ಕೌಶಲ್ಯಾಭಿವೃದ್ಧಿಯಿಂದ ಆರ್ಥಿಕ ಸಬಲತೆ: ಸುಬ್ರಮಣ್ಯ ಪ್ರಭು

ಬೀದರ್:ಜ.22: ಕೌಶಲ್ಯಾಭಿವೃದ್ಧಿಯಿಂದ ಅರ್ಥಿಕವಾಗಿ ಸಬಲರಾಗಲು ಸಾಧ್ಯವಿದೆ ಎಂದು ಶಾರದಾ ರೂಡಸೆಟ್ ಸಂಸ್ಥೆ ನಿರ್ದೇಶಕ ಸುಬ್ರಮಣ್ಯ ಪ್ರಭು ತಿಳಿಸಿದರು.

ಭಾರತ ಸರಕಾರ ನೆಹರು ಯುವ ಕೇಂದ್ರ ಬೀದರ್, ಸ್ವಾಮಿ ವಿವೇಕಾನಂದ ಯುವಶಕ್ತಿ ಕೇಂದ್ರ ಕಾಳಸರತುಗಾಂವ, ಭಾರತ ಯುತ್ ವೆಲಫೇರ್ ಏಜ್ಯುಕೆಶನ್ ಆ್ಯಂಡ್ ರೂರಲ್ ಡೆವಲಪಮೆಂಟ್ ಸೂಸೈಟಿ ಮತ್ತು ಕಿತ್ತೂರು ರಾಣಿ ಚನ್ನಮ್ಮ ಮಹಿಳಾ ಮಂಡಳಿ ಬೀದರ್ ಇವರ ಸಂಯುಕ್ತಾಶ್ರಯದಲ್ಲಿ ಸ್ವಾಮಿ ವಿವೇಕಾನಂದರ 161ನೇ ಜಯಂತ್ಯೋತ್ಸವ ನಿಮಿತ್ಯ ರಾಷ್ಟ್ರೀಯ ಯುವ ಸಪ್ತಾಹ ಅಂಗವಾಗಿ ಹಮ್ಮಿಕೊಂಎಡ ಕೌಶಲ್ಯಾಭಿವೃದ್ಧಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಮನೆಯ ಯಜಮಾನಿ ಮಹಿಳೆಯಾದವಳು ಆರ್ಥಿಕವಾಗಿ ಬಲಿಷ್ಟಳಾದರೆ ಆ ಕುಟುಂಬ ಅಭಿವೃದ್ಧಿ ಹೊಂದಲು ಸಾಧ್ಯವಿದೆ. ಜಿಲ್ಲೆಯ ಮಹಿಳೆಯರ ವಿಕಾಸಕ್ಕಾಗಿ ಜಿಲ್ಲಾ ಸಹಕಾರ ಕೇಂದ್ರ(ಡಿ.ಸಿ.ಸಿ) ಬ್ಯಾಂಕ್ ಮಹಿಳಾ ಸ್ವಸಹಾಯ ಸಂಘಗಳ ಮೂಲಕ ಸಾಲ ನೀಡಿ ಅವರಿಗೆ ಉದ್ಯೋಗ ಸೃಷ್ಟಿಸಿಕೊಳ್ಳಲು ಅವಕಾಶ ನೀಡುತ್ತಿದೆ. ಅವರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೂ ಹಾಗೂ ಸ್ವಯಂ ಉದ್ಯೋಗ ಮಾಡಲು ವಿಶೇಷ ತರಬೇತಿ ಸಹ ನೀಡುತ್ತಿದೆ ಎಂದು ವಿವರಿಸಿದರು.

ಇಂದು ಮಹಿಳೆ ಯಾವುದರಲ್ಲೂ ಕಡಿಮೆ ಇಲ್ಲ. ವಿಮಾನ ನಡೆಸುವುದರಿಂದ ಹಿಡಿದು ಕ್ರಿಕೇಟ್ ಪಂದ್ಯಾವಳಿಯಲ್ಲಿ ತೊಡಗಿಕೊಂಡು ರಾಷ್ಟ್ರಕ್ಕೆ ಕೀರ್ತಿ ತರುವ ತನಕ ಸೇವೆ ಸಲ್ಲಿಸುತ್ತಿರುವರು. ಇನಫೋಸಿಸ್‍ನ ಸುಧಾಮೂರ್ತಿಯಿಂದ ಹಿಡಿದು ರಾಷ್ಟ್ರಪತಿ ದ್ರೌಪದಿ ಮೂರ್ಮು ವರೆಗೆ ರಾಷ್ಟ್ರದ ಅಗ್ರಗಣ್ಯ ನಾರಿಯರಾಗಿ ಗುರ್ತಿಸಿರುವರು. ಇಂದು ಇಡೀ ದೇಶದ ಅರ್ಥವ್ಯವಸ್ಥೆ ಓರ್ವ ಮಹಿಳೆಯ ಕೈಯಲ್ಲಿರಬೇಕಾದರೆ ತಾವೆಲ್ಲ ಮುಂದೆ ಬಂದು ತಮಗಾಗಿ ಸರ್ಕಾರ ಹಾಗೂ ಸಂಘ, ಸಂಸ್ಥೆಗಳು ನೀಡುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಕಿವಿ ಮಾತು ಹೇಳಿದರು.

ಭಾರತೀಯ ಕುಟುಂಬ ಯೋಜನಾ ಸಂಘದ ವ್ಯವಸ್ಥಾಪಕ ಶ್ರೀನಿವಾಸ ಬಿರಾದಾರ ಮುಖ್ಯ ಅತಿಥಿಗಳಾಗಿ ಮಾತನಾಡಿ, ಮಹಿಳೆ ಶೈಕ್ಷಣಿಕ, ಸಾಮಾಜಿಕ, ರಾಜಕೀಯ, ಆರೋಗ್ಯಕ, ಆರ್ಥಿಕ, ರಂಗಗಳಲ್ಲಿ ಮುಂದುವರೆದರೆ ಆ ದೇಶ ಜಗತ್ತಿನ ಸೂಪರ್ ಪಾವರ್ ದೇಶವಾಗಿ ಹೊರ ಹೊಮ್ಮುತ್ತದೆ. ಆದ್ದರಿಂದ ಕಿತ್ತೂರು ರಾಣಿ ಚನ್ನಮ್ಮ ಮಹಿಳಾ ಮಂಡಳವು ಬಹುತೇಕ ನಿರ್ಗತಿಕ ಯುವತಿಯರಿಗೆ ಆಶ್ರಯ ನೀಡುವುದುರ ಜೊತೆಗೆ ಅವರ ವಿದ್ಯಾಭ್ಯಾಸ ಜೊತೆಗೆ ಭಾವಿ ದಾಂಪತ್ಯ ಬದುಕು ಸಹ ಹಸನು ಮಾಡಲು ಹೊರಟಿರುವುದು ಸ್ವಾಗತಾರ್ಹ. ಇಂಥ ಕಾರ್ಯಕ್ರಮಗಳು ನಿತ್ಯ ನಿರಂತರ ನಡೆದರೆ ಇಲ್ಲಿಯ ಯುವತಿಯರ ಬದುಕು ಮಾದರಿ ಪ್ರಾಯವಾಗಲು ಪ್ರೇರಣೆ ದೊರೆಯುವುದು ಎಂದರು.

ಭಾರತ ಗೌಡ್ ಸಂಸ್ಥೆಯ ಆಯುಕ್ತೆ ಪ್ರೊ.ಲೀಲಾವತಿ ಚಾಕೊತೆ ಮಾತನಾಡಿ, 22ನೇ ಶತಮಾನದಲ್ಲಿ ಮಹಿಳೆ ವಿದ್ಯಾವಂತಳಾಗಿ ಬೆಳೆದರೂ ಆಕೆಯ ಮೇಲಿನ ಶೋಷಣೆ ಹಾಗೂ ಆಕೆ ಮೇಲೆ ಅತ್ಯಾಚಾರ ಎಸುಗುವುದು ತಪ್ಪುತ್ತಿಲ್ಲ. ಯುವತಿಯರು ದೂರದ ಊರುಗಳಲ್ಲಿ ಹೋಗಿ ಕೆಲಸ ಮಾಡುವುದರಿಂದ ಆಗುವ ಅನಾಹುತ ತಪ್ಪಿಸಲು ಇದ್ದ ಸ್ಥಲದಲ್ಲಿಯೇ ನುರಿತ ತರಬೇತಿ ಪಡೆದು ಸ್ವಯಂ ಉದ್ಯೋಗ ಸೃಷ್ಟಿಸಲು ಮುಂದೆ ಬರಬೇಕೆಂದಸು ಕರೆ ನೀಡಿದರು.

ಕಿತ್ತೂರು ರಾಣಿ ಚನ್ನಮ್ಮ ಮಹಿಳಾ ಮಂಡಳದ ಕಾರ್ಯದರ್ಶಿ ಪುಣ್ಯವತಿ ವಿಸಾಜಿ ಮಾತನಾಡಿ, ಪುರುಷರಿಗಿಂತ ಮಹಿಳೆಯರಲ್ಲಿ ಕೌಶಲ್ಯ ಹೆಚ್ಚಿರುತ್ತದೆ. ಅವಕಾಶಗಳು ಹೇರಳವಾಗಿವೆ. ವಿದ್ಯಾಭ್ಯಾಸದಲ್ಲಿಯೂ ಸಹ ಮಹಿಳೆಯರೆ ಎತ್ತಿದ ಕೈ. ಆದರೂ ಬಹುತೇಕ ಯುವತಿಯರು ಮೊಬೈಲ್‍ಗಳಿಗೆ ಮಾರು ಹೋಗಿ ತಮ್ಮ ಅಮುಲ್ಯ ಬದುಕು ದುಸ್ತರವಾಗಿಸಿಕೊಳ್ಳುತ್ತಿರುವರು ಎಂದು ಕಳವಳ ವ್ಯಕ್ತಪಡಿಸಿದರು. ಜಗದ್ಗುರು ಪಂಚಾಚಾರ್ಯ ಏಜ್ಯುಕೆಶನ್ ಆ್ಯಂಡ್ ರೂರಲ್ ಡೆವಲಪಮೆಂಟ್ ಸೂಸೈಟಿ ಅಧ್ಯಕ್ಷ ಕಾರ್ತಿಕ ಮಠಪತಿ ವೇದಿಕೆಯಲ್ಲಿದ್ದರು.

ಆರಂಭದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಮಹಿಳಾ ಮಂಡಳದ ಸಿಬ್ಬಂದಿ ರಾಜೇಶ್ವರಿ ಸ್ವಾಗತಿಸಿದರು. ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆಯ ಯುವ ಸ್ಪಂದನ ವಿಭಾಗದ ಆಪ್ತ ಸಮಾಲೋಚಕಿ ಜೈಶ್ರೀ ಮೇತ್ರೆ ಕಾರ್ಯಕ್ರಮ ನಿರೂಪಿಸಿದರು. ರಾಜಕುಮಾರ ಬಿರಾದಾರ ವಂದಿಸಿದರು. ಪ್ರಾಚಾರ್ಯ ಸುರೇಂದ್ರ ಕುಂದನ್, ಮನೋಹರ ಸಾಳೂಂಕೆ, ಗೀತಾ, ಸವಿತಾ ವೆಂಕಟೇಶ, ಫಿಲಾಸಮತಿ ಸೇರಿದಂತೆ ಮಹಿಳಾ ಮಂಡಳದ ಇತರೆ ಸಿಬ್ಬಂದಿಗಳು ಹಾಗೂ ಯುವಕ, ಯುವತಿಯರು ಕಾರ್ಯಕ್ರಮದಲ್ಲಿದ್ದರು.