ಕೌಟುಂಬಿಕ ವ್ಯವಸ್ಥೆಯ ಸಫಲತೆಯಲ್ಲಿ ತಂದೆಯ ಪಾತ್ರ ಅನನ್ಯ

ಕಲಬುರಗಿ:ಜೂ.18: ತಂದೆಯ ತ್ಯಾಗ, ಪ್ರೀತಿ, ಪ್ರೇಮ ಮರೆಯಬಾರದು. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ತನ್ನತನವನ್ನು ತೊರೆದು, ಎಲ್ಲವೂ ಮಕ್ಕಳಿಗಾಗಿ ದಾರೆಯೆರೆಯುವ ಮೂಲಕ ಮಕ್ಕಳ ಭವಿಷ್ಯವನ್ನು ನಿರ್ಮಿಸುವ ಶಿಲ್ಪಿ ತಂದೆಯಾಗಿದ್ದಾನೆ. ಇಡೀ ತನ್ನ ಜೀವನದುದ್ದಕ್ಕೂ ಕುಟುಂಬದ ಲೇಸನ್ನೇ ಬಯಸುವ ಮೂಲಕ ಕೌಟುಂಬಿಕ ವ್ಯವಸ್ಥೆಯ ಸಫಲತೆಯಲ್ಲಿ ತಂದೆಯ ಪಾತ್ರ ಅನನ್ಯವಾಗಿದೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಸೈಯದ್ ಚಿಂಚೋಳಿ ರಸ್ತೆಯಲ್ಲಿರುವ ‘ಮಹಾದೇವಿ ತಾಯಿ ವೃದ್ಧಾಶ್ರಮ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ಆಯೋಜಿಸಲಾಗಿದ್ದ ‘ವಿಶ್ವ ಅಪ್ಪಂದಿರ ದಿನಾಚರಣೆ’ಯ ಪ್ರಯುಕ್ತ ವೃದ್ಧಾಶ್ರಮದ ಹಿರಿಯ ಜೀವಿಗಳಿಗೆ ಗೌರವ ಸತ್ಕರಿಸಿ ಅವರು ಮಾತನಾಡುತ್ತಿದ್ದರು.
ನಿವೃತ್ತ ಮುಖ್ಯ ಶಿಕ್ಷಕ ಬಸಯ್ಯಸ್ವಾಮಿ ಹೊದಲೂರ ಮಾತನಾಡಿ, ಮಕ್ಕಳಿಗೆ ಉತ್ತಮವಾದ ಶಿಕ್ಷಣ, ಸಂಸ್ಕಾರ, ಮೌಲ್ಯಗಳು, ನೀಡಿ, ಜೋಪಾನ ಮಾಡಿ ಮಗುವನ್ನು ದೊಡ್ಡವನನ್ನಾಗಿ ಮಾಡುವಲ್ಲಿ ತಂದೆಯ ಪಾತ್ರ ಮರೆಯುವಂತಿಲ್ಲ. ಆತನ ಇಳಿ ವಯಸ್ಸಿನಲ್ಲಿ ವೃದ್ಧಾಶ್ರಮಕ್ಕೆ ನೂಕುವ ನೀಚ ಬುದ್ಧಿ ಮಕ್ಕಳು ಎಂದಿಗೂ ಮಾಡಬಾರದು. ತಾಯಿ-ತಂದೆಗೆ ಸಮಾನವಾದ ಗೌರವ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಶಿವಯೋಗಪ್ಪ ಬಿರಾದಾರ ಬಾಳ್ಳಿ, ಬಸಮ್ಮ ಕೆ.ಸ್ಥಾವರಮಠ, ಪ್ರೇಮಾ ಫರತಾಬಾದ, ಶಿವಲಿಂಗಪ್ಪ ಸಾವಳಗಿ, ಸಿದ್ರಾಮಪ್ಪ ಯಳಸಂಗಿ, ಮಲ್ಲಿಕಾರ್ಜುನ ಹೊಸಪೇಟ್, ನಾಗಣ್ಣ ಅಗ್ರೆ, ರಜೇಂದ್ರ ಇಂಜಾಳೆ, ಸೂರ್ಯಕಾಂತ ದೇಶಪಾಂಡೆ, ವೀರಭದ್ರಪ್ಪ ಬೆನಕನಳ್ಳಿ, ಭೀಮಾಶಂಕರ ಸಾಗನೂರ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.