ಕ್ಯಾಬಿನೆಟ್ ನೇತೃತ್ವ ಯಾರುಮೇ 15ಕ್ಕೆ ಖರ್ಗೆ ಘೋಷಣೆ

ಬೆಂಗಳೂರು,ಮೇ೮:ತೀವ್ರ ಕುತೂಹಲ ಕೆರಳಿಸಿರುವ ರಾಜ್ಯ ವಿಧಾನಸಭಾ ಚುನಾವಣೆಯ ಮತದಾನಕ್ಕೆ ಎರಡೇ ದಿನ ಬಾಕಿ ಇದೆ. ಯಾರ ನೇತೃತ್ವದಲ್ಲಿ ಸಚಿವ ಸಂಪುಟ ಎಂಬ ವಿಚಾರವನ್ನು ಮೇ ೧೫ ರಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಘೋಷಣೆ ಮಾಡಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ೧೪೧ ಸ್ಥಾನ ಗೆಲ್ಲುವ ವಿಶ್ವಾಸವಿದೆ. ೧೫ನೇ ತಾರೀಖಿನಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಪಕ್ಷ ಘೋಷಿಸಿರುವ ಗ್ಯಾರೆಂಟಿಯನ್ನು ಅನುಷ್ಠಾನಗೊಳಿಸುತ್ತೇವೆ ಎಂದು ಹೇಳಿದರು.
ಬೆಂಗಳೂರಿನಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ ಒಳ್ಳೆಯ ಆಡಳಿತ ನೀಡುತ್ತೇವೆ, ರೈತರಿಗೆ ಕೆರೆಗಳನ್ನು ತುಂಬಿಸುತ್ತೇವೆ. ಹೆಣ್ಣು ಮಕ್ಕಳಿಗೆ ಹೆರಿಗೆ ಆಸ್ಪತ್ರೆ, ಮಕ್ಕಳಿಗೆ ಗ್ರಾಮಗಳಲ್ಲಿ ಉತ್ತಮ ಶಿಕ್ಷಣ ಒದಗಿಸುವುದಾಗಿ ಹೇಳಿದರು.
ಚುನಾವಣಾ ಆಯೋಗ ನೋಟಿಸ್ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಆಯೋಗದಿಂದ ನಮಗೆ ನೋಟಿಸ್ ಬಂದಿದೆ. ಇದಕ್ಕೆ ನಾನು ಉತ್ತರ ಕೊಟ್ಟಿದ್ದೀನಿ. ಈಗ ಅದಕ್ಕೆ ಆಧಾರ ಏನು ಎಂದು ಕೇಳಿದ್ದಾರೆ.
ಬಿಜೆಪಿ ಶಾಸಕ ಬಸವರಾಜ್ ಯತ್ನಾಳ್ ನೀಡಿರುವ ಹೇಳಿಕೆ ಮಾಧ್ಯಮಗಳಲ್ಲಿ ಗಮನಿಸಿದ್ದೇನೆ, ಅದೇ ರೀತಿ ಗೂಳಿಹಟ್ಟಿ ಶೇಖರ್, ನೆಹರೂ ಓಲೇಕರ್ ಹಾಗೂ ಸಿ.ಪಿ ಯೋಗೇಶ್ವರ್ ಅವರು ನೀಡಿರುವ ಹೇಳಿಕೆಗಳನ್ನು ಆಯೋಗಕ್ಕೆ ನೀಡುತ್ತೇವೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆಕೋಮು ಗಲಭೆಯಾಗುತ್ತದೆ ಎಂಬುದಾಗಿ ಕೇಂದ್ರಗೃಹ ಸಚಿವ ಅಮಿತ್ ಶಾ ಅವರಿಗೆ ಏಕೆ ನೋಟಿಸ್ ನೀಡಿಲ್ಲ ಎಂದು ಪ್ರಶ್ನಿಸಿದರು.