ಕ್ಯಾನ್ಸರ್ ರೋಗಿಗಳ ಅಲೆದಾಟ ತಪ್ಪಿಸಲು ವಿಮ್ಸ್‍ನಲ್ಲಿ ವಿಕಿರಣ ಚಿಕಿತ್ಸೆ ಪುನಾರಂಭ:

ಬಳ್ಳಾರಿ :ಮಾ.26- ಕಳೆದ ಮೂರು ವರ್ಷಗಳಿಂದ ಮುಚ್ಚಿದ್ದ ಇಲ್ಲಿನ ವಿಮ್ಸ್ ಆಸ್ಪತ್ರೆಯಲ್ಲಿ ಕ್ಯಾನ್ಸ್‍ರ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ವಿಕಿರಣ ಚಿಕಿತ್ಸಾ ವಿಭಾಗವನ್ನು ಮತ್ತೆ ಆರಂಭಮಾಡಲಾಗಿದೆ.
ಬಳ್ಳಾರಿ, ವಿಜಯನಗರ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಹಲವು ಜಿಲ್ಲೆಗಳು ಮತ್ತು ನೆರೆಯ ಆಂಧ್ರದ ಗಡಿ ಗ್ರಾಮಗಳ ಕ್ಯಾನ್ಸ್ ಸೋಂಕು ಪೀಡಿತ ಜನರು ಇಲ್ಲಿ ಈ ಮೊದಲು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ನೀಡುವ ಯಂತ್ರಗಳ ದುರಸ್ಥಿಯಿಂದಾಗಿ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ರೋಗಿಗಳು ವಿಕಿರಣ ಚಿಕಿತ್ಸೆಗಾಗಿ ದೂರದ ಬೆಂಗಳೂರು, ದಾವಣಗೆರೆ, ಹುಬ್ಬಳ್ಳಿ ಮೊದಲಾದ ಕಡೆ ಹೋಗಬೇಕಿತ್ತು. ಈ ಸಮಸ್ಯೆಯನ್ನು ಅರಿತ ವಿಮ್ಸ್ ನಿರ್ದೇಶಕ ಡಾ.ಗಂಗಾಧರಗೌಡ ಅವರು. ದುರಸ್ಥಿಯಲ್ಲಿದ್ದ ವಿಕಿರಣ ಚಿಕಿತ್ಸೆಯ ಯಂತ್ರಗಳನ್ನು ಸರಿಪಡಿಸಿ ಈಗ ಚಿಕಿತ್ಸೆಯನ್ನು ಪುನರಾಂಭ ಮಾಡಿಸಿದ್ದಾರೆ.
ವಿಮ್ಸ್ ಆಸ್ಪತ್ರೆಯಲ್ಲಿ ಈಗ ಬ್ರ್ಯಾಕೋಥೆರೆಪಿ ಮತ್ತು ರೆಡಿಯೇಷನ್ ಆಂಕಾಲಜಿ ಥೆರೆಪಿ ಚಿಕಿತ್ಸೆ ನೀಡಲಾಗುತ್ತಿದ್ದು ಇದು ಕ್ಯಾನ್ಸ್ ಪೀಡಿತ ರೋಗಿಗಳಿಗೆ ಮತ್ತು ಅವರ ಸಂಬಂಧಿಕರಿಗೂ ಸಂತಸ ತಂದಿದೆ.
ವೈದ್ಯಕೀಯ ಪರಿಕರಗಳು ಹಾಳಾಗಿದ್ದವು ಹಾಗಾಗಿ ಬಹು ದಿನಗಳಿಂದ ವಿಕಿರಣ ಚಿಕಿತ್ಸಾ ವಿಭಾಗ ಮುಚ್ಚಲಾಗಿತ್ತು. ಅವುಗಳನ್ನು ದುರಸ್ತಿ ಮಾಡಿಸುವ ಮೂಲಕ ವಿಕಿರಣ ಚಿಕಿತ್ಸಾ ವಿಭಾಗವನ್ನು ಮತ್ತೆ ಆರಂಭಿಸಲಾಗಿದೆ. ಸಾರ್ವಜನಿಕರು ಇದರ ಸದ್ಬಳಕೆ ಮಾಡಿಕೊಳ್ಳಬೇಕೆಂದು ವಿಮ್ಸ್ ನಿರ್ದೇಶಕ ಡಾ.ಗಂಗಾಧರ ಗೌಡ ಹೇಳಿದ್ದಾರೆ.