ಕೌಶಲ್ಯದೊಂದಿಗೆ ವೃತ್ತಿ ಜೀವನಕ್ಕೆ ಸಜ್ಜಾಗಲು ವಿದ್ಯಾರ್ಥಿಗಳಿಗೆ ಕರೆ

ತುಮಕೂರು, ಜು. ೨೦- ಮಾನವನ ಪ್ರತಿಭೆಯು ಜನ್ಮದತ್ತವಾಗಿದ್ದು ಅದಕ್ಕೆ ಹೆಚ್ಚಿನ ಹೊಳಪು ಸಿಗುವುದು ಕೌಶಲ್ಯಗಳಿಂದ ಮಾತ್ರವೇ ಆಗಿರುವುದರಿಂದ, ಕಲಿಕೆಯ ಪ್ರತಿ ಹಂತದಲ್ಲಿ ವಿದ್ಯಾರ್ಥಿಗಳು ಕೌಶಲ್ಯಗಳನ್ನು ಮೈಗೂಡಿಸಿಕೊಂಡು ವೃತ್ತಿ ಜೀವನಕ್ಕೆ ಸಜ್ಜಾಗಲು ಸದಾ ಪ್ರಯತ್ನಶೀಲರಾಗಿರಬೇಕು ಎಂದು ತುಮಕೂರು ಸ್ಮಾರ್ಟ್‌ಸಿಟಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಟಿ.ರಂಗಸ್ವಾಮಿ ಹೇಳಿದರು.
ನಗರದ ಶ್ರೀದೇವಿ ಇಂಜಿನಿಯರಿಂಗ್ ಕಾಲೇಜಿನಲ್ಲಿ “ಸ್ಕಿಲ್ ಅ?ಯಂಡ್ ಕ್ಯಾರೀರ್ ಡೆವಲಪ್‌ಮೆಂಟ್ ಸೆಲ್’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ತುಮಕೂರು ಸ್ಮಾರ್ಟ್‌ಸಿಟಿ ಯೋಜನೆಯು ರಾಜ್ಯದಲ್ಲಿ ಪ್ರಗತಿಯಲ್ಲಿ ಪ್ರಥಮ ಸ್ಥಾನದಲ್ಲಿದ್ದು, ದೇಶದಲ್ಲಿ ಏಳನೇ ಸ್ಥಾನದಲ್ಲಿದೆ. ಈಗಿನ ವೃತ್ತಿಯು ಸಂಪೂರ್ಣ ಕೌಶಲ್ಯಾಧಾರಿತವಾಗಿದ್ದು ವಿದ್ಯಾರ್ಥಿಗಳು ದೊರಕಿರುವ ಉತ್ತಮ ಅವಕಾಶದ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಶ್ರೀದೇವಿ ವೈದ್ಯಕೀಯ ನಿರ್ದೇಶಕ ಡಾ.ರಮಣ್ ಎಂ ಹುಲಿನಾಯ್ಕರ್ ಮಾತನಾಡಿ, ವರ್ತಮಾನದಲ್ಲಿ ಪದವಿ ಪತ್ರ ಪಡೆದುಕೊಳ್ಳುವುದೇ ಪರಿಪೂರ್ಣ ಶಿಕ್ಷಣವಲ್ಲವೆಂದು, ವೈದ್ಯಕೀಯ ಉಪಕರಣಗಳ ಅವಿಷ್ಕಾರಗಳಲ್ಲಿ ಇಂಜಿನಿಯರ್‌ಗಳು ವೈದ್ಯಕೀಯ ಜಗತ್ತಿನ ಸಮಸ್ಯೆಗಳನ್ನು ಡಾಕ್ಟರುಗಳ ಜತೆ ಚರ್ಚಿಸಿ ಕೌಶಲ್ಯಭರಿತವಾಗಿ ಸಂಶೋಧನೆ ಕೈಗೊಂಡರೆ ರೋಗಿಗಳ ಚಿಕಿತ್ಸೆಯಲ್ಲಿ ಅಪಾರ ಸೇವೆ ಮಾಡುವ ಅವಕಾಶಗಳಿವೆ. ಈ ನಿಟ್ಟಿನಲ್ಲಿ ಕಂಪ್ಯೂಟರ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರುಗಳು ಪ್ರಯತ್ನಿಸಬೇಕು ಎಂದರು.
ಶ್ರೀದೇವಿ ಛಾರಿಟಬಲ್ ಟ್ರಸ್ಟ್‌ನ ಮಾನವ ಸಂಪನ್ಮೂಲ ಮತ್ತು ಮಾಹಿತಿ ತಂತ್ರಜ್ಞಾನ ನಿರ್ದೇಶಕ ಎಂ.ಎಸ್.ಪಾಟೀಲ್ ಮಾತನಾಡಿ, ಕಾರ್ಪೊರೇಟ್ ಕಂಪನಿಗಳು ಕೆಲಸಕ್ಕೆ ಸೇರಿಸಿಕೊಂಡು ನಂತರ ಅಭ್ಯರ್ಥಿಗಳಿಗೆ ತರಬೇತಿ ನೀಡಿ ಸಜ್ಜುಗೊಳಿಸುವ ಕಾಲ ಬದಲಾಗಿ ಮೊದಲೇ ತರಬೇತಿ ಕೌಶಲ್ಯಗಳ್ಳುಳ ಅಭ್ಯರ್ಥಿಗಳಿಗೆ ಎದುರು ನೋಡುತ್ತಿವೆ. ಕೌಶಲ್ಯಾಧಾರಿತ ಕಲಿಕೆಯ ಮಹತ್ವವನ್ನು ದೃಷ್ಟಾಂತಗಳೊಂದಿಗೆ ವಿವರಿಸಿ ಆಡಳಿತವು ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ, ಸ್ಟಾರ್ಟ್ ಆಪ್ ಇಂಡಿಯಾ ಯೋಜನೆಗಳನ್ನು ಕೌಶಲ್ಯಾಧಾರಿತ ಕಲಿಕೆಯ ಸಾಧನವಾಗಿಯೇ ಜಾರಿಗೆ ತಂದಿದೆ. ಸಂಸ್ಥೆಯಿಂದ ಎಲ್ಲ ತರಹದ ಉತ್ತೇಜನ ನೀಡಿ ಕಲಿಕೆಗೆ ಅವಕಾಶ ಮಾಡಿಕೊಡಲಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀದೇವಿ ಚಾರಿಟಬಲ್ ಟ್ರಸ್ಟ್ ಮುಖ್ಯಸ್ಥ ಡಾ. ಎಂ. ಆರ್. ಹುಲಿನಾಯ್ಕರ್ ಮಾತನಾಡಿ, ವಿಶ್ವವಿದ್ಯಾಲಯಗಳ ಶೈಕ್ಷಣಿಕ ಪಠ್ಯಕ್ರಮ ಬದಲಾಗುತ್ತಿರುವ ತಾಂತ್ರಿಕತೆಗೆ ತಕ್ಕಂತೆ ತ್ವರಿತವಾಗಿ ಹೊಂದಿಕೊಳ್ಳಬೇಕಾದಲ್ಲಿ ಕೌಶಲ್ಯಾಭರಿತ ಕಲಿಕೆ ಅಗತ್ಯ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸರ್ಕಾರ ತಾಂತ್ರಿಕಾರಕ ಬದಲಾವಣೆಗಳನ್ನು ತರುತ್ತಿದ್ದು ಕೌಶಲ್ಯಾಭರಿತರ ಹೊಸ ಸರಳ, ಉಪಾಯ ಕಲ್ಪನೆಗಳು ಮಹತ್ತರ ಸಾಧನೆಗೆ ಮತ್ತು ಸಂಪತ್ತು ಗಳಿಕೆಗೆ ಕಾರಣವಾಗಬಹುದು. ಯುವ ಜನ ಉದ್ಯಮಶೀಲರಾಗಿ ಇತರರಿಗೆ ಉದ್ಯೋಗದಾತರಾಗಲು ಸನ್ನದ್ದರಾಗಬೇಕು ಎಂದರು.
ಹರ್ಷಿತಾ ಮತ್ತು ದೀಪಾರಾಧ್ಯ ಪ್ರಾರ್ಥಿಸಿದರು. ಪ್ರಾಂಶುಪಾಲರಾದ ಡಾ.ನರೇಂದ್ರ ವಿಶ್ವನಾಥ್ ಸ್ವಾಗತಿಸಿದರು. ಡಾ.ಸಿ.ನಾಗರಾಜು ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಶ್ರೀದೇವಿ ಸಂಸ್ಥೆಯ ಆಡಳಿತಾಧಿಕಾರಿ ಟಿ.ವಿ.ಬ್ರಹ್ಮದೇವಯ್ಯ, ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ.ಎನ್.ಚಂದ್ರಶೇಖರ್, ಪ್ರೊ.ಷಣ್ಮುಖಸ್ವಾಮಿ, ಪ್ರೊ.ಬಿ.ಹೆಚ್.ವಾಸುದೇವಮೂರ್ತಿ, ಡಾ.ಜಿ.ಮಹೇಶ್‌ಕುಮಾರ್, ಪ್ರೊ.ರವಿಕುಮಾರ್ ಜಿ.ಹೆಚ್. ಪ್ರೊ.ಐಜಾಜ್ ಅಹಮ್ಮದ್ ಷರೀಫ್, ಡಾ.ಚರಣ್, ಡಾ.ಸುಹಾಸ್ ಜಿ.ಕೆ, ಡಾ.ಸದಾಶಿವಯ್ಯ ಪಿ.ಜೆ. ಡಾ.ಕಿಶೋರ್‍ಕುಮಾರ್ ಮತ್ತು ಸಂಯೋಜಕರಾದ ಪ್ರೊ.ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು.