ಕ್ಯಾಬ್ ಚಾಲಕ ಸಾವು

ಬೆಂಗಳೂರು, ಮಾ.೩೧-ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಭಾಗದಲ್ಲಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಕ್ಯಾಬ್ ಚಾಲಕ ಇಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಗೆ (ಕೆಎಸ್‌ಟಿಡಿಸಿ) ಗುತ್ತಿಗೆ ಅಡಿಯಲ್ಲಿ ಟ್ಯಾಕ್ಸಿ ಚಲಾಯಿಸುತ್ತಿದ್ದ ರಾಮನಗರದ ಪ್ರತಾಪ್ ಮೃತಪಟ್ಟ ಕ್ಯಾಬ್? ಚಾಲಕರಾಗಿದ್ದಾರೆ.
ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದ ಪ್ರತಾಪ್, ಸಾಲ ಮಾಡಿ ಕಾರು ಖರೀದಿಸಿದ್ದರು. ಅದರ ದುಡಿಮೆಯಿಂದ ಬಂದ ಹಣದಲ್ಲೇ ಜೀವನ ನಿರ್ವಹಣೆ ಮಾಡುತ್ತಿದ್ದರು. ಆದರೆ, ಇತ್ತೀಚೆಗೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನೊಂದು ನಿನ್ನೆ ಸಂಜೆ ೪:೩೦ರ ವೇಳೆ ವಿಮಾನ ನಿಲ್ದಾಣದ ಪಿಕ್‌ಅಪ್ ಪಾಯಿಂಟ್?ನಲ್ಲಿ ಟ್ಯಾಕ್ಸಿಯೊಳಗೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಮೂಲಕ ಆತ್ಮಹತ್ಯೆಗೆ ಯತ್ನಿಸಿದ್ದರು.
ಭದ್ರತಾ ಸಿಬ್ಬಂದಿ ಕಾರಿನ ಗಾಜು ಒಡೆದು ತೀವ್ರವಾಗಿ ಗಾಯಗೊಂಡಿರುವ ಅವರನ್ನು ನಿಲ್ದಾಣ ಸಮೀಪದ ಆಸ್ಪತ್ರೆಯೊಂದಕ್ಕೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮುಂಜಾನೆ ೫.೩೦ರ ವೇಳೆ ಮೃತಪಟ್ಟಿದ್ದಾರೆ.
ಪ್ರತಿಭಟನೆಗೆ ನಿರ್ಧಾರ:
ಪ್ರತಾಪ್ ಸಾವು ಟ್ಯಾಕ್ಸಿ ಚಾಲಕರ ಆಕ್ರೋಶಕ್ಕೆ ಕಾರಣವಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶವವನ್ನಿಟ್ಟು ಪ್ರತಿಭಟನೆಗೆ ಮುಂದಾಗಿದ್ದಾರೆ. ಏಕರೂಪ ದರವನ್ನು ಸರ್ಕಾರ ನಿಗದಿ ಮಾಡಬೇಕು, ಕಡಿಮೆ ದರದಲ್ಲಿ ಸೇವೆ ನೀಡುತ್ತಿರುವ ಖಾಸಗಿ ಕ್ಯಾಬ್ ಸಂಸ್ಥೆಗಳಿಗೆ ಕಡಿವಾಣ ಹಾಕಬೇಕೆನ್ನುವುದು ಟ್ಯಾಕ್ಸಿ ಚಾಲಕರ ಆಕ್ರೋಶಕ್ಕೆ ಕಾರಣವಾಗಿದೆ.
ಸ್ಥಳಕ್ಕೆ ದೇವನಹಳ್ಳಿ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿ ಬಿಗಿಭದ್ರತೆ ಕೈಗೊಂಡಿದ್ದಾರೆ.