ಕೌಶಲ್ಯ ಶಿಕ್ಷಣದಿಂದ ಭವಿಷ್ಯದ ಸವಾಲು ನಿಭಾಯಿಸಲು ಸಹಾಯ

ದಾವಣಗೆರೆ.ಏ.೧೭;: ಕೌಶಲ್ಯ ಶಿಕ್ಷಣವು ವಿದ್ಯಾರ್ಥಿಗಳಲ್ಲಿ ಸಾಮಾಜಿಕ, ಭಾವನಾತ್ಮಕ, ಆಲೋಚನಾ ಕೌಶಲ್ಯಗಳನ್ನು ಅಭಿವೃದ್ದಿ ಪಡಿಸುವ ಜತೆಗೆ ಭವಿಷ್ಯದ ಸವಾಲುಗಳನ್ನು ನಿಭಾಯಿಸಿ ಉತ್ತಮವಾಗಿ ಬದುಕಲು, ಕ್ರಿಯಾತ್ಮಕ ನಾಗರೀಕರನ್ನು ಸೃಷ್ಠಿಸಲು ಸಹಾಯ ಮಾಡುತ್ತದೆ ಎಂದು ಹಿರಿಯ ನ್ಯಾಯವಾದಿ ಎಲ್.ಹೆಚ್.ಅರುಣ್‌ಕುಮಾರ್ ತಿಳಿಸಿದರು.ನಗರದ ಜಿಲ್ಲಾ ಅಧೀಕ್ಷಕರ ಕಚೇರಿ ಬಳಿ ಇರುವ ಅಡೋರಸ್ ಸಂಸ್ಥೆಯ ತರಬೇತಿ ಸಭಾಂಗಣದಲ್ಲಿ ಆಕ್ಷನ್ ಇನ್ಸಿಯೇಟಿವ್ ಫಾರ್ ಡೆವಲಪ್‌ಮೆಂಟ್, ದಾವಣಗೆರೆ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸ್, ಬೆಂಗಳೂರು, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ದಾವಣಗೆರೆ ಹಾಗೂ ಟರ‍್ರೆ ಡಸ್ ಹೋಮ್ಸ್-ಜಿ ಸಹಕಾರದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಜೀವನ ಕೌಶಲ್ಯ ಶಿಕ್ಷಣ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕೌಶಲ್ಯ ಶಿಕ್ಷಣವು ಮೂಲಭೂತ ಕಾರ್ಯ ನಿರ್ವಹಣೆ ಮತ್ತು ಸಾಮರ್ಥ್ಯಗಳ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ. ಯುವ ಜನರ ಸಾಮರ್ಥ್ಯ ಬಲಪಡಿಸಲು ಪ್ರಸ್ತುತ ಸಮಾಜದ ಅಗತ್ಯತೆಗಳು ಮತ್ತು ಬೇಡಿಕೆಗಳನ್ನು ಪೂರೈಸಲು ಮತ್ತು ಸಮಾಜದ ಮುಂದಿರುವ ನಿರುದ್ಯೋಗ, ಬಡತನ, ಜನಸಂಖ್ಯಾ ಸ್ಪೋಟ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸಲು ಯುವಕರಿಗೆ ಸಹಾಯ ಮಾಡುತ್ತದೆ ಎಂದು ಹೇಳಿದರು.