
ಬೀದರ್:ಜು.26: ರಾಜ್ಯದಲ್ಲಿ ಆಫ್ರಿಕನ್ ಕ್ಯಾಟ್ಫಿಶ್ ಸಾಕಾಣಿಕೆ ನಿಷೇಧಿಸಲಾಗಿದೆ. ಜಿಲ್ಲೆಯಲ್ಲಿ ಕೆಲವರು ಆಫ್ರಿಕನ್ ಕ್ಯಾಟ್ಫಿಶ್ ಸಾಕಾಣಿಕೆ ಮಾಡುತ್ತಿರುವ ದೂರುಗಳು ಬಂದಿವೆ. ನಿಷೇಧಿತ ಮೀನುಗಳ ಸಾಕಾಣಿಕೆಯಲ್ಲಿ ತೊಡಗಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಎಚ್ಚರಿಕೆ ನೀಡಿದರು.
ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ನೀರಾವರಿ ನಿಗಮ, ಮೀನುಗಾರಿಕೆ ಇಲಾಖೆ, ಕಂದಾಯ ಇಲಾಖೆ, ಪೆÇಲೀಸ್ ಅಧಿಕಾರಿಗಳ ಸಭೆ ನಡೆಸಿದ ಅವರು, ಅಧಿಕಾರಿಗಳಿಗೂ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಬೀದರ್ ತಾಲ್ಲೂಕಿನ ಕಾರಂಜಾ ಜಲಾಶಯದ ಮರಕಲ್ ಮತ್ತು ರಂಜೋಳಖೇಣಿ ಗ್ರಾಮಗಳ ವ್ಯಾಪ್ತಿಯಲ್ಲಿ ಅಕ್ರಮವಾಗಿ ಹತ್ತು ಹೊಂಡಗಳನ್ನು ನಿರ್ಮಿಸಿ ಆಫ್ರಿಕನ್ ಕ್ಯಾಟ್ಫಿಶ್ ಸಾಕಾಣಿಕೆ ಮಾಡುತ್ತಿರುವ ದೂರುಗಳು ಬಂದಿವೆ. ಸ್ಥಳಕ್ಕೆ ಭೇಟಿ ನೀಡಿ ವರದಿ ನೀಡಬೇಕು ಎಂದು ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕರಿಗೆ ಸೂಚಿಸಿದರು.
ಕರ್ನಾಟಕ ನೀರಾವರಿ ನಿಗಮ, ಮೀನುಗಾರಿಕೆ ಇಲಾಖೆ, ಕಂದಾಯ ಇಲಾಖೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು, ಪೆÇಲೀಸ್ ಅಧಿಕಾರಿಗಳು ಜಂಟಿಯಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಕಾರಂಜಾ ಜಲಾಶಯದ ಹಿನ್ನೀರನ್ನು ಬಳಸಿಕೊಂಡು ಸರ್ಕಾರಿ ಜಮೀನು ಅಥವಾ ಖಾಸಗಿ ಪಟ್ಟಾ ಜಮೀನುಗಳಲ್ಲಿ ಹೊಂಡ ನಿರ್ಮಿಸಿರುವ ಸಂಬಂಧಪಟ್ಟ ಜಮೀನಿನ ಮಾಲೀಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಹೊಂಡಗಳಲ್ಲಿನ ಕ್ಯಾಟ್ಫಿಶ್ಗಳನ್ನು ನಾಶಗೊಳಿಸಬೇಕು ಎಂದು ಆದೇಶ ನೀಡಿದರು.
ಹೊಂಡಗಳ ಸಮೀಪ ಕೆಲ ಕಾರ್ಮಿಕರು ಗುಡಿಸಲು ಹಾಕಿಕೊಂಡು ವಾಸಿಸುತ್ತಿದ್ದಾರೆ. ಕಾರ್ಮಿಕರು ಇದರಲ್ಲಿ ತೊಡಗಿಸಿಕೊಂಡಿದ್ದಾರೋ ಅಥವಾ ಅವರ ಮೂಲಕ ಬೇರೆಯವರು ಸಾಕಾಣಿಕೆ ಮಾಡುತ್ತಿದ್ದಾರೋ ಎನ್ನುವ ಕುರಿತು ಸ್ಪಷ್ಟವಾದ ಮಾಹಿತಿ ಪಡೆಯಬೇಕು ಎಂದರು.
ಹೊಂಡಗಳಲ್ಲಿನ ಕ್ಯಾಟ್ಫಿಶ್ಗಳನ್ನು ವೈಜ್ಞಾನಿಕವಾಗಿ ನಾಶಪಡಿಸಬೇಕು. ನಿಷೇಧಿತ ಮೀನುಗಳು ಹಳ್ಳಕೊಳ್ಳಗಳಿಗೆ ಸೇರದಂತೆ ನೋಡಿಕೊಳ್ಳಬೇಕು. ಇದಕ್ಕೆ ಸ್ಥಳೀಯರ ಸಹಕಾರ ಪಡೆದುಕೊಳ್ಳಬೇಕು. ಅಗತ್ಯಬಿದ್ದರೆ ಸಂಬಂಧಪಟ್ಟವರ ವಿರುದ್ಧ ಸಮೀಪದ ಪೆÇಲೀಸ್ ಠಾಣೆಗಳಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಎಂ., ಬೀದರ್ ಉಪ ವಿಭಾಗಾಧಿಕಾರಿ ಮಹಮ್ಮದ್ ನಯೀಮ್ ಮೋಮಿನ್, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಬೀದರ್ ತಹಶೀಲ್ದಾರ್ ಅಣ್ಣಾರಾವ್ ಪಾಟೀಲ, ಕರ್ನಾಟಕ ನೀರಾವರಿ ನಿಗಮದ ಕಾರ್ಯ ನಿರ್ವಾಹಕ ಎಂಜಿನಿಯರ್ ಸ್ವಾಮಿ, ಸಣ್ಣ ನೀರಾವರಿ ಇಲಾಖೆ ಕಾರ್ಯ ನಿರ್ವಾಹಕ ಎಂಜಿನಿಯರ್ ಸುರೇಶ ಮೇದಾ, ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕ ಮಲ್ಲೇಶ ಬಡಿಗೇರ, ಡಿ.ವೈ.ಎಸ್.ಪಿ. ಸತೀಶ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.