ಕ್ಯಾನ್ಸರ್ ಪೀಡಿತ ವ್ಯಕ್ತಿಗೆ ಸಚಿವ ಪ್ರಭು ಚವ್ಹಾಣ್ ನೆರವು

ಬೀದರ:ಜೂ.1: ಸಣ್ಣ-ಪುಟ್ಟ ಕೆಲಸಗಳನ್ನು ಮಾಡಿ ಕೂಡಿಟಿದ್ದ ಹಣವೆಲ್ಲ ಆಸ್ಪತ್ರೆ ಮತ್ತು ಚಿಕಿತ್ಸೆಗೆ ಖರ್ಚು ಮಾಡಿ, ನಿತ್ಯ ಜೀವನಕ್ಕೂ ಪರದಾಡುತ್ತಿದ್ದ ಕ್ಯಾನ್ಸರ್ ಪೀಡಿತ ವ್ಯಕ್ತಿಯೊಬ್ಬರ ಕುಟುಂಬಕ್ಕೆ ಸಚಿವ ಪ್ರಭು ಚವ್ಹಾಣ್ ನೆರವಾಗಿದ್ದಾರೆ.

ಔರಾದ ಪಟ್ಟಣದ ಅಮರೇಶ್ವರ ಕಾಲೋನಿಯ ನಿವಾಸಿ ಶಿವಾಜಿ ಸುಕನೂರೆ ಎಂಬ ವ್ಯಕ್ತಿ ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ವಿಷಯ ಪಕ್ಷದ ಕಾರ್ಯಕರ್ತರಿಂದ ತಿಳಿದ ಕೂಡಲೇ ಸಚಿವರು, ವ್ಯಕ್ತಿಯ ಮನೆಗೆ ಭೇಟಿ ನೀಡಿ ಕುಟುಂಬಸ್ಥರಲ್ಲಿ ಆತ್ಮಸ್ಥೈರ್ಯ ತುಂಬಿದ್ದಾರೆ. ಸದ್ಯದ ಖರ್ಚಿಗೆಂದು 50 ಸಾವಿರ ನಗದು ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ನೀವು ಯಾವುದೇ ಕಾರಣಕ್ಕೂ ಆತಂಕ ಪಡಬೇಕಿಲ್ಲ. ಯಾವುದೇ ರೀತಿಯ ಸಹಕಾರ ಬೇಕಿದ್ದಲ್ಲಿ ತಮ್ಮನ್ನು ನೇರವಾಗಿ ಭೇಟಿ ಮಾಡಬಹುದು. ಕ್ಯಾನ್ಸರ್ ಚಿಕಿತ್ಸೆಗೆ ಸರ್ಕಾರದಿಂದ ನೆರವು ನೀಡಲಾಗುವುದು. ವಿದ್ಯಾಭ್ಯಾಸ ಮಾಡುತ್ತಿರುವ ಇಬ್ಬರು ಮಕ್ಕಳ ಶಿಕ್ಷಣಕ್ಕೆ ಸಹಕರಿಸುವುದಾಗಿ ಸಚಿವರು ಭರವಸೆ ನೀಡಿದರು.

“ಕಷ್ಟದಲ್ಲಿದ್ದಾಗ ಸಂಬಂಧಿಕರೆಲ್ಲ ದೂರವಾಗುತ್ತಿರುವ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಖುದ್ದಾಗಿ ಮನೆವರೆಗೆ ಬಂದು ಆರೋಗ್ಯ ವಿಚಾರಿಸಿರುವುದು ನನ್ನ ಜೀವನದ ಅತ್ಯಮೂಲ್ಯ ಕ್ಷಣವಾಗಿದೆ. ಧನಸಹಾಯ ಮಾಡಿರುವುದಲ್ಲದೇ ಸರ್ಕಾರದ ವತಿಯಿಂದ ಚಿಕಿತ್ಸೆ ಕೊಡಿಸುವುದಾಗಿ ತಿಳಿಸಿದ್ದು, ಅತ್ಯಂತ ಸಂತೋಷವಾಗಿದೆ” ಎಂದು ಶಿವಾಜಿ ಅವರು ತಿಳಿಸಿದ್ದಾರೆ.