ಕೌಶಲ್ಯದಿಂದ ಸದೃಢ ಭಾರತ ನಿರ್ಮಾಣಕ್ಕೆ ಸಹಕಾರಿ

ಕೋಲಾರ, ಜು.೧೩: ರಾಜ್ಯದಲ್ಲಿ ೫ ಲಕ್ಷ ಮಂದಿಗೆ ಕೌಶಲ್ಯ,ಉದ್ಯಮಶೀಲತಾ ತರಬೇತಿ ನೀಡುವ ಮೂಲಕ ಸ್ವಾವಲಂಬಿ ಯುವಕರನ್ನು ತಯಾರಿಸಿ ಸದೃಢ ಭಾರತ ನಿರ್ಮಿಸುವ ಉದ್ದೇಶ ಕೇಂದ್ರ,ರಾಜ್ಯ ಸರ್ಕಾರದ್ದಾಗಿದೆ ಎಂದು ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದರು.
ನಗರದ ಮಹಿಳಾ ಕಾಲೇಜು ಸಭಾಂಗಣದಲ್ಲಿ ಮಂಗಳವಾರ ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ, ಜೀವನೋಪಾಯ ಇಲಾಖೆ, ಕರ್ನಾಟಕ ಉದ್ಯಮಶೀಲತಾಭಿವೃದ್ದಿಕೇಂದ್ರ, ಧಾರವಾಡ, ಜಿಲ್ಲಾ ಕೈಗಾರಿಕಾ ಕೇಂದ್ರ, ಮಹಿಳಾ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗಾಗಿ ಜು.೧೨ ರಿಂದ ೧೪ ರವರೆಗೆ ಹಮ್ಮಿಕೊಂಡಿರುವ ಮೂರುದಿನಗಳ ಉದ್ಯಮಶೀಲತಾ ತಿಳುವಳಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ್ ಕಾರ್ಯಕ್ರಮ ಹಾಗೂ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಕಾರ್ಯಕ್ರಮದಡಿ ೫ ಲಕ್ಷ ಮಂದಿಯನ್ನು ಆಧುನಿಕತೆಗೆ ತಕ್ಕಂತೆ ಅಗತ್ಯವಿರುವ ತಂತ್ರಜ್ಞಾನ ಕೌಶಲ್ಯದಡಿ ಸಿದ್ದಪಡಿಸುವ ಉದ್ದೇಶವಿದೆ ಎಂದು ತಿಳಿಸಿದರು.
ಯುವಜನರ ಭವಿಷ್ಯವನ್ನು ಉಜ್ವಲಗೊಳಿಸುವ ಸದುದ್ದೇಶದಿಂದ ಸರ್ಕಾರ ಆತ್ಮನಿರ್ಭರ ಭಾರತ,ಸದೃಢ ಭಾರತವಾಗಿಸಲು ಅಗತ್ಯವಾದ ಕೌಶಲ್ಯ ಶಿಕ್ಷಣ ನೀಡುತ್ತಿದೆ, ತಂತ್ರಜ್ಞಾನ ಹೊಂದಿರುವ ಕೈಗಾರಿಕೆಗಳಿಗೆ ಅಗತ್ಯವಾದ ಮಾನವ ಸಂಪನ್ಮೂಲವನ್ನು ಸಿದ್ದಪಡಿಸುವ ಹೊಣೆಯೂ ಈ ಕಾರ್ಯಕ್ರಮದಡಿ ಇದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಸಿಡಾಕ್ ಜಂಟಿ ನಿರ್ದೇಶಕ ಎಂ.ಎಸ್.ಮಧು ಮಾತನಾಡಿ, ಅಗತ್ಯವಾದ ಕೌಶಲ್ಯ ತರಬೇತಿ ನೀಡುವ ಮೂಲಕ ಯುವಶಕ್ತಿಗೆ ಶಕ್ತಿ ತುಂಬುವ ಕೆಲಸವನ್ನು ಮಾಡುತ್ತಿರುವುದಾಗಿ ತಿಳಿಸಿದರು.ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ಶ್ರೀನಿವಾಸರೆಡ್ಡಿ, ಸಾಲ ಸೌಲಭ್ಯ ಪಡೆಯಲು ಅನೇಕ ಯೋಜನೆಗಳಿದ್ದು, ನೀವು ಕೌಶಲ್ಯ ತರಬೇತಿ ಪಡೆದು ಮುಂದೆ ಬಂದರೆ ಎಲ್ಲಾ ಅಗತ್ಯ ಸೌಲಭ್ಯ ಸಿಗಲಿದೆ ಎಂದು ತಿಳಿಸಿದರು.
ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಿ.ಇ.ಗಂಗಾಧರರಾವ್ ಅಧ್ಯಕ್ಷತೆ ವಹಿಸಿದ್ದು, ನಮ್ಮ ಕಾಲೇಜಿನಲ್ಲಿ ಮೂರು ಸಾವಿರಕ್ಕೂ ಹೆಚ್ಚು ಮಂದಿ ಪದವಿ ಶಿಕ್ಷಣ ಪಡೆಯುತ್ತಿದ್ದು, ಈ ತರಬೇತಿಯ ಮೂಲಕ ಸ್ವಯಂ ಉದ್ಯೋಗದ ಆಶಯಗಳೊಂದಿಗೆ ಸ್ವಾವಲಂಬಿ ಬದುಕು ತಮ್ಮದಾಗಿಸುವ ಆತ್ಮಸ್ಥೈರ್ಯವನ್ನು ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಮಹಿಳಾ ಕಾಲೇಜು ಉದ್ಯೋಗ ಮಾಹಿತಿ ಘಟಕದ ಸಂಚಾಲಕ ಜಿ.ಎಂ.ಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಪದವಿ ನಂತರ ಕೇವಲ ಮದುವೆ ಮಾಡಿಕೊಂಡರೆ ನಮ್ಮ ಜೀವನ ಮುಗಿಯಿತು ಎಂಬ ಭಾವನೆ ಇದೆ, ನೀವು ದೇಶದ ಶಕ್ತಿಯಾಗಿದ್ದು, ಉದ್ಯೋಗ ಸೃಷ್ಟಿಸುವ ಶಕ್ತಿ ಪಡೆದುಕೊಳ್ಳಿ, ನೀವು ಉದ್ಯೋಗದಾತರಾಗಿ ಎಂದು ತಿಳಿಸಿ, ಕೌಶಲ್ಯ ತರಬೇತಿ ಇಂದು ಯುವಕರಿಗೆ ಅತ್ಯಗತ್ಯ ಎಂದರು.
ಕಾಲೇಜು ಅಭಿವೃದ್ದಿ ಸಮಿತಿ ಕಾರ್ಯಾಧ್ಯಕ್ಷ ಪಂಡಿತ್ ಮುನಿವೆಂಕಟಪ್ಪ, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ರವಿಚಂದ್ರ, ವಾಣಿಜ್ಯ ವಿಭಾಗದ ಮುಖ್ಯಸ್ಥ ಮುನಿರಾಜು, ಸಿಬ್ಬಂದಿ ಕಾರ್ಯದರ್ಶಿ ಎಂ.ಗಂಗರಾಜ್, ತರಬೇತುದಾರ ಸಿಡಾಕ್‌ನ ಆರ್.ಕಲ್ಯಾಣ್‌ಕುಮಾರ್ ಉಪಸ್ಥಿತರಿದ್ದರು.