ಕೌಶಲ ವರ್ಧನೆ ಯಶಸ್ಸಿನ ಮೊದಲ ಸೋಪಾನ

ಕಲಬುರಗಿ: ಆ.19:ಸಕಾರಾತ್ಮಕ ಕೌಶಲಗಳು ಯಶಸ್ಸಿನ ಮೊದಲ ಸೋಪಾನವಾಗಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಎಚ್ಚರ ವಹಿಸಬೇಕಾದ ಅಗತ್ಯವಿದೆ ಎಂದು ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಶೈಕ್ಷಣಿಕ ವಿಭಾಗದ ನಿರ್ದೇಶಕ ಪ್ರೊ.ಬಸವರಾಜ ಡೋಣೂರ ಕಿವಿಮಾತು ಹೇಳಿದರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಮನೋವಿಜ್ಞಾನ ವಿಭಾಗ ಹಾಗೂ ವಿವೇಕಾನಂದ ವಿದ್ಯಾನಿಕೇತನ ಶಾಲೆಯ ಜಂಟಿ ಆಶ್ರಯದಲ್ಲಿ ಕರುಣೇಶ್ವರ ನಗರದ ವಿವಿಎನ್ ಶಾಲೆಯಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಶೈಕ್ಷಣಿಕ ಶ್ರೇಷ್ಠತಾ ಸಾಧನೆ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಕೇವಲ ಶೈಕ್ಷಣಿಕ ಅಂಕಗಳಿಗೆ ಒತ್ತು ನೀಡಿದರಷ್ಟೇ ಸಾಲದು. ಮಹತ್ವದ ಸಾಧನೆಗಳಿಗೆ ಪೂರಕವಾದ ಕೌಶಲಗಳನ್ನು ಸಹ ವಿದ್ಯಾರ್ಥಿಗಳು ವಿದ್ಯಾರ್ಥಿದೆಸೆಯಲ್ಲಿಯೇ ಅಳವಡಿಸಿಕೊಳ್ಳಲು ಯತ್ನಿಸಬೇಕು. ಇದರಿಂದ ಯಶಸ್ಸಿನ ಹಾದಿಯಲ್ಲಿ ಸದಾ ಚೈತನ್ಯ ಮತ್ತು ಪ್ರೇರಣೆ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಉತ್ತಮ ಕೇಳುಗ ಮಾತ್ರ ಉತ್ತಮ ಸಂವಹನಾ (ಕಮ್ಯುನಿಕೇಷನ್) ಕೌಶಲ ರೂಢಿಸಿಕೊಳ್ಳಲು ಸಾಧ್ಯ. ಹಾಗಾಗಿ, ವಿದ್ಯಾರ್ಥಿಗಳು ತಮ್ಮ ತರಗತಿ ಮತ್ತು ಪರಿಸರದಲ್ಲಿನ ಸಕಾರಾತ್ಮಕ ಅಂಶಗಳನ್ನು ಕುತೂಹಲದಿಂದ ಆಲಿಸುವುದನ್ನು ಕಲಿಯಬೇಕು. ಇದರ ಜೊತೆಗೆ, ಸಣ್ಣ ಸಣ್ಣ ಸಕಾರಾತ್ಮಕ ಬದಲಾವಣೆಗಳಿಗೆ ನಮ್ಮನ್ನು ಒಡ್ಡಿಕೊಳ್ಳುತ್ತಾ ಹೋದಂತೆಲ್ಲಾ ನಮ್ಮ ವ್ಯಕ್ತಿತ್ವ ಸದೃಢಗೊಳ್ಳುತ್ತಾ ಹೋಗುತ್ತದೆ ಎಂದು ಪ್ರೊ.ಡೋಣೂರ ಸಲಹೆ ನೀಡಿದರು.

ಒಂದೇ ದಿನದಲ್ಲಿ ಸಿದ್ಧಾರ್ಥ ಗೌತಮ ಬುದ್ಧನಾಗಲಿಲ್ಲ. ಬದಲಿಗೆ, ಆತನ ತನ್ನ ಸುತ್ತಲಿನ ಪರಿಸರವನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಹೋದಂತೆಲ್ಲಾ ಜ್ಞಾನೋದಯಕ್ಕೆ ಸಮೀಪವಾಗುತ್ತಾ ಹೋಗಿದ್ದರಿಂದ ಮುಂದೊಂದು ದಿನ ಇಡೀ ವಿಶ್ವದ ಬೆಳಕಾಗಿ ಬುದ್ಧ ರೂಪುಗೊಳ್ಳಲು ಸಾಧ್ಯವಾಯಿತು. ಪ್ರತಿಯೊಬ್ಬ ವ್ಯಕ್ತಿಯಲ್ಲೂ ಓರ್ವ ಬುದ್ಧ ಇದ್ದಾನೆ ಎಂಬುದು ನಿಜವಾದರೂ, ನಮ್ಮೊಳಗಿನ ಬುದ್ಧನನ್ನು ಜಾಗೃತಗೊಳಿಸಬೇಕಾದರೆ ಅದಕ್ಕೆ ತಾಳ್ಮೆ ಮತ್ತು ಕ್ಷಮಾಗುಣವನ್ನು ರೂಢಿಸಿಕೊಳ್ಳಬೇಕಾಗುತ್ತದೆ ಎಂದರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಮನೋವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ರೊಮೆಟ್ ಜಾನ್ ಹಾಗೂ ಸಹಾಯಕ ಪ್ರಾಧ್ಯಾಪಕ ಡಾ.ವಿಜಯೇಂದ್ರ ಪಾಂಡೆ ಗೌರವ ಅತಿಥಿಗಳಾಗಿ ವೇದಿಕೆಯಲ್ಲಿದ್ದರು. ವಿವೇಕಾನಂದ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷೆ ಸುವರ್ಣಾ ಎಸ್.ಭಗವತಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಸಿದ್ಧಪ್ಪ ಭಗವತಿ ನಿರ್ವಹಿಸಿದರು.


ವ್ಯಕ್ತಿತ್ವ ವಿಕಸನಕ್ಕೆ ಪ್ರೀತಿಯೇ ಆಧಾರ

ಪರಸ್ಪರ ಪ್ರೀತಿ, ಕರುಣೆ, ಸಹಾನುಭೂತಿ ಮತ್ತು ಕ್ಷಮಿಸುವ ವಿಶಾಲ ಮನೋಭಾವ ಇದ್ದಾಗ ಮಾತ್ರ ನಮ್ಮ ವ್ಯಕ್ತಿತ್ವದಲ್ಲಿ ಸಕಾರಾತ್ಮಕತೆ ನೆಲೆಸುತ್ತದೆ ಎಂದು ಸಿಯುಕೆ ಶೈಕ್ಷಣಿಕ ವಿಭಾಗದ ನಿರ್ದೇಶಕ ಪ್ರೊ.ಬಸವರಾಜ ಡೋಣೂರ ಹೇಳಿದರು.

ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಸುಲಭವಾಗಿ ಅರ್ಥ ಮಾಡಿಸಲು ಲಿಯೋ ಟಾಲ್‍ಸ್ಟಾಯ್ ಅವರ ಸಣ್ಣ ಕಥೆಯೊಂದನ್ನು ಹೇಳಿದ ಪ್ರೊ.ಡೋಣೂರ, ಪ್ರೀತಿ ಇದ್ದಲ್ಲಿ ದೇವರಿರುತ್ತಾನೆ. ಹಾಗಾಗಿ, ಎಂಥದ್ದೇ ಸಂದರ್ಭ ಎದುರಾದರೂ ದ್ವೇಷ ಮನೋಭಾವ ಮನಸ್ಸಿನಲ್ಲಿ ಜಾಗೃತಗೊಳ್ಳದಂತೆ ಎಚ್ಚರ ವಹಿಸಬೇಕೆಂದು ಅವರು ಆಪ್ತ ಸಲಹೆ ನೀಡಿದರು.


ಶಿಕ್ಷಕರಿಗೂ ಆಪ್ತ ಸಲಹೆ

ಸಮಚಿತ್ತ ಮನೋಭಾವ, ಏಕಾಗ್ರತೆ ಸಾಧನೆ ಹಾಗೂ ಒತ್ತಡ ನಿರ್ವಹಣೆಯ ಕೌಶಲಗಳನ್ನು ಕುರಿತು ಆಪ್ತ ಸಲಹೆ ನೀಡುವ ನಿಟ್ಟಿನಲ್ಲಿ ಈ ‘ಶೈಕ್ಷಣಿಕ ಶ್ರೇಷ್ಠತಾ ಸಾಧನೆ ಕಾರ್ಯಾಗಾರ’ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಎಂಟರಿಂದ 10ನೇ ತರಗತಿಯ ತಲಾ 25 ವಿದ್ಯಾರ್ಥಿಗಳ ಒಟ್ಟು 10 ಪ್ರತ್ಯೇಕ ತಂಡಗಳಿಗೆ ಸಿಯುಕೆ ಮನೋವಿಜ್ಞಾನ ವಿಭಾಗದ ತಲಾ ನಾಲ್ವರು ವಿದ್ಯಾರ್ಥಿಗಳು ಸಮಾಲೋಚನೆಯ ಮೂಲಕ ಆಪ್ತ ಸಲಹೆಗಳನ್ನು ನೀಡಿದರು.

ಇದೇವೇಳೆ, ಶಾಲೆಯ ಶಿಕ್ಷಕರಿಗಾಗಿ ಹಮ್ಮಿಕೊಂಡಿದ್ದ ಪ್ರತ್ಯೇಕ ಶಿಬಿರದಲ್ಲಿ ಸಿಯುಕೆ ಮನೋವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ರೊಮೆಟ್ ಜಾನ್ ಹಾಗೂ ಅಸಿಸ್ಟೆಂಟ್ ಪ್ರೊಫೆಸರ್ ಡಾ.ವಿಜಯೇಂದ್ರ ಪಾಂಡೆ ಅಗತ್ಯ ಸಲಹೆಗಳನ್ನು ನೀಡಿದರು.