ಕೌಶಲ್ಯ ಶಿಕ್ಷಣಕ್ಕೆ ವಿದ್ಯಾರ್ಥಿಗಳು ಸಜ್ಜಾಗಲಿ

ಬೆಂಗಳೂರು, ಜ. ೩- ಶಾಲಾ-ಕಾಲೇಜುಗಳ ಕೊಠಡಿಗಳಲ್ಲಿ ಕಲಿಸುವ ಶಿಕ್ಷಣಕ್ಕಿಂತ ಕ್ರಿಯಾತ್ಮಕ, ಕೌಶಲ್ಯಯುತವಾದ ಶಿಕ್ಷಣಕ್ಕೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕಾದ ಅನಿವಾರ್ಯತೆ ಇದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಡಾ.ಬಿ.ಎಂ. ಪಟೇಲ್ ಪಾಂಡು ಅಭಿಪ್ರಾಯಪಟ್ಟರು.
ನಗರದ ಮೈಸೂರು ರಸ್ತೆಯ ಆವಲಹಳ್ಳಿಯ ಶ್ರೀ ಪಟೇಲ್ ಗುಳ್ಳಪ್ಪ ಶಿಕ್ಷಣ ಸಂಸ್ಥೆಯಲ್ಲಿ ಏರ್ಪಡಿಸಿದ್ದ ನೂತನ ವರ್ಷದ ಸ್ವಾಗತ ಕಾರ್ಯಕ್ರಮ ಹಾಗೂ ವಯೋ ನಿವೃತ್ತಿ ಹೊಂದಿದ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದ ಅವರು, ವರ್ತಮಾನದ ಅವಶ್ಯಕತೆಗೆ ಶಾಲಾ-ಕಾಲೇಜುಗಳು ಸಜ್ಜಾಗಬೇಕು. ಪಠ್ಯಪುಸ್ತಕಗಳ ಆಚೆ ಬದುಕನ್ನು ವಿಸ್ತರಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಕಲಿಕಾ ಬೋಧನಾ ತರಗತಿ ಜೊತೆಯಲ್ಲಿ ಭೌತಿಕವಾಗಿ ಕ್ರಿಯಾಶೀಲವಾಗಲು ವಿದ್ಯಾರ್ಥಿ ತನ್ನದೇ ಜ್ಞಾನದ ವಿರ್ಮಾತೃವಾಗಬೇಕಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶಾಲಾ ಶಿಕ್ಷಕಿಯಾದ ಲಲಿತಮ್ಮ ಶಿವಣ್ಣ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯ ರಾಮಕೃಷ್ಣಯ್ಯ, ಸಂಸ್ಥೆಯ ಮುಖ್ಯಸ್ಥ ಬಿ.ಪಿ. ಹರ್ಷ, ಉಪನ್ಯಾಸಕಿ ಮಂಜುಳಾ ಮತ್ತಿತರರು ಉಪಸ್ಥಿತರಿದ್ದರು.