ಕ್ಯಾಬ್ ಸಂಸ್ಥೆಗಳಿಗೆ ವಂಚನೆ ಮೂವರು ಸೆರೆ

ಬೆಂಗಳೂರು,ಜೂ.೬-ಪ್ರೀ ಆಕ್ಟಿವೇಟೆಡ್ ಸಿಮ್ ಕಾರ್ಡ್‌ಗಳನ್ನು ದುರುಪಯೋಗಪಡಿಸಿ ಪ್ರತಿಷ್ಠಿತ ಕ್ಯಾಬ್ ಅಪರೇಟೀವ್ ಸಂಸ್ಥೆಗಳಿಗೆ ವಂಚನೆ ಮಾಡುತ್ತಿದ್ದ ಜಾಲವನ್ನು ಬೇಧಿಸಿರುವ ಸಿಸಿಬಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮನೋಜ್,ಸಚಿನ್ ಹಾಗೂ ಶಂಕರ್ ಅಲಿಯಾಸ್ ಶಂಕ್ರಿ ಬಂಧಿತ ಆರೋಪಿಗಳಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬಂಧಿತರಿಂದ ೧೦೫೫ ಪ್ರೀ ಅಕ್ಟಿವೇಟೆಡ್ ಮೊಬೈಲ್ ಸಿಮ್ ಕಾರ್ಡ್‌ಗಳು, ೧೫ ಮೊಬೈಲ್ ಪೋನ್, ೪ ಲ್ಯಾಪ್‌ಟಾಪ್, ಕಂಪ್ಯೂಟರ್ ಸಿಸ್ಟಮ್‌ಗಳ ಜಪ್ತಿ ಮಾಡಲಾಗಿದೆ ಎಂದು ಹೇಳಿದರು.
ಆರೋಪಿಗಳು ನಗರದಲ್ಲಿ ಬಾಡಿಗೆ ವಾಹನ ಸೇವೆ ನೀಡುತ್ತಿರುವ ಉಬರ್, ರ್‍ಯಾಪಿಡೋ ಕಂಪನಿಗಳಿಗೆ ಡ್ರೈವರ್ ಗಳನ್ನು ಹಾಗೂ ವಾಹನಗಳನ್ನು ನೋಂದಣಿ ಮಾಡುವ ಸಲುವಾಗಿ ವೆಂಡರ್‍ಶಿಪ್ ಪಡೆದು ಆನ್‌ಲೈನ್ ಮೂಲಕ ಡ್ರೈವರ್ ಮತ್ತು ವಾಹನಗಳನ್ನು ಅಟಾಚ್ ಮಾಡಿಸಿ ಬೇರೆಯವರ ಹೆಸರಿನಲ್ಲಿ ತೆಗೆದುಕೊಂಡಿದ್ದ ಸಾವಿರಾರು ಮೊಬೈಲ್ ಸಿಮ್‌ಕಾರ್ಡ್‌ಗಳನ್ನು ಉಪಯೋಗಿಸಿ, ಯಾವುದೇ ಸಂಚಾರ ಸೇವೆಯನ್ನು ನೀಡದೆ ಸಾಪ್ಟ್ ದುರುಪಯೋಗಪಡಿಸಿಕೊಂಡು ಸಂಚಾರಿ ಸೇವೆ ನೀಡಿದಂತೆ ಮಾಡಿ ಕಂಪನಿಗಳಿಂದ ಬರುತ್ತಿದ್ದ ಸಾವಿರಾರು ರೂಗಳ ಇನ್‌ಸೆಂಟಿವ್ ಹಣವನ್ನು ಪಡೆದು ಕಂಪನಿಗಳಿಗೆ ಮೋಸ ಮಾಡುತ್ತಿದ್ದರು ಎಂದರು.
ಆರೋಪಿ ಮನೋಜ್ ಉಬರ್ ಮತ್ತು ರ್ಯಾಪಿಡೋ ಕಂಪನಿಗಳ ವೆಂಡರ್ ಶಿಪ್ ಪಡೆದು ಮತ್ತೊಬ್ಬ ಆರೋಪಿ ಸ್ನೇಹಿತನಾದ ಸಚಿನ್ ಫೈನಾನ್ಸ್ ಕಂಪನಿಯಲ್ಲಿ ಸಾಲ ಕೊಡಿಸುವ ಕೆಲಸ ಮಾಡಿಕೊಂಡು ಇನ್ನೊಬ್ಬ ಆರೋಪಿ ಶಂಕ್ರಿ ವೋಡಾಪೋನ್ ಕಂಪನಿಯಲ್ಲಿ ಸಿಮ್ ಡಿಸ್ಟ್ರಿಬ್ಯೂಟರ್ ಆಗಿ ಕೆಲಸ ಮಾಡಿಕೊಂಡಿದ್ದು ಮೂವರು ಸೇರಿ ಸುಲಭವಾಗಿ ಹಣ ಮಾಡುವ ದುರುದ್ದೇಶದಿಂದ ಸಲುವಾಗಿ ಒಳಸಂಚು ರೂಪಿಸಿ ಮನೋಜ್ ಹೊಂದಿದ್ದ ಉಬರ್ ಮತ್ತು ರ್ಯಾಪಿಡೋ ವೆಂಡರ್ ಶಿಪ್ ಸಹಾಯದಿಂದ ಮನೋಜ್ ಒದಗಿಸುತ್ತಿದ್ದ ದಾಖಲಾತಿಗಳನ್ನು ಬಳಸಿ ಆನ್‌ಲೈನ್‌ನಲ್ಲಿ ಅಪಲೋಡ್ ಮಾಡಿ, ಶಂಕ್ರಿ ನೀಡುತ್ತಿದ್ದ ಫ್ರೀ ಆಕ್ಟಿವೇಟೆಡ್ ಸಿಮ್ ಕಾರ್ಡ್‌ಗಳನ್ನು ಬಳಸಿಕೊಂಡು ಕಾರು / ಬೈಕುಗಳು ಓಡುವ ರೀತಿಯಲ್ಲಿ ಮೊಬೈಲ್ ಪೋನ್/ಲ್ಯಾಪ್‌ಟಾಪ್ ಗಳ ಮೂಲಕ ಸಾಪ್ಟ್‌ವೇರ್ ಬಳಸಿ ಯಾವುದೇ ವಾಹನವನ್ನು ಚಲಿಸದೇ ಇದ್ದರೂ ವಾಹನಗಳು ಚಲಿಸಿದ ರೀತಿಯಲ್ಲಿ ಡಾಟಾ ಸೃಷ್ಟಿಸಿ ಕಂಪನಿಗಳಿಂದ ವೆಂಡರ್‍ಗೆ ಬರುವ ಇನ್‌ಸೆಂಟೀವ್ ಹಣವನ್ನು ಅಕ್ರಮವಾಗಿ ಪಡೆದುಕೊಂಡು ಹಂಚಿಕೊಳ್ಳುತ್ತಿರುವುದು ತನಿಖೆಯಲ್ಲಿ ದೃಡಪಟ್ಟಿರುತ್ತದೆ.

ಬೆಂಗಳೂರು ನಗರದ ಸೈಬರ್ ಕ್ರೈಂ ಪೋಲಿಸ್ ಠಾಣೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿ ಅವರಿಂದ ವಶಪಡಿಸಿಕೊಂಡಿರುವ ಸಿಮ್ ಕಾರ್ಡ್, ಮೊಬೈಲ್‌ಗಳನ್ನು ಪರಿಶೀಲನೆ ನಡೆಸುತ್ತಿರುವ ನಗರ ಪೊಲೀಸ್ ಆಯುಕ್ತ ದಯಾನಂದ್, ಜಂಟಿ ಪೊಲೀಸ್ ಆಯುಕ್ತ ಡಾ|| ಶರಣಪ್ಪ, ಡಿಸಿಪಿ ಯತೀಶ್ ಚಂದ್ರ, ಇನ್ಸ್‌ಪೆಕ್ಟರ್ ಹಜರೇಶ್ ಮತ್ತಿತರರು ಇದ್ದಾರೆ.

ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ಅವರುಗಳ ವಿಚಾರಣೆ ಮಾಡಿ ಅವರು ಕೃತ್ಯಕ್ಕೆ ಉಪಯೋಗಿಸುತ್ತಿದ್ದ ೧೦೫೫ ಪ್ರೀ ಅಕ್ಟಿವೇಟೆಡ್ ಮೊಬೈಲ್ ಸಿಮ್‌ಗಳು, ೧೫ ಮೊಬೈಲ್‌ಗಳು, ೪ ಲ್ಯಾಪ್‌ಟಾಪ್, ಒಂದು ಕಂಪ್ಯೂಟರ್ ಸಿಸ್ಟಮ್ ಮತ್ತು ಒಂದು ಬಯೋಮೆಟ್ರಿಕ್ ಡಿವೈಸ್ ಇವುಗಳನ್ನು ವಶಪಡಿಸಿಕೊಂಡಿರುತ್ತದೆ. ಈ ಆರೋಪಿಗಳ ವಿರುದ್ದ ಐಪಿಸಿ, ಟೆಲಿಗ್ರಾಪ್ ಆಕ್ಟ್ ಹಾಗೂ ಐಟಿ ಆಕ್ಟ್, ಗಳಡಿಯಲ್ಲಿ ತನಿಖೆ ಮುಂದುವರೆಸಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಂಟಿ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ ಡಿಸಿಪಿ ಯತೀಶ್ ಚಂದ್ರ ಅವರಿದ್ದರು.