ಕೌಶಲಗಳ ಕಲಿಯಲು ಸ್ಕೌಟ್ಸ್ ಗೈಡ್ಸ್ ಸಹಕಾರಿ

ಕೋಲಾರ,ಜ,೮:ವಿದ್ಯಾರ್ಥಿ ದೆಸೆಯಿಂದಲೇ ಜೀವನ ಕೌಶಲಗಳನ್ನು ಕಲಿಯಲು ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಕಂಕಣಬದ್ದವಾಗಿದ್ದು ಇದರ ಪ್ರಯೋಜನವನ್ನು ಎಲ್ಲರೂ ಪಡೆಯಬೇಕು ಎಂದು ಎಂ.ಎನ್.ಜಿ. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಹನಾ ತಿಳಿಸಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೋಲಾರ ತಾಲ್ಲೂಕು ಸಮಿತಿಯಿಂದ ನಗರದ ಎಂ.ಎನ್.ಜಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ದ್ವಿತೀಯ ಸೋಪಾನ್ ಪರಿಕ್ಷಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೇವಲ ಪ್ರಮಾಣಪತ್ರಕ್ಕಾಗಿ ಪರೀಕ್ಷೆಯನ್ನು ಎದುರಿಸಬಾರದು, ಜೀವನದಲ್ಲಿ ಬರುವ ಕಷ್ಟಗಳನ್ನು ಹೇಗೆ ಎದುರಿಸಬೇಕು, ಇತರರಿಗೆ ಹೇಗೆ ಸಹಾಯ ಮಾಡಬೇಕು, ನಮ್ಮನ್ನು ನಾವು ಕಾಪಾಡಿಕೊಳ್ಳುವ ತಂತ್ರಗಳು ಹಾಗೂ ವಿಷಯಗಳನ್ನು ಶಿಬಿರಗಳಲ್ಲಿ ಭಾಗವಹಿಸುವ ಮೂಲಕ ಪಡೆಯಬಹುದಾಗಿದೆ, ಆದ್ದರಿಂದ ತಾವು ಉತ್ತಮವಾದ ಮಾಹಿತಿಗಳನ್ನು ಪಡೆದು ತಮ್ಮ ಗೆಳೆಯರಲ್ಲಿ ಹಂಚಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಆಯುಕ್ತರಾದ ಕೆ.ಆರ್.ಸುರೇಶ್ ಮಾತನಾಡಿ ಪ್ರತಿದಿನ ಕನಿಷ್ಟ ಒಂದು ಒಳ್ಳೆಯ ಕೆಲಸವನ್ನು ಮಾಡುವ ಮೂಲಕ ನಾವು ಸಮಾಜಕ್ಕೆ ಅರ್ಪಿಸಿಕೊಳ್ಳಬೇಕು, ವಿದ್ಯಾರ್ಥಿಗಳು ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಲು ಸ್ಕೌಟ್ಸ್ ಗೈಡ್ಸ್ ಶಿಕ್ಷಣ ಸಹಕಾರಿಯಾಗಿದ್ದು, ಪ್ರತಿಯೊಬ್ಬರು ಸಂಸ್ಥೆ ನಡೆಸುವ ಶಿಬಿರಗಳಲ್ಲಿ ಭಾಗವಹಿಸುವ ಮೂಲಕ ದೈಹಿಕವಾಗಿ, ಮಾನಸಿಕವಾಗಿ,ಆದ್ಯಾತ್ಮಿಕವಾಗಿ ಬೆಳವಣಿಗೆ ಹೊಂದಲು ಸಾಧ್ಯ ಎಂದು ತಿಳಿಸಿದರು.
ಜಿಲ್ಲ ಸಹಕಾರ್ಯದರ್ಶಿ ಸ್ಕೌಟ್ ಬಾಬು ಮಾತನಾಡಿ ಮನೆಯಲ್ಲಿನ ಹಿರಿಯರಿಗೆ ಮತ್ತು ಕಿರಿಯರಿಗೆ ಸಹಾಯ ಮಾಡುವ ಮೂಲಕ ತಾವು ಸೇವೆಯ ಹಾದಿಯಲ್ಲಿ ಮೊದಲ ಹೆಜ್ಜೆಯನ್ನು ಹಾಕುವಿರಿ, ಮುಂದಿನ ದಿನಗಳಲ್ಲಿ ತಾವು ತಮ್ಮ ಸಮೀಪದ ಸಮುದಾಯಕ್ಕೆ ಉತ್ತಮ ಸೇವಾಕರ್ತರಾಗಿ ರೂಪಗೊಳ್ಳಲು ಸ್ಕೌಟ್ಸ್ ಗೈಡ್ಸ್ ಶಿಕ್ಷಣ ಸಹಕಾರಿ, ಶಿಬಿರಗಳಲ್ಲಿ ಭಾಗವಹಿಸುವುದರಿಂದ ಉತ್ತಮ ಸಂವಹನಾ ಕೌಶಲ, ನಾಯಕತ್ವ, ಸಹೋದರೆ, ಧೆಶಭಕ್ತಿ, ಪರಿಸರ ಕಾಳಜಿ, ಸಾರ್ವಜನಿಕ ಆಸ್ತಿ ಸಂರಕ್ಷಣೆ ಮುಂತಾದ ಕೌಶಲಗಳನ್ನು ಸಾಧಿಸಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕಿಯರಾದ ಹೇಮಾವತಿ, ಶ್ರೀದೇವಿ, ಸಂದೇಶ್, ವಿಶ್ವನಾಥ ಗೌಡ ಉಪಸ್ಥಿತರಿದ್ದರು.