ಕೌಶಲಯುಕ್ತ ಮಾನವ ಸಂಪನ್ಮೂಲ ಇಂದಿನ ಅಗತ್ಯ:ನಿರ್ಮಲಾನಂದ ಸ್ವಾಮೀಜಿ

ಕಲಬುರಗಿ:ಫೆ.13: ನಮ್ಮ ಯುವ ಜನಾಂಗದಲ್ಲಿ ಕೌಶಲ ಹೆಚ್ಚಾದರೆ ದೇಶದ ಭಾರಿ ಜನಸಂಖ್ಯೆ ಯಾವುದೇ ಕಾರಣಕ್ಕೂ ಮಾರಕ ಎನಿಸದು ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ಜಗದ್ಗುರು ಶ್ರೀ ನಿರ್ಮಲಾನಂದ ಸ್ವಾಮೀಜಿ ನುಡಿದರು.
ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪಿಡಿಎ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕೇಂದ್ರ ಸರಕಾರದ ಸ್ಕಿಲ್ ಡೆವಲಪ್‍ಮೆಂಟ್ ಬೋರ್ಡ್ ಹಾಗೂ ಬೆಂಗಳೂರಿನ ಎಥ್ನೊಟೆಕ್ ಅಕಾಡೆಮಿ ಅಡಿ ಪೂಜ್ಯ ಬಸವರಾಜ ದೊಡ್ಡಪ್ಪ ಅಪ್ಪ ಸೆಂಟರ್ ಫಾರ್ ಫ್ಯೂಚರ್ ಎಕ್ಸಲೆನ್ಸ್ ಉದ್ಘಾಟನಾ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. 1894ರ ಸಂದರ್ಭದಲ್ಲಿ ಭಾರತ ಎಂಬುದು ಕೇವಲ ಧರ್ಮ ಮತ್ತು ಅಧ್ಯಾತ್ಮ ಕ್ಷೇತ್ರದಲ್ಲಿ ಗುರುತಿಸಿಕೊಂಡಿತ್ತು. ಆದರೆ, ಚಿಕಾಗೋ ಧರ್ಮ ಸಮ್ಮೇಳನಕ್ಕೆ ತೆರಳಿದ ಸ್ವಾಮಿ ವಿವೇಕಾನಂದರು ಆ ದೇಶದ ತಂತ್ರಜ್ಞಾನ ಪ್ರಾವೀಣ್ಯತೆ ಗಮನಿಸಿ ಆ ಕುರಿತು ಜೆಮ್‍ಷೆಡ್‍ಜಿ ಟಾಟಾ ಅವರೊಂದಿಗೆ ಒಮ್ಮೆ ಚರ್ಚಿಸಿದ ಬಳಿಕ ಕರ್ನಾಟಕದಲ್ಲಿ ಇಂಡಿಯನ್ ಇನ್ಸ್‍ಟಿಟ್ಯೂಟ್ ಆಫ್ ಸೈನ್ಸ್ ಸ್ಥಾಪನೆಯಾಗಲು ಕಾರಣವಾಯಿತು ಎಂದರು.
ಇಂದು ದೇಶದಲ್ಲಿ ತಂತ್ರಜ್ಞಾನಕ್ಕೆ ಯಾವುದೇ ಕೊರತೆಯಿಲ್ಲ. ಆದರೆ, ದಿನೇದಿನೇ ಸುಧಾರಿತ ರೂಪದಲ್ಲಿ ಬರುತ್ತಿರುವ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಯುವಜನರು ಮನಸ್ಸು ಮಾಡಬೇಕು. ದೇಶದ ಕೈಗಾರಿಕೆಗಳಲ್ಲಿ ಕೌಶಲಕ್ಕೆ ಹೆಚ್ಚು ಬೇಡಿಕೆಯಿದೆ. ಇನ್ನೊಂದೆಡೆ, ಶಿಕ್ಷಣ ಸಂಸ್ಥೆಗಳಲ್ಲಿ ಬೋಧಿಸುತ್ತಿರುವ ಪಠ್ಯ ಮತ್ತು ಕೈಗಾರಿಕೆಗಳ ಈ ಬೇಡಿಕೆಯ ಮಧ್ಯೆ ದೊಡ್ಡ ಅಂತರವಿದೆ. ಈ ನಿಟ್ಟಿನಲ್ಲಿ ಅಂತರ ಇಲ್ಲದಂತೆ ಮಾಡುವಲ್ಲಿ ರಾಷ್ಟ್ರೀಯ ಕೌಶಲಾಭಿವೃದ್ಧಿ ಮಂಡಳಿ ಮುತುವರ್ಜಿ ವಹಿಸಿ ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದು ಸ್ವಾಮೀಜಿ ಸಲಹೆ ನೀಡಿದರು.
ನವದೆಹಲಿಯ ಎಐಸಿಟಿಇ ಚೇರ್ಮನ್ ಪೆÇ್ರ.ಟಿ.ಜಿ.ಸೀತಾರಾಂ ಮಾತನಾಡಿ, ತಂತ್ರಜ್ಞಾನ ಎಂಬುದು ಮಾನವ ಕಲ್ಯಾಣಕ್ಕೆ ಬಳಕೆಯಾಗಬೇಕು. ಆ ನಿಟ್ಟಿನಲ್ಲಿ ಇಂದು ಭಾರತ ಇಡೀ ಜಗತ್ತಿನ ಗಮನ ಸೆಳೆದಿದೆ. ಕೋವಿಡ್ ಸಂದರ್ಭದಲ್ಲಿ ಭಾರತ ಅಭಿವೃದ್ಧಿಪಡಿಸಿದ ಲಸಿಕೆಯನ್ನು ಜಗತ್ತಿನ 100ಕ್ಕೂ ಹೆಚ್ಚು ದೇಶಗಳಿಗೆ ಉಚಿತವಾಗಿ ಒದಗಿಸುವ ಮೂಲಕ ಮಾನವ ಕಲ್ಯಾಣ ತತ್ವ ಎತ್ತಿ ಹಿಡಿಯಲಾಯಿತು. ಈ ತತ್ವಕ್ಕೆ ಒತ್ತುಕೊಡುವ ಮೂಲಕ ಎಐಸಿಟಿಇ ವ್ಯಾಪ್ತಿಯ ಎಲ್ಲ ತಾಂತ್ರಿಕ ವಿದ್ಯಾಲಯಗಳಲ್ಲಿ ವಿಶ್ವಮಾನವತಾ ಮೌಲ್ಯಗಳನ್ನು ಕಡ್ಡಾಯವಾಗಿ ಬೋಧಿಸುವಂತೆ ನಿಯಮ ರೂಪಿಸಲಾಗಿದೆ ಎಂದರು.
ಐಎಸ್‍ಟಿಇ ಡಾ.ಪ್ರತಾಪಸಿಂಗ್ ಕೆ.ದೇಸಾಯಿ ಮಾತನಾಡಿ, ಮನುಷ್ಯತ್ವಕ್ಕೆ ಒತ್ತು ನೀಡದ ತಂತ್ರಜ್ಞಾನ ಇದ್ದೂ ಇಲ್ಲದಂತೆ. ಹಾಗಾಗಿಯೇ ಈ ದೇಶದಲ್ಲಿ ಧರ್ಮ, ಅಧ್ಮಾತ್ಮದೊಂದಿಗೆ ತಂತ್ರಜ್ಞಾನವೂ ಮನುಷ್ಯತ್ವಕ್ಕೆ ಒತ್ತು ನೀಡುವಲ್ಲಿ ಪ್ರಾಮುಖ್ಯತೆ ನೀಡುತ್ತಿವೆ ಎಂದು ನುಡಿದರು.
ಎಚ್.ಕೆ.ಇ ಅಧ್ಯಕ್ಷ ಡಾ.ಭೀಮಾಶಂಕರ ಬಿಲಗುಂದಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇವೇಳೆ, ಪೂಜ್ಯ ಬಸವರಾಜ ದೊಡ್ಡಪ್ಪ ಅಪ್ಪ ಸೆಂಟರ್ ಫಾರ್ ಫ್ಯೂಚರ್ ಎಕ್ಸಲೆನ್ಸ್ ಕಿರುಪುಸ್ತಕ ಬಿಡುಗಡೆ ಮಾಡಲಾಯಿತು. ಬಿಜಿಎಸ್ ಮತ್ತು ಎಸ್.ಜೆ.ಬಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ಹಾಗೂ ಹಾಸ್ಪಿಟಲ್ಸ್ ವ್ಯವಸ್ಥಾಪಕ ನಿರ್ದೇಶಕ ಶ್ರೀ ಡಾ.ಪ್ರಕಾಶನಾಥ ಸ್ವಾಮೀಜಿ ಇದ್ದರು.
ಎಚ್.ಕೆ.ಇ ಆಡಳಿತ ಮಂಡಳಿ ಸದಸ್ಯ ಬಸವರಾಜ ಖಂಡೇರಾವ್, ಐಎಸ್‍ಇಟಿ ರಾಜ್ಯ ಖಜಾಂಚಿ ಡಾ.ಜಿ.ಎಸ್.ಮಲಶೆಟ್ಟಿ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕಲಬುರಗಿ ಪ್ರಾದೇಶಿಕ ನಿರ್ದೇಶಕ ಡಾ.ಬಸವರಾಜ ಗಾದಗೆ, ಎಚ್‍ಕೆಇ ಆಡಳಿತ ಮಂಡಳಿ ಸದಸ್ಯರಾದ ಡಾ.ಜಗನ್ನಾಥ ಬಿಜಾಪುರೆ, ಡಾ.ಮಹಾದೇವಪ್ಪ ರಾಂಪುರೆ, ಡಾ.ಶರಣಬಸಪ್ಪ ಹರವಾಳ ಹಾಗೂ ಇತರರು ವೇದಿಕೆಯಲ್ಲಿದ್ದರು.

ಎಥ್ನೊಟೆಕ್ ಗ್ರೂಪ್ ಆಫ್ ಕಂಪನೋಸ್ ಚೇರ್ಮನ್ ಡಾ.ಕಿರಣ ಕೆ.ರಾಜಣ್ಣ ಸ್ವಾಗತಿಸಿದರು. ಡಾ.ಗೀತಾ ಪಾಟೀಲ್ ನಿರೂಪಿಸಿದರು. ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಶಶಿಕಾಂತ ಮೀಸೆ ವಂದಿಸಿದರು.

2047ಕ್ಕೆ ಭಾರತ ವಿಶ್ವಗುರು
2047ರ ಹೊತ್ತಿಗೆ ಭಾರತ ವಿಶ್ವಗುರು ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಕೇಂದ್ರ ರಸಗೊಬ್ಬರ ಹಾಗೂ ನವೀಕರಣಗೊಳ್ಳಬಲ್ಲ ಇಂಧನ ಖಾತೆ ರಾಜ್ಯಸಚಿವ ಭಗವಂತ ಖೂಬಾ ವಿಶ್ವಾಸ ವ್ಯಕ್ತಪಡಿಸಿದರು.
ಪೂಜ್ಯ ಬಸವರಾಜ ದೊಡ್ಡಪ್ಪ ಅಪ್ಪ ಸೆಂಟರ್ ಫಾರ್ ಫ್ಯೂಚರ್ ಎಕ್ಸಲೆನ್ಸ್ ಉದ್ಘಾಟಿಸಿ ಮಾತನಾಡಿದ ಅವರು, ತಂತ್ರಜ್ಞಾನ ಮತ್ತು ಕೌಶಲ ಕ್ಷೇತ್ರದಲ್ಲಿ ಭಾರತ ಇಂದು ಸಾಕಷ್ಟು ಪ್ರಗತಿ ಸಾಧಿಸಿದೆ. ತಾಂತ್ರಿಕ ಶಿಕ್ಷಣ ಸೇರಿದಂತೆ ಉನ್ನತ ಶಿಕ್ಷಣ ಪಡೆಯಲು ವಿದೇಶಕ್ಕೆ ಹೋಗುವವರ ಸಂಖ್ಯೆ ಕಡಿಮೆಯಾಗಿದ್ದು, ಈಗ ಎಲ್ಲವೂ ಭಾರತದಲ್ಲಿಯೇ ಲಭಿಸುತ್ತಿದೆ. ಇದಕ್ಕೆ ಪುರಾವೆ ಎನ್ನುವಂತೆ ದೇಶದಲ್ಲಿ ಈಗ 1.25 ಲಕ್ಷ ಸ್ಟಾರ್ಟ್-ಅಪ್ ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದು, ಈ ಪೈಕಿ 125 ಯೂನಿಕಾರ್ನ್ ಕಂಪನಿಗಳಿವೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಅಮೆರಿಕದ ಪ್ರತಿಷ್ಠಿತ ನಾಸಾ ಸಂಸ್ಥೆಯಲ್ಲಿ ಭಾರತಸಂಜಾತ ಶೇ.31ರಷ್ಟು ವಿಜ್ಞಾನಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.