(ಸಂಜೆವಾಣಿ ವಾರ್ತೆ)
ವಿಜಯಪುರ :ಜು.27: ವಿಜಯಪುರ ತಾಲೂಕಿನ ಜಂಬಗಿ (ಆ) ಗ್ರಾಮದಲ್ಲಿ ಬೆಳೆದ 500 ಹೆಕ್ಟೆರ್ ಪ್ರದೇಶದ ದಾಳಿಂಬೆ ಬೆಳೆಗೆ (ಕ್ಯಾರರೋಗ) ದುಂಡಾಣು ಅಂಗ ಮಾರಿ ರೋಗಕ್ಕೆ ತುತ್ತಾಗಿ ದಾಳಿಂಬೆ ಬೆಳೆ ಹಾನಿ ಆಗಿದ್ದು, ಇದಕ್ಕೆ ಪರಿಹಾರ ಘೋಷಣೆ ಹಾಗೂ ವಿಮಾ ಹಣ ಮಂಜೂರು ಮಾಡುವಂತೆ ಆಗ್ರಹಿಸಿ ಜಂಬಗಿ (ಆ) ಗ್ರಾಮದ ಗ್ರಾಮಸ್ಥರು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಬಿ.ಪಾಟೀಲರಿಗೆ, ಶಾಸಕರಾದ ವಿಠ್ಠಲ ಕಟಕದೊಂಡ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ವಿಜಯಪುರ ತಾಲೂಕಿನ ಜಂಬಗಿ (ಆ) ಗ್ರಾಮದಲ್ಲಿ 500 ಹೆಕ್ಟೇರ್ ಪ್ರದೇಶದಲ್ಲಿ ಎಲ್ಲಾ ರೈತರು ದಾಳಿಂಬೆ ಬೆಳೆ ಬೆಳೆಯುತ್ತಿದ್ದು, ವಿಜಯಪುರ ಜಿಲ್ಲೆಯಲ್ಲೇ ಅತೀ ಹೆಚ್ಚು ದಾಳಿಂಬೆ ಬೆಳೆಯುವ ಗ್ರಾಮವಾಗಿದ್ದು, ಪ್ರತಿಯೊಬ್ಬರು ಎಪ್ರೀಲ್- 2023 ರಲ್ಲಿ ಚಾಟನಿ ಹೊಡೆದು ಬೆಳೆಯುತ್ತಿದ್ದು, ಸದರಿ ಬೆಳೆಯು 4 ತಿಂಗಳ ವಯಸ್ಸು ಆಗಿದ್ದು, 2 ತಿಂಗಳಲ್ಲಿ ಬೆಳೆಯು ಕಟಾವಿಗೆ ಬರುತ್ತಿದ್ದು, ಆದರೆ ಹವಾಮಾನ ವೈಪರಿತ್ಯದಿಂದ (ಕ್ಯಾರ) ದುಂಡಾಣು ಅಂಗ ಮಾರಿ ರೋಗಕ್ಕೆ ಬೆಳೆಯು ಸಂಪೂರ್ಣ 500 ಹೆಕ್ಟರ್ ಪ್ರದೇಶ ಈ ರೋಗಕ್ಕೆ ತುತ್ತಾಗಿದ್ದು, ರೈತರು ಇದರಿಂದ ಅತೀ ಸಂಕಷ್ಟ ಅನುಭವಿಸುತ್ತಿದ್ದು, ಪ್ರತಿಯೊಬ್ಬ ರೈತರು 2-3 ಎಕರೆಯಿಂದ ಸುಮಾರು 10 ಎಕರೆವರೆಗೆ ಬೆಳೆಯುತ್ತಿದ್ದು, ಪ್ರತಿಯೊಂದು ಎಕರೆಗೆ ಬೆಳೆಗೆ ಔಷಧ ಮತ್ತ ರಸಗೊಬ್ಬರ ಖರ್ಚು ಸರಿ ಸುಮಾರು 3 ರಿಂದ 5 ಲಕ್ಷ ರೂ. ವ್ಯಯ ಮಾಡಿದ್ದು, ಸದ್ಯ ಈ ಕ್ಯಾರ ರೋಗಕ್ಕೆ ತುತ್ತಾಗಿ ಸಂಪೂರ್ಣ ದಾಳಿಂಬೆ ಬೆಳೆಯು ನಾಶವಾಗಿರುತ್ತದೆ. ಇದರಿಂದ ರೈತರು ಕಷ್ಟ ಅನುಭವಿಸಿದಂತಾಗಿದೆ. ಕೆಲವೊಂದು ರೈತರು ಗ್ರಾಮದಲ್ಲಿ ಆತ್ಮಹತ್ಯೆಗೆ ಯತ್ನಿಸಿರುವದು ನಮ್ಮ ಗಮನಕ್ಕೆ ಬಂದಿದ್ದು, ನಾವು ಇನ್ನುಳಿದ ಗ್ರಾಮಸ್ಥರು ರೈತರ ಮನವೊಲಿಸಿದ್ದೇವೆ. ಕಾರಣ ರೈತರಿಗೆ ಸಂಬಂಧಪಟ್ಟ ಇಲಾಖೆಗೆ ಸೂಕ್ತ ಆದೇಶ ಮಾಡಿ ಹಾನಿಗೊಳಗಾದ ರೈತರಿಗೆ ಪರಿಹಾರ ನೀಡಬೇಕು. ಮತ್ತು ಪ್ರತಿಯೊಬ್ಬ ರೈತರು ಬೆಳೆಯ ವಿಮಾ ಕಂತು ಸಹ ತುಂಬಲಾಗಿದ್ದು, ಸಂಬಂಧಪಟ್ಟ ವಿಮೆ ಕಂಪನಿಗೆ ಸೂಕ್ತ ನಿರ್ದೇಶನ ಮಾಡಿ ವಿಮಾ ಹಣ ಬರುವಂತೆ ತಾವುಗಳು ಕ್ರಮ ಜರುಗಿಸಬೇಕು. ಹಾಗೂ ದಾಳಿಂಬೆ ಬೆಳೆಗೆ ಪರಿಹಾರ ಬೆಳೆಹಾನಿ ನೀಡದೇ ಹೋದರೆ ಎಲ್ಲಾ ರೈತರು ಸೇರಿ ಧರಣಿ ಹಮ್ಮಿಕೊಳ್ಳಲಾಗುವದು ಎಂದು ಆಗ್ರಹಪಡಿಸಿದರು.
ಈ ಸಂದರ್ಭದಲ್ಲಿ ಜಂಬಗಿ (ಆ) ಗ್ರಾಮದ ರೈತರಾದ ಸಿದ್ದು ಸಿ. ಗೇರಡೆ, ಡಿ.ಆರ್. ಸಂಕದ, ಬಸವರಾಜ ದಿಂಡವಾರ, ಚನ್ನಪ್ಪ ಜಮಖಂಡಿ, ಸೋಮನಾಥ ಕಾಪ್ಸೆ, ಶಿವು ಗಡಗಿ, ಅಣಮೇಶ ಜಮಖಂಡಿ, ಮುತ್ತು ದಿಂಡವಾರ, ಮಲಕಪ್ಪ ಹಿಟ್ನಳ್ಳಿ, ಮಲಕಪ್ಪ ಗು. ತೋಟದ, ಮಹಾದೇವ ಶೇಗುಣಸಿ, ಗಣಪತಿ ಸಿ. ಗಳವೆ, ಕುಮಾರ ಕಾಪ್ಸೆ, ಸುಮಾರು 100ಕ್ಕೂ ಹೆಚ್ಚು ರೈತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.