ಕ್ಯಾದಿಗ್ಗೇರಾ ಅಮೃತ ಸರೋವರ ಯೋಜನೆಯಡಿ ಕೆರೆಯ ಅಭಿವೃದ್ಧಿ

ಅರಕೇರಾ.ಜು.೨೨- ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ೭೫ ವರ್ಷ ಪೂರೈಸಿ ಅಮೃತ ಮಹೋತ್ಸವವನ್ನು ಪೂರ್ಣಗೊಳಿಸಿದೆ.
ಇದರ ಸ್ಮರಣಾರ್ಥವಾಗಿ ದೇಶ ಹಾಗೂ ರಾಜ್ಯದಲ್ಲಿ ಅಮೃತ ಸರೋವರಗಳು ಎಂಬ ಯೋಜನೆ ಜಾರಿಗೊಳಿಸಲಾಗಿದ್ದು ಕೆರೆಯ ಅಭಿವೃದ್ಧಿಗೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಪದ್ಮಶ್ರೀ ಕಿಷ್ಟಪ್ಪ ನಾಯಕ ಮಾಲಿ ಪಾಟೀಲ್ ಭೂಮಿ ಪೂಜೆ ನೆರವೇರಿಸಿದರು.
ಅವರು ಇಲ್ಲಿಗೆ ಸಮೀಪದ ಕ್ಯಾದಿಗ್ಗೇರಾ ಗ್ರಾಮದ ದೊಡ್ಡ ಕೆರೆಯನ್ನು ಅಮೃತ ಸರೋವರ ಯೋಜನೆ ಅಡಿಯಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು.
ನಂತರ ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿಯಾದ ಸಿ.ಬಿ.ಪಾಟೀಲ್ ಸುದ್ದಿಗಾರೊಂದಿಗೆ ಮಾತನಾಡಿ, ಉದ್ಯೋಗ ಖಾತರಿ ಯೋಜನೆಯಡಿ ಅಮೃತ ಸರೋವರಗಳ ನಿರ್ಮಾಣದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ.
ಅಮೃತ ಸರೋವರ ಯೋಜನೆಯಡಿ ಅಭಿವೃದ್ದಿಪಡಿಸುತ್ತಿರುವ ಕೆರೆಗಳಲ್ಲಿ ಹೂಳು ತೆಗೆಯುವುದು,ಕೆರೆಯ ತೂಬು ನವಿಕರಿಸುವುದು,ಕೆರೆ ನೀರು ಸುತ್ತಲ್ಲೂ ತಂತಿ ಬೇಲಿ ಅಳವಡಿಕೆ,ಕೆರೆ ನೀರು ಸುಗಮವಾಗಿ ಹರಿದು ಬರಲು ಸುತ್ತಲ್ಲಿನ ನಾಲೆಗಳ ಸುಧಾರಣೆ,ಕೆರೆಯ ದಂಡೆ ಮೇಲಿನ ದಾರಿ ಅಭಿವೃದ್ದಿ, ಕೆರೆಯ ಸುತ್ತ ಸಸಿಗಳನ್ನು ನೆಡುವುದು ಈ ರೀತಿಯಾಗಿ ಅಭಿವೃದ್ದಿ ಪಡಿಸಲಾಗುದೆಂದರು.
ಸುಮಾರು ೫೩ ಎಕರೆ ವಿಸ್ತೀರ್ಣದ ವಿಶಾಲವಾದ ಕೆರೆಯ ಅಭಿವೃದ್ಧಿ ಕಾರ್ಯ ಬರದಿಂದ ಸಾಗಿದೆ. ಈ ಬಾರಿ ಆಗಸ್ಟ ೧೫ ರಂದು ಕೆರೆಗಳ ಮುಂದೆ ತಿರಂಗಾ ಧ್ವಜವನ್ನು ಹಾರಸುವ ಮೂಲಕ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ಧೂರಿಯಾಗಿ ಅಚರಣೆ ಮಾಡುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.
ಅದಕ್ಕಾಗಿ ೨೫ ಲಕ್ಷ ರೂಪಾಯಿ ಅನುದಾನ ಬಿಡುಗಡೆಯಾಗಿದ್ದು ಅಚ್ಚು ಕಟ್ಟಾಗಿ ಕೆರೆಯನ್ನು ಪರಿಸರ ಸ್ನೇಹಿಯಂತೆ ನಿರ್ಮಿಸಲು ಸಕಲ ತಯಾರಿ ಮಾಡಿಕೊಂಡಿದ್ದೇವೆ. ಕೆರೆಗಳ ಪುನಶ್ಚೇತನ ಮತ್ತು ಅಭಿವೃದ್ಧಿಯಿಂದ ಅಂತರ್ಜಲ ಮಟ್ಟ ಸುಧಾರಣೆಯಾಗಲಿದೆ. ಜನ ,ಜಾನುವಾರು ಸೇರಿದಂತೆ ರೈತರ ಭೂಮಿಯನ್ನು ಹಸಿರಾಗಿಸುವ ಯೋಜನೆ ಇದಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡರಾದ ಕ್ರೀಷ್ಟಪ್ಪಮಾಲಿಪಾಟೀಲ್, ಉಪಾಧ್ಯಕ್ಷರಾದ ಮಲ್ಲಮ್ಮ ರಂಗಪ್ಪ ನಾಯಕ ರೇಕಲಮರಡಿ, ಸದಸ್ಯರಾದ ಮುದ್ದಣ್ಣ ನಾಯಕ, ಅಂಬಣ್ಣ ದೊರೆ, ಆದೇಶ ನಾಯಕ, ಅಮರಮ್ಮ, ಯಲ್ಲಮ್ಮ, ಕುಬೇರ ಸೇರಿದಂತೆ ಗ್ರಾ.ಪಂ ಸಿಬ್ಬಂದಿ ಹಾಗೂ ನರೇಗಾ ಕೂಲಿ ಕಾರ್ಮಿಕರು ಗ್ರಾಮ ಪಂಚಾಯತ ಕಂಪ್ಯೂಟರ್ ಆಫ್‌ರೇಟರ್ ಜಾನಪ್ಪ, ರಂಗನಾಥ ,ಬಂದೇನವಾಜ್, ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.