ಕ್ಯಾನ್ಸರ್ ಮುಕ್ತ ಸಮಾಜ ನಿರ್ಮಾಣದತ್ತ ನಮ್ಮ ಚಿತ್ತ: ಜಿಎಂ ಲಿಂಗರಾಜು

ಸಂಜೆವಾಣಿ ವಾರ್ತೆ

ದಾವಣಗೆರೆ. ಫೆ.5; ವಿಶ್ವ ಕ್ಯಾನ್ಸರ್ ದಿನದ ಪ್ರಯುಕ್ತ ಕ್ಯಾನ್ಸರ್ ರೋಗದ ಬಗ್ಗೆ ಅರಿವು ಮೂಡಿಸುವ ಮತ್ತು ಕ್ಯಾನ್ಸರ್ ವಿರುದ್ಧ ಹೋರಾಟವನ್ನು ಬೆಂಬಲಿಸುವ ಪ್ರಯತ್ನದಲ್ಲಿ ಜಿ.ಎಂ ಇನ್ಸ್ಟಿಟ್ಯೂಟ್ ಆಫ್ ಫಾರ್ಮಾಸ್ಟಿಕಲ್ ಸೈನ್ಸ್ ಅಂಡ್ ರಿಸರ್ಚ್ ಹಾಗೂ ಜಿ.ಎಂ ವಿಶ್ವವಿದ್ಯಾಲಯದ ನೇತೃತ್ವದಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಜನಜಾಗೃತಿ ಜಾಥ ಹಮ್ಮಿಕೊಳ್ಳಲಾಗಿತ್ತು. ಈ ಅಭಿಯಾನದಲ್ಲಿ ಮುಖ್ಯ ಅತಿಥಿಗಳಾಗಿ ಜಿ.ಎಂ ಸಮೂಹದ ಅಧ್ಯಕ್ಷರಾದ  ಜಿಎಂ ಲಿಂಗರಾಜು, ಶ್ರೀಶೈಲ ಎಜುಕೇಶನ್ ಟ್ರಸ್ಟ್ ನ ಟ್ರಸ್ಟಿ ಜಿ.ಎಸ್ ಅನಿತ್ ಕುಮಾರ್, ಜಿ.ಎಂ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಶಂಕಪಾಲ್, ಪ್ರೊ ಉಪಕುಲಪತಿಗಳಾದ ಡಾ.ಎಚ್.ಡಿ ಮಹೇಶಪ್ಪ, ಜಿಲ್ಲಾ ಆರೋಗ್ಯ ಅಧಿಕಾರಿಯಾದ ಡಾ. ಷಣ್ಮುಖಪ್ಪ ಹಾಗೂ ಜಿಲ್ಲಾ ಕಣ್ಗಾವಲು ಅಧಿಕಾರಿಯದ ಡಾ. ರಾಘವನ್ ಜಿ.ಡಿ, ಸಮಾಜಮುಖಿ ಕೆಲಸಗಳನ್ನು ಕೈಗೊಳ್ಳುವ ಕಲೆಗಾರ  ಅರುಣ್ ಕುಮಾರ್, ಜಿ.ಎಂ ಸಮೂಹ ಸಂಸ್ಥೆಗಳ ನಿರ್ವಹಣಾ  ಪ್ರತಿನಿಧಿಯಾದ  ವೈ.ಯು ಸುಭಾಷ್ ಚಂದ್ರ, ಜಿ.ಎಂ ವಿಶ್ವವಿದ್ಯಾಲಯದ ಮುಖ್ಯಸ್ಥರಾದ ಡಾ. ಜಿಎಂ ಪಾಟೀಲ್, ಹಾಗೂ ರಿಜಿಸ್ಟರ್ ಡಾ. ಸುನಿಲ್ ಕುಮಾರ್ ಬಿ.ಎಸ್, ಹಾಗೂ ದಾವಣಗೆರೆ ಜಿಲ್ಲೆಯ ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆಯ ಹೆಸರಾಂತ ಅಂಕೋಲಾಜಿಸ್ಟ್ ಡಾ. ಭಾರತಿ, ಜಿಲ್ಲೆಯ ಸಹಾಯಕ ಔಷಧ ನಿಯಂತ್ರಕರಾದ ಗಿರೀಶ್, ಜಿ.ಎಂ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಗಿರೀಶ್ ಬೋಳಕಟ್ಟಿ, ಜಿಲ್ಲೆಯ ನಾನಾ ವಿಭಾಗದ ನುರಿತ ವೈದ್ಯರು ಹಾಗೂ ಜಿ.ಎಂ ಸಮೂಹ ವಿದ್ಯಾಸಂಸ್ಥೆಗಳ ಪ್ರಾಂಶುಪಾಲರು, ಅಧ್ಯಾಪಕರು, ಬೋಧಕ ಹಾಗೂ  ಬೋಧಕೇತರ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಜಿಲ್ಲಾ ಸರ್ಕಾರಿ ಚಿಗಟೇರಿ ಆಸ್ಪತ್ರೆಯ ಆವರಣದಲ್ಲಿ ಕ್ಯಾನ್ಸರ್ ಸಂಬಂಧಿತ ಜಾಗೃತಿ ನಡಿಗೆಯನ್ನು ಆರಂಭಿಸಿ ದಾವಣಗೆರೆ ಜಿಲ್ಲೆಯ ವಿವಿಧ ಕಾಲೇಜಿನ ವೃತ್ತಿಪರ ಕೋರ್ಸ್ ಗಳ ವಿದ್ಯಾರ್ಥಿಗಳು ವಿಶ್ವಾರಾಧ್ಯ ಮತ್ತು ಚಿಗಟೇರಿ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಪಾಲ್ಗೊಂಡು ನಗರದ ಜಯದೇವ ವೃತ್ತದ ಬಳಿ ಬಂದು ಅಲ್ಲಿ ನಮ್ಮ ಗಣ್ಯ ವ್ಯಕ್ತಿಗಳು ಹೆಮ್ಮಾರಿ ರೋಗದ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿಯನ್ನು ಮೂಡಿಸಿದರು.  ಅಲ್ಲದೆ ಕ್ಯಾನ್ಸರ್ ಪೀಡಿತ ರೋಗಿಗಳಿಗೆ ಮಾನಸಿಕ ದೃಢತೆಯನ್ನು, ಮನೋಸ್ಥೈರ್ಯವನ್ನು, ಧೈರ್ಯವನ್ನು ತುಂಬಿದರು. ಈ ಜಾಗೃತಿ ನಡಿಗೆಯಲ್ಲಿ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅದರ ತಡೆಗಟ್ಟುವಿಕೆ,ಪತ್ತೆ ಹಚ್ಚುವುದು ಮತ್ತು ಸುಧಾರಿತ ಚಿಕಿತ್ಸೆ ನೀಡುವುದನ್ನು ಉತ್ತೇಜಿಸಲು ಪ್ರತಿ ವರ್ಷ ಫೆಬ್ರವರಿ 04  ರಂದು ವಿಶ್ವ ಕ್ಯಾನ್ಸರ್ ದಿನವನ್ನು ಆಚರಿಸಲಾಗುತ್ತದೆ. ಚಿಕಿತ್ಸೆ ನೀಡುವಲ್ಲಿ ಇರುವ ಅಡೆ-ತಡೆಗಳನ್ನು ಕಡಿಮೆ ಮಾಡುವುದು( ಕ್ಲೋಸ್ ದಿ ಕೇರ್ ಗ್ಯಾಪ್)  ಈ ಬಾರಿ ವಿಶ್ವ ಕ್ಯಾನ್ಸರ್ ದಿನದ ಧ್ಯೇಯವಾಗಿದೆ. ಹಾಗೂ ಈ ಅಭಿಯಾನದಲ್ಲಿ ಕ್ಯಾನ್ಸರ್ ಇಂದ ಗುಣಮುಖರಾದಂತ ಕೆಲವು ವ್ಯಕ್ತಿಗಳು ತಮ್ಮ ಅಭಿಪ್ರಾಯವನ್ನು, ಅನಿಸಿಕೆಗಳನ್ನು ಜನಸಾಮಾನ್ಯರೊಂದಿಗೆ ಹಂಚಿಕೊಂಡರು. ಸಾರ್ವಜನಿಕರಲ್ಲಿನ ಕ್ಯಾನ್ಸರ್ ಸಂಬಂಧಿತ ಭಯ, ಆತಂಕಗಳನ್ನು ದೂರಸರಿಸಿ “ಧೈರ್ಯಂ ಸರ್ವತ್ರ ಸಾಧನಂ” ಎಂದು ಹೇಳಿದರು. ಜಿಎಂ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಶಂಕಪಾಲ್ ಮತ್ತು ಪ್ರೊ ಉಪಕುಲಪತಿಗಳಾದ ಡಾ. ಮಹೇಶಪ್ಪ ಎಚ್ ಡಿ ಕ್ಯಾನ್ಸರ್ ರೋಗದ ಬಗ್ಗೆ ಸವಿಸ್ತಾರವಾಗಿ ಮಾಹಿತಿಯನ್ನು ಜನಸಾಮಾನ್ಯರಲ್ಲಿ ಅರಿವು ಮೂಡಿಸಿದರು.ಜಿಎಂ ಫಾರ್ಮಸಿ ಕಾಲೇಜಿನ ವಿದ್ಯಾರ್ಥಿಗಳು ನಾಟಕದ ರೂಪದಲ್ಲಿ ಕ್ಯಾನ್ಸರ್ ತಡೆಗಟ್ಟುವಿಕೆಯ ಉಪಯುಕ್ತ ಅಂಶಗಳನ್ನು ಸಾರ್ವಜನಿಕರ ಮುಂದೆ ಪ್ರದರ್ಶಿಸಿದರು. ಜಿಲ್ಲಾ ಚಿಗಟೇರಿ ಆಸ್ಪತ್ರೆಯಿಂದ ಆರಂಭವಾದ ಈ ಅಭಿಯಾನದಲ್ಲಿ ವಿದ್ಯಾರ್ಥಿಗಳು ಕ್ಯಾನ್ಸರ್ ಸಂಬಂಧಿತ ವಿವಿಧ ಮಾಹಿತಿಗಳನ್ನು ಜಾಗೃತಿ ಫಲಕಗಳಲ್ಲಿ ಅಳವಡಿಸಿ ಜನರಲ್ಲಿ ಅರಿವನ್ನು ಮೂಡಿಸಿದರು. ಈ ಜಾಗೃತಿ ನಡಿಗೆ ವಿದ್ಯಾರ್ಥಿ ಭವನ ಮತ್ತು ಜಯದೇವ ವೃತ್ತದ ಮಾರ್ಗವಾಗಿ ನಗರದ ಹೈಸ್ಕೂಲ್ ಮೈದಾನವನ್ನು ತಲುಪಿ ಅಲ್ಲಿ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಯಿತು. ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪ್ರಸಿದ್ಧ ಅಂಕೋಲಾಜಿಸ್ಟ್ ಗಳು ” ಪ್ರಸ್ತುತ 1 ಲಕ್ಷಕ್ಕೆ 94 ಮಂದಿಯಲ್ಲಿ ಕ್ಯಾನ್ಸರ್ ರೋಗ ಕಂಡುಬರುತ್ತದೆ. ಆಧುನಿಕ ಹಾಗೂ ಒತ್ತಡದ ಜೀವನ ಶೈಲಿಯಿಂದ ಬದಲಾವಣೆ ಕಂಡುಕೊಳ್ಳದಿದ್ದರೆ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ.” ಎಂದು ಹೇಳಿದರು. ಅಲ್ಲದೇ ರೋಗದ ಲಕ್ಷಣಗಳನ್ನು ಮತ್ತು ಅದರ ಮುನ್ನೆಚ್ಚರಿಕ ಕ್ರಮಗಳನ್ನು ಸಾರ್ವಜನಿಕರಲ್ಲಿ ವಿವರಿಸಿದರು.