
ಮುಂಬೈ, ಮಾ.೫- ಹರ್ಮನ್ ಪ್ರೀತ್ ಕೌರ್ ಹಾಗೂ ಅಮೆಲಿಯಾ ಕೆರ್ ಪ್ರದರ್ಶಿಸಿದ ಸಿಡಿಲಬ್ಬರದ ಬ್ಯಾಟಿಂಗ್ ಜೊತೆಗೆ ಸೈಕಾ ಇಶಾಕೆ ಅತ್ಯುದ್ಬುತ ಬೌಲಿಂಗ್ ನೆರವಿನಿಂದ ಇಲ್ಲಿನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಜಾಯಂಟ್ಸ್ ವಿರುದ್ಧದ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್)ನ ಚೊಚ್ಚಲ ಆವೃತ್ತಿಯ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ದಾಖಲೆಯ ೧೪೩ ರನ್‌ಗಳ ಗೆಲುವು ಸಾಧಿಸಿ, ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಮುಂಬೈ ಪರ ಯಾಸ್ತಿಕಾ ಭಾಟಿಯಾ ವಿಫಲಗೊಂಡರೂ ಹೇಲೆ ಮ್ಯಾಥ್ಯೂಸ್ ಹಾಗೂ ನ್ಯಾಟ್ ಸೀವರ್ (೨೩) ಕೆಲಹೊತ್ತು ಉತ್ತಮ ಪ್ರದರ್ಶನ ನೀಡಿ, ಆಸರೆಯಾದರು. ಅದರಲ್ಲೂ ಮ್ಯಾಥ್ಯೂಸ್ ಕೇವಲ ೩೧ ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ನೆರವಿನಿಂದ ೪೭ ರನ್ ಗಳಿಸಿದರು. ಅದರಲ್ಲೂ ಮಧ್ಯಮ ಕ್ರಮಾಂಕದಲ್ಲಿ ಕೌರ್ ಹಾಗೂ ಕೆರ್ ಪ್ರದರ್ಶಿಸಿದ ಬ್ಯಾಟಿಂಗ್ ಅಕ್ಷರಶಃ ಪಂದ್ಯದ ಗತಿಯನ್ನೇ ಬದಲಾಯಿಸಿತು. ಅದರಲ್ಲೂ ಕೌರ್ ಕೇವಲ ೩೦ ಎಸೆತಗಳಲ್ಲಿ ೧೪ ಬೌಂಡರಿಗಳ ನೆರವಿನಿಂದ ಬಿರುಸಿನ ೬೫ ರನ್ ಗಳಿಸಿದರೆ ಕೆರ್ ೨೪ ಎಸೆತಗಳಲ್ಲಿ ೪೫ ರನ್ ಗಳಿಸಿ ಅಜೇಯರಾಗುಳಿದರು. ಅಂತಿಮವಾಗಿ ತಂಡ ನಿಗದಿತ ೨೦ ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ ೨೦೭ ರನ್‌ಗಳ ಬೃಹತ್ ಮೊತ್ತವನ್ನೇ ಪೇರಿಸಿತು. ಅತ್ತ ಜಾಯಂಟ್ಸ್ ಪರ ಸ್ನೇಹ್ ರಾಣಾ ಎರಡು ವಿಕೆಟ್ ಪಡೆದರು.
ಇನ್ನು ಗುರಿ ಬೆನ್ನತ್ತಿದ ಜಾಯಂಟ್ಸ್ ಸಂಪೂರ್ಣವಾಗಿ ಬ್ಯಾಟಿಂಗ್‌ನಲ್ಲಿ ವಿಫಲತೆ ಕಂಡಿತು. ಅದರಲ್ಲೂ ಇಶಾಕೆ ಪ್ರದರ್ಶಿಸಿದ ಅದ್ಬುತ ಬೌಲಿಂಗ್‌ಗೆ ಸೂಕ್ತ ಉತ್ತರ ನೀಡುವಲ್ಲಿ ಜಾಯಂಟ್ಸ್ ಬ್ಯಾಟರ್ಸ್‌ಗಳು ವಿಫಲರಾದರು. ತಂಡ ಕೇವಲ ೧೫.೧ ಓವರ್‌ಗಳಲ್ಲಿ ೬೪ ರನ್‌ಗಳಿಗೆ ಸರ್ವಪತನ ಕಂಡಿತು. ತಂಡದ ನಾಯಕಿ ಬೆಥ್ ಮೂನಿ (೦) ಗಾಯಾಳುವಾಗಿ ನಿರ್ಗಮಿಸಿದರೆ ಹರ್ಮನ್ ದಿಯೋಲ್ (೦), ಆಶ್ ಗಾರ್ಡರ್ (೦), ಸದರ್‌ಲ್ಯಾಂಡ್ (೬) ವೈಫಲ್ಯ ತಂಡಕ್ಕೆ ದುಬಾರಿಯಾಯಿತು. ಅತ್ತ ಮುಂಬೈ ಪರ ಇಶಾಕೆ ನಾಲ್ಕು ವಿಕೆಟ್ ಪಡೆದರು ಮಿಂಚಿದರು.