ಕ್ಯಾನ್ಸರ್, ಮಧುಮೇಹ ಔಷಧಿ ದರ ಇಳಿಕೆ ಸಾಧ್ಯತೆ

ನವದೆಹಲಿ, ಜು. ೨೪- ಕೆಲವು ಜೀವರಕ್ಷಕ ಔಷಧಿಗಳ ಬೆಲೆಯನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದ್ದು, ಆ. ೧೫ ರಿಂದ ಕ್ಯಾನ್ಸರ್ ಮಧುಮೇಹ ಮತ್ತು ಹೃದಯ ಸಂಬಂಧಿ ರೋಗಗಳ ಔಷಧಿಗಳ ಬೆಲೆಗಳು ಇಳಿಕೆಯಾಗುವ ಸಾಧ್ಯತೆಗಳಿವೆ.
ಕ್ಯಾನ್ಸರ್, ಮಧುಮೇಹ, ಹೃದಯಸಂಬಂಧಿ ರೋಗಗಳೂ ಸೇರಿದಂತೆ ಕೆಲವು ಅತ್ಯಾವಶ್ಯ ಔಷಧಿಗಳ ಬೆಲೆಯನ್ನು ಇಳಿಕೆ ಮಾಡುವ ಬಗ್ಗೆ ಕೇಂದ್ರ ರಾಸಾಯನಿಕ ಇಲಾಖೆ ಪ್ರಸ್ತಾವನೆಯನ್ನು ಸಿದ್ಧಪಡಿಸಿದ್ದು, ಆ. ೧೫ ಸ್ವಾತಂತ್ಯ್ರ ದಿನದಂದು ಔಷಧಿ ಬೆಲೆಗಳ ಇಳಿಕೆ ಬಗ್ಗೆ ಕೇಂದ್ರ ಸರ್ಕಾರ ಪ್ರಕಟಿಸಬಹುದೆಂದು ಹೇಳಲಾಗಿದೆ.
ಈ ಅತ್ಯಾವಶ್ಯ ಔಷಧಿಗಳ ಬೆಲೆ ಶೇ. ೭೦ ರಷ್ಟು ಕಡಿಮೆಯಾಗುವ ಸಾಧ್ಯತೆಗಳು ಇದೆ ಎಂದು ಹೇಳಲಾಗುತ್ತಿದೆ. ದೀರ್ಘಕಾಲದವರೆಗೂ ರೋಗಿಗಳು ಬಳಸುವ ಔಷಧಿಗಳ ಬೆಲೆ ಇಳಿಕೆ ಸಂಬಂಧ ಜು. ೨೬ ರಂದು ಕೇಂದ್ರದ ಆರೋಗ್ಯ ಸಚಿವ ಮನ್ಸುಕ್ ಮಾಂಡವಿಯಾ ಅವರು ಔಷಧ ಉದ್ಯಮದ ಪ್ರತಿನಿಧಿಗಳ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಅತ್ಯಾವಶ್ಯಕ ಔಷಧಿಗಳ ಬೆಲೆ ಇಳಿಕೆ ಸಂಬಂಧ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುತ್ತದೆ.
ಈ ಹಿಂದೆ ಸಹ ಕೇಂದ್ರ ಸರ್ಕಾರ ಕ್ಯಾನ್ಸರ್ ಸೇರಿದಂತೆ ಜೀವರಕ್ಷಕ ಔಷಧಿಗಳ ಬೆಲೆಯನ್ನು ೨೦೧೯ರಲ್ಲಿ ಇಳಿಕೆ ಮಾಡಿತ್ತು. ಈಗ ಮತ್ತೆ ದರ ಪರಿಷ್ಕರಣೆಗೆ ಕೇಂದ್ರ ಮುಂದಾಗಿದೆ. ಇದರಿಂದ ಮಧುಮೇಹ, ಕ್ಯಾನ್ಸರ್, ಹೃದಯ ಸಂಬಂಧಿ ರೋಗದಿಂದ ಬಳಲುತ್ತಿರುವವರಿಗೆ ಅನುಕೂಲವಾಗಲಿದೆ.