ಕ್ಯಾಬ್ ಚಾಲಕ ಸೆರೆ 750 ಗ್ರಾಂ ಚಿನ್ನ ವಶ

ಬೆಂಗಳೂರು,ಆ.೨-ಪ್ರಯಾಣಿಸುವ ವೇಳೆ ಮೊಬೈಲ್ ಖಾಸಗಿ ವಿಚಾರ ಮಾತನಾಡಿದ ಮಹಿಳೆಯನ್ನು ಗುರಿಯಾಗಿಸಿಕೊಂಡು ಸಿನಿಮೀಯ ರೀತಿಯಲ್ಲಿ ೨೨ ಲಕ್ಷ ರೂ ನಗದು,೭೫೦ ಗ್ರಾಂ ಚಿನ್ನಾಭರಣ ಸುಲಿಗೆ ಮಾಡಿದ ಖತರ್ನಾಕ್ ಕ್ಯಾಬ್ ಚಾಲಕ ರಾಮಮೂರ್ತಿನಗರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಹೆಸರುಘಟ್ಟ ಮೂಲದ ಉಬರ್ ಕ್ಯಾಬ್ ಚಾಲಕ ಕಿರಣ್ ಕುಮಾರ್ ಬಂಧಿತ ಆರೋಪಿಯಾಗಿದ್ದು,ಆತನಿಂದ ಮಹಿಳೆಯಿಂದ ಸುಲಿಗೆ ಮಾಡಿದ ನಗದು ಹಾಗೂ ಚಿನ್ನಾಭರಣಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.
ಕಳೆದ ೨೦೨೨ರ ನವೆಂಬರ್‌ನಲ್ಲಿ ಮಹಿಳೆಯು ಇಂದಿರಾನಗರದಿಂದ ಬಾಣಸವಾಡಿವರೆಗೆ ಬುಕ್ ಮಾಡಿಕೊಂಡ ಕ್ಯಾಬ್ ನಲ್ಲಿ ಮಹಿಳೆಯು ಪ್ರಯಾಣಿಸುವ ವೇಳೆ ಆರೋಪಿ ಕಿರಣ್ ಕುಮಾರ್ ಆಕೆಯನ್ನು ಪರಿಚಯಿಸಿಕೊಂಡಿದ್ದ.
ಇದೇ ವೇಳೆ ಶಾಲಾ ಸ್ನೇಹಿತ ಬಗ್ಗೆ ಮಹಿಳೆ ಮಾತನಾಡಿದ್ದು,ಕೆಲ ದಿನಗಳ ನಂತರ ?ನಾನು ನಿಮ್ಮ ಬಾಲ್ಯ ಸ್ನೇಹಿತ? ಎಂದು ಮಹಿಳೆಗೆ ಕ್ಯಾಬ್ ಚಾಲಕ ಮೆಸೇಜ್ ಹಾಕಿದ್ದ.
ಹಳೇ ಸ್ನೇಹಿತ ಎಂದು ಫೋನ್‌ನಲ್ಲಿ ಸಂಪರ್ಕ ಬೆಳೆಸಿದ ಆರೋಪಿಯು ನಾನು ಆರ್ಥಿಕ ತೊಂದರೆಯಲ್ಲಿದ್ದೇನೆಂದು ಸಹಾಯ ಕೇಳಿದ್ದ. ಬಾಲ್ಯ ಸ್ನೇಹಿತ ಎಂದು ಕನಿಕರ ತೋರಿಸಿ ಮಹಿಳೆ ಹಣ ಕಳಿಸಿದ್ದರು.
ಹೀಗೆ ಕಳುಹಿಸಿದ ಸುಮಾರು ೨೨ ಲಕ್ಷ ರೂಗಳನ್ನು ಪಡೆದು ಚಾಲಕ ಕಿರಣ್ ಮೋಜು ಮಸ್ತಿ ಮಾಡಿದ್ದು ಆತನ ಅಸಲಿತನ ತಿಳಿದ ಆಕೆಗೆ ಇಷ್ಟು ದಿನ ಫೋನ್‌ನಲ್ಲಿ ಮಾತನಾಡಿದ್ದು ಬಾಲ್ಯ ಸ್ನೇಹಿತ ಅಲ್ಲ ಎನ್ನುವುದು ಗೊತ್ತಾಗಿದೆ.
ಮಹಿಳೆಗೆ ವಿಚಾರ ತಿಳಿಯುತ್ತಿದ್ದಂತೆ ಕ್ಯಾಬ್ ಚಾಲಕ ಬ್ಲ್ಯಾಕ್‌ಮೇಲ್ ಮಾಡತೊಡಗಿದ್ದ. ನಿನ್ನ ಮತ್ತು ನಿನ್ನ ಸ್ನೇಹಿತನ ವಿಚಾರ ಬಯಲು ಮಾಡಿ ನಿನ್ನ ಪತಿಗೆ ವಿಚಾರ ತಿಳಿಸಿ ಸಂಸಾರ ಹಾಳು ಮಾಡುತ್ತೇನೆ ಎಂದು ಬೆದರಿಸಿ ಚಿನ್ನಾಭರಣ ನೀಡುವಂತೆ ಬೇಡಿಕೆ ಇಟ್ಟಿದ್ದ.
ಹೀಗೆ ಮಹಿಳೆಯನ್ನು ಬೆದರಿಸಿ ಸುಮಾರು ೭೫೦ ಗ್ರಾಂ ಚಿನ್ನಾಭರಣಗಳನ್ನು ಸುಲಿಗೆ ಮಾಡಿದ್ದು, ಈ ಬಗ್ಗೆ ರಾಮಮೂರ್ತಿನಗರ ಠಾಣೆಯಲ್ಲಿ ಉಬರ್ ಕ್ಯಾಬ್ ಚಾಲಕ ಕಿರಣ್ ಕುಮಾರ್ ವಿರುದ್ಧ ಮಹಿಳೆಯು ಇಂದಿರಾನಗರ ಪೊಲೀಸರಿಗೆ ದೂರು ದಾಖಲಿಸಿದ್ದರು.
ಪ್ರಕರಣ ದಾಖಲಿಸಿದ ಪೊಲೀಸರು ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸಿ ಆತ ಸುಲಿಗೆ ಮಾಡಿ ಅಡವಿಟ್ಟಿದ್ದ ಚಿನ್ನಾಭರಣಗಳು ಹಾಗೂ ನಗದನ್ನು ಜಪ್ತಿ ಮಾಡಿದ್ದಾರೆ.