ಬೀದರ:ಜು.9: ಕೇವಲ ಪದವಿಯಿದ್ದರೆ ಸಾಲದು ಅದರೊಂದಿಗೆ ಕೌಶಲ್ಯವೂ ಬೇಕು ಅಂದಾಗ ಉದ್ಯೋಗ ಖಚಿತ ಎಂದು ಬೆಂಗಳೂರು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಜಂಟಿ ನಿರ್ದೇಶಕರಾದ ವೈಜಗೊಂಡ ನುಡಿದರು
ಅವರು ಕರ್ನಾಟಕ ಹೆಸರು ಮರುನಾಮಕರಣವಾದ 50ನೆಯ ವರ್ಷದ ಸುವರ್ಣ ಮಹೋತ್ಸವದ ಅಂಗವಾಗಿ ಗಡಿಭಾಗದ ಕನ್ನಡ ಯುವಕರ ಕೈಗೆ ಕಾಯಕ ನೀಡುವ ಪ್ರಯುಕ್ತ ನಗರದ ಕರಾಶಿ ಸಂಸ್ಥೆಯ ಕರ್ನಾಟಕ ಪದವಿ ಪೂರ್ವ ಕಾಲೇಜು ಆಯೋಜಿಸಿದ ಉದ್ಯೋಗ ಮೇಳ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತ ಅನೇಕ ಕಂಪನಿಗಳಿಗೆ ಉದ್ಯೋಗ ಆಕಾಂಕ್ಷಿಗಳ ಅವಶ್ಯಕತೆಯಿದೆ ಆದರೆ ಸಮರ್ಪಕವಾದ ಉದ್ಯೋಗ ಮೇಳಗಳಾಗದೆ ಇರುವುದರಿಂದ ನಿರುದ್ಯೋಗಿಗಳಿಗೆ ಕೆಲಸ ಸಿಗುತ್ತಿಲ್ಲ ಹಾಗಾಗಿ ಭವಿಷ್ಯದಲ್ಲಿ ಕರ್ನಾಟಕ ಸರಕಾರದ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯು ಕರಾಶಿ ಸಂಸ್ಥೆಯ ಸಹಯೋಗದಲ್ಲಿ 100 ಕಂಪನಿಗಳಿಂದ ಇಲ್ಲಿ ಉದ್ಯೋಗ ಮೇಳ ಆಯೋಜಿಸಲಾಗುವುದೆಂದು ಭರವಸೆ ನೀಡಿದರು.
ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಬಿ.ಜಿ. ಶೆಟಕಾರ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಉದ್ಯೋಗವಿಲ್ಲದೆ ತಂದೆ ತಾಯಿಗಳಿಗೆ ಹೊರೆಯಾಗುವುದಕ್ಕಿಂತ ಕೌಶಲ್ಯ ಪರಿಣಿತರಾಗಿ ಉದ್ಯೋಗ ಪಡೆದು ಸ್ವತಃ ಉದ್ಯೋಗ ನೀಡುವಂಥ ರೀತಿಯಲ್ಲಿ ಪರಿಶ್ರಮ ಜೀವಿಗಳಾದಾಗ ಬದುಕು ಸಾರ್ಥಕವಾಗುತ್ತದೆ. ಕೇವಲ ಉದ್ಯೋಗ ಪಡೆದರೆ ಸಾಲದು ವೃತ್ತಿ ಗೌರವ ಕೂಡ ಇರಬೇಕು. ಉದ್ಯೋಗ ಸಿಗದಿದ್ದಾಗ ಆಧುನಿಕ ತಂತ್ರಜ್ಞಾನ ಬಳಸಿ ಕೃಷಿ ಅಭಿವೃದ್ದಿಪಡಿಸಬೇಕೆಂದು ನುಡಿದರು.
ಸರಕಾರಿ ಐಟಿಐ ಕಾಲೇಜು ನಿವೃತ್ತ ಪ್ರಾಚಾರ್ಯ ಶಿವಶಂಕರ ಟೋಕರೆ ಅವರು ಮಾತನಾಡುತ್ತ ಕೈಗಾರಿಕಾ ರಹಿತವಾದ ಬೀದರದಲ್ಲಿ ಸುಮಾರು 20 ಕಂಪನಿಗಳನ್ನು ಆಹ್ವಾನಿಸಿ ಗಡಿಭಾಗದ ಯುವ ಸಮುದಾಯಕ್ಕೆ ಉದ್ಯೋಗ ನೀಡುತ್ತಿರುವುದು ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಇದೆ ಮೊದಲು. ಸದರಿ ಮೇಳದಲ್ಲಿ ಬೆಂಗಳೂರಿನ ಬಿಪಿಎಲ್ ಟೆಕ್, ಕಾಂಟಿನೆಂಟಲ್, ಟಾಟಾ ಗ್ರೂಪ್ಸ್, ಸಿಸ್ಕಾನ್ ಇನ್‍ಸ್ಟ್ಯೂಮೆಂಟ್ಸ್, ಅಂಕಿತ್ ಫಾಸ್ಟ್ನರ್, ಎಲ್ಸಿಯಾ ಕ್ಲಸ್ಟರ್, ಡೈನಾಮಿಕ್, ಜೆ.ಎಸ್. ಡಬ್ಲೂ (ಜಿಂದಾಲ್) ಸ್ಟೀಲ್ ಡೈನಾಮೆಂಟಲ್ ಪ್ರೈ ಲಿಮಿಟೆಡ್, ಮಹೇಂದ್ರ ಆ್ಯಂಡ್ ಮಹೇಂದ್ರ, ಎಲೆಕ್ಟ್ರಾನಿಕ್ ಸಿಟಿ ಕಂಪನಿ, ಮ್ಯಾನ್ಯು ಟೆಕ್ನಾಲಜಿ ಮತ್ತು ಮಾಹಿತಿ ತಂತ್ರಜ್ಞಾನ ಇನ್ಫೋಸೋರ್ಸ್‍ಕಾರ್ಪ್, ಆಟೋಕ್ಲಸ್ಟರ್, ಎಲ್.ಐ.ಸಿ. ಸೇರಿದಂತೆ ತೆಲಂಗಾಣ, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯದ ಪ್ರತಿಷ್ಠಿತ ಕೈಗಾರಿಕೆಗಳ ಮಾನವ ಸಂಪನ್ಮೂಲ ಅಧಿಕಾರಿಗಳ ಕ್ಯಾಂಪಸ್ ಸಂದರ್ಶನ ನಡೆಸುತ್ತರುವುದು ಗಮನಾರ್ಹವೆಂದು ನುಡಿದರು.
ಕಾರಾಶಿ ಸಂಸ್ಥೆಯ ಕಾರ್ಯದರ್ಶಿ ಸಿದ್ರಾಮ ಪಾರಾ ಆಡಳಿತ ಮಂಡಳಿಯ ಸದಸ್ಯರಾದ ರವಿ ಹಾಲಹಳ್ಳಿ, ಶ್ರೀನಾಥ ನಾಗೂರೆ
ಸರಕಾರಿ ಪಾಲಿಟೆಕ್ನಕ್ ಪ್ಲೆಸ್‍ಮೆಂಟ್ ಅಧಿಕಾರಿಗಳಾದ ಮಹೇಶ ಸ್ವಾಮಿ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಸದರಿ ಉದ್ಯೋಗ/ ಶಿಶುಕ್ಷು ಮೇಳದಲ್ಲಿ 10ನೆಯ ತರಗತಿ, ಪಿಯುಸಿ, ಮತ್ತು ವಿವಿಧ ವೃತ್ತಿ ಕೋರ್ಸುಗಳಾದ ಐಟಿಐ, ಡಿಪ್ಲೊಮಾ, ಮೊದಲಾದ ಸುಮಾರು 800 ಉದ್ಯೋಗಾಕಾಂಕ್ಷಿಗಳು ನೋಂದಣಿ ಮಾಡಿಸಿದ್ದು ಅದರಲ್ಲಿ ಸುಮಾರು 302 ಕುಶಲಕರ್ಮಿಗಳಿಗೆ ಉದ್ಯೋಗ ಲಭಿಸಿದೆ.
ಕರ್ನಾಟಕ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಡಾ. ಬಸವರಾಜ ಬಲ್ಲೂರ ಸ್ವಾಗತಿಸಿದರೆ ಉಪನ್ಯಾಸಕ ಸಚಿನ ವಿಶ್ವಕರ್ಮ ನಿರೂಪಿಸಿದರು. ಡಾ. ಮಂಗಲಾ ಗಡಮಿ ವಂದಿಸಿದರು.