ಕೌಶಲ್ಯಾಭಿವೃದ್ಧಿ ತರಬೇತಿ ಮಹಿಳೆಯರಿಗೆ ಸಹಕಾರಿ

ಆನೇಕಲ್.ನ.೧೨-ಮಹಿಳೆಯರು ಸ್ವಾಭಿಮಾನ ಬದುಕು ಕಟ್ಟಿಕೊಳ್ಳಲು ಕೌಶಲ್ಯ ತರಬೇತಿ ಶಿಬಿರಗಳು ದಾರಿ ದೀಪವಾಗಲಿದೆ ಎಂದು ಸಂಪನ್ಮೂಲ ವ್ಯಕ್ತಿ ಪುಷ್ಪಾವತಿ ರವರು ತಿಳಿಸಿದರು.
ಅವರು ತಾಲ್ಲೂಕಿನ ಜಿಗಣಿ ಸಮೀಪವಿರುವ ವಡೇರ ಮಂಚನಹಳ್ಳಿ ಗ್ರಾಮದಲ್ಲಿ ಇಡಿಐಐ ಸಂಸ್ಥೆ ಹಾಗೂ ಹೆಚ್.ಸಿ.ಎಲ್. ಪೌಂಡೇಶನ್ ಸಹಯೋಗದಲ್ಲಿ ಗೃಹ ಬಳಕೆ ರಾಸಾಯಣಿಕ ಪದಾರ್ಥಗಳ ತಯಾರಿಕಾ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಹಿಂದಿನ ಕಾಲದಲ್ಲಿ ಹೆಣ್ಣು ಕೇವಲ ಅಡುಗೆ ಮನೆಗೆ ಸೀಮಿತವಾಗಿದ್ದಳು ಆದರೆ ಇಂದು ಹೆಣ್ಣು ಎಲ್ಲಾ ರಂಗಗಳಲ್ಲಿ ಸಾಧನೆ ಮಾಡಬಹುದು ಎಂಬುದನ್ನು ಸಾಬೀತು ಮಾಡಿ ತೋರಿಸಿದ್ದಾಳೆ ಎಂದರು.
ಮಹಿಳೆಯರು ಸ್ವಯಂ ಉದ್ಯೋಗ ಕೈಗೊಂಡು ಸ್ವಾವಲಂಬಿ ಜೀವನ ನಡೆಸಲಿ ಎಂಬುವ ಉದ್ದೇಶದಿಂದ ಇಡಿಐಐ ಸಂಸ್ಥೆ ಹಾಗೂ ಹೆಚ್.ಸಿ.ಎಲ್. ಪೌಂಡೇಶನ್ ಸಹಯೋಗದಲ್ಲಿ
ವಡೇರ ಮಂಚನಹಳ್ಳಿ ಗ್ರಾಮದಲ್ಲಿ ಸುಮಾರು ೩೦ ಮಹಿಳೆಯರಿಗೆ ಸುಮಾರು ಒಂದು ತಿಂಗಳು ಕಾಲ ಉಚಿತವಾಗಿ ಸೋಪ್ ಆಯಿಲ್, ಹ್ಯಾಂಡ್ ವಾಶ್ ಆಯಿಲ್ ತಯಾರಿಕೆ ಸೇರಿದಂತೆ ವಿವಿಧ ಕೌಶಲ್ಯಗಳ ಬಗ್ಗೆ ತರಬೇತಿ ನೀಡಿದ್ದು, ತರಬೇತಿ ಪಡೆದ ಶಿಭಿರಾರ್ಥಿಗಳು ತಾವು ಕಲಿತ ವಿದ್ಯೆಯನ್ನು ಉತ್ತಮ ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಹೇಳಿದರು.
ಸಮಾಜ ಸೇವಕರಾದ ರವಿಕುಮಾರ್ ಮಾತನಾಡಿ ಮಹಿಳೆಯರು ಕೌಶಲ್ಯದಾರಿತ ತರಬೇತಿ ಪಡೆದರೆ ಮಾತ್ರ ಸ್ವಯಂ ಉದ್ಯೋಗಿಗಳಾಗಿ ಜೀವನದಲ್ಲಿ ಉನ್ನತ ಮಟ್ಟಕೇರಲು ಸಾಧ್ಯ ಎಂದರು.
ತರಬೇತಿ ಪಡೆದ ಶಿಭಿರಾರ್ಥಿಗಳು ಸ್ವಯಂ ಉದ್ಯೋಗ ಕೈಗೊಳ್ಳಲು ಬೇಕಾದ ಆರ್ಥಿಕ ನೆರವು, ಮಾರುಕಟ್ಟೆ ವ್ಯವಸ್ಥೆ, ಉತ್ಪಾದನೆ ಸೇರಿದಂತೆ ಯಾವುದೇ ಸಮಸ್ಯೆಗಳಿಗೂ ಪರಿಹಾರವನ್ನು ಇಡಿಐಐ ಸಂಸ್ಥೆ ಹಾಗೂ ಹೆಚ್.ಸಿ.ಎಲ್. ಪೌಂಡೇಶನ್ ನೀಡುತ್ತದೆ, ಶಿಭಿರಾರ್ಥಿಗಳು ಯಾವುದೇ ಆತಂಕಗೊಳಗಾದೆ ಸ್ವಯಂ ಉದ್ಯೋಗ ಮಾಡಿ ಎಂದು ಶಿಬಿರಾರ್ಥಿಗಳಲ್ಲಿ ಸ್ಪೂರ್ತಿ ತುಂಬಿದರು.
ಇಡಿಐಐ ಸಂಸ್ಥೆಯ ನೀಕು ಅಬ್ರಹಾಮ್ ಮ್ಯಾಥಿವ್, ಶರಣ್ ಕುಮಾರ್, ತರಬೇತುದಾರರಾದ ಅನುಸೂಯ ಮತ್ತು ಶಿಭಿರಾರ್ಥಿಗಳು ಭಾಗವಹಿಸಿದ್ದರು.