ಕ್ಯಾದಿಗ್ಗೇರಾ ಗ್ರಾಪಂಗೆ ಅಧ್ಯಕ್ಷರಾಗಿ ನೀಲಮ್ಮ, ಉಪಾಧ್ಯಕ್ಷರಾಗಿ ವೆಂಕಟೇಶ ಆಯ್ಕೆ

ಅರಕೇರಾ,ಆ.೦೬- ತಾಲೂಕಿನ ಕ್ಯಾದಿಗ್ಗೇರಾ ಗ್ರಾ.ಪಂ ಗೆ ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಶನಿವಾರ ಚುನಾವಣೆ ನಡೆಯಿತು. ಅಧ್ಯಕ್ಷೆಯಾಗಿ ನೀಲಮ್ಮ ರಾಜಶೇಖರ ರಾಠೋಡ (೯ ಮತ), ಉಪಾಧ್ಯಕ್ಷರಾಗಿ ವೆಂಕಟೇಶ ಸೂರ್ಯನಾಯ್ಕ (೯ ಮತ) ಪಡೆಯುವ ಮೂಲಕ ಆಯ್ಕೆಯಾದರು.
ಎಸ್‌ಸಿ (ಮಹಿಳೆ)ಗೆ ಮೀಸಲಿದ್ದ ಅಧ್ಯಕ್ಷ ಸ್ಥಾನಕ್ಕೆ ನೀಲಮ್ಮ ರಾಜಶೇಖರ ರಾಠೋಡ್, ಪ್ರತಿ ಸ್ಪರ್ಧಿಯಾಗಿ ಶಂಕ್ರಮ್ಮ ಮಲ್ಲಪ್ಪ ನಾಮಪತ್ರ ಸಲ್ಲಿಸಿದರೆ, ಸಾಮಾನ್ಯ ವರ್ಗಕ್ಕೆ ಮೀಸಲಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ವೆಂಕಟೇಶ ಸೂರ್ಯನಾಯ್ಕ ಹಾಗೂ ಗಂಗಪ್ಪ ನಾಮಪತ್ರ ಸಲ್ಲಿಸಿದ್ದರು. ೧೭ ಸದಸ್ಯರನ್ನು ಒಳಗೊಂಡ ಗ್ರಾ.ಪಂಗೆ ಮತದಾನ ಮಾಡುವ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಿತು. ಚುನಾವಣಾ ಅಧಿಕಾರಿಯಾಗಿ ಬಸ್ಸಣ್ಣ ನಾಯಕ ಕರ್ತವ್ಯ ನಿರ್ವಹಿಸಿದರು. ಪಿಡಿಒ ಸಿ.ಬಿ ಪಾಟೀಲ್ ಇದ್ದರು. ದೇವದುರ್ಗ ಠಾಣೆಯ ಪಿಐ ಕೆ.ಹೊಸಕೇರಪ್ಪ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಬಿಗಿ ಬಂದೋಬಸ್ತ್ ಕಲ್ಪಿಸಿದರು.
ಗ್ರಾಪಂ ಸದಸ್ಯರಾದ ಮುಕ್ಕಣ್ಣ ನಾಯಕ, ಮಾಳಮ್ಮ, ಅಮರಮ್ಮ, ಪದ್ಮಶ್ರೀ ಕಿಷ್ಠಪ್ಪ ನಾಯಕ ಮಾ.ಪಾ, ಯಲ್ಲಮ್ಮ, ಹೇಮ್ಲಮ್ಮ, ಮಲ್ಲಮ್ಮ ಇತರರಿದ್ದರು.