ತರ ಭವನಕ್ಕೆ ಆಗಮಿಸಿ, ಮಧ್ಯಾಹ್ನ ೪ ಗಂಟೆಗೆ ಕಾರ್ಯಕ್ರಮ ನಡೆಸೋಣ, ಇಲ್ಲೇ ಬಂಗಾರಪೇಟೆ ಚಾಟ್ಸ್, ತಿಂಡಿ ವ್ಯವಸ್ಥೆ ಇದೆ, ಎಳ್ಳುಬೆಲ್ಲ, ಕಬ್ಬು ಹಂಚೋಣ ಎಂದು ಕರೆ ನೀಡಿದರು.
ಪತ್ರಕರ್ತ ಓಂಕಾರ ಮೂರ್ತಿ,ಬಿ.ಸುರೇಶ್ ಪರ್ತಕರ್ತರ ಜ್ಞಾನ ಹೆಚ್ಚಲು ಕಾರ್ಯಾಗಾರ, ಸಂವಾದ ಕಾರ್ಯಕ್ರಮಗಳು ಹೆಚ್ಚುನಡೆಯುವಂತಾಗಲಿ ಎಂದರು.ಪತ್ರಕರ್ತ ಪಾ.ಶ್ರೀ.ಅನಂತರಾಮ್ ಹೊಸ ವರ್ಷದ ಶುಭಾಷಯ ಕೋರಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಪತ್ರಕರ್ತರಾದ ರಾಜೇಂದ್ರ, ಸಚ್ಚಿದಾನಂದ, ಜಗದೀಶ್,ಮುನಿವೆಂಕಟೇಗೌಡ,ಮಮಿ,ಸ್ಕಂದಕುಮಾರ್, ರವಿ,ಮದನ,ಚಂದು,ರಾಘವೇಂದ್ರ,ಸುಧಾಕರ್, ಪದ್ಮನಾಭ್,ಮಹೇಶ್,ಬೆಟ್ಟಪ್ಪ, ಈಶ್ವರ್, ಪುರುಷೋತ್ತಮ್, ಗಂಗಾಧರ್, ಮುಕ್ತಿಯಾರ್,ಸತೀಶ್,ವೆಂಕಟೇಶ್ ಮತ್ತಿತರರು ಸ್ನೇಹಮಿಲನದಲ್ಲಿ ಪಾಲ್ಗೊಂಡು ಹೊಸ ವರ್ಷದ ಶುಭಾಷಯ ಸಲ್ಲಿಸಿದರು.