ಕೌಟುಂಬಿಕ ವ್ಯವಸ್ಥೆಯ ಸಫಲತೆಯಲ್ಲಿ ತಾಯಿ ಪಾತ್ರ ಅನನ್ಯ

ಕಲಬುರಗಿ:ಮೇ.14: ಒಂಬತ್ತು ತಿಂಗಳು ಹೊತ್ತು, ಹೆತ್ತ, ತನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ಹಾಗೂ ಪೋಷಿಸುವ ತಾಯಿಗೆ ಸಮಾನವಾದ ಮತ್ತೊಬ್ಬ ವ್ಯಕ್ತಿ ಜಗತ್ತಿನಲ್ಲಿ ಯಾರು ಇಲ್ಲ. ವÀರ್ಣಿಸಲು ಅಸಾಧ್ಯವಾದ, ಅನುಪಮ ವ್ಯಕ್ತಿ ತಾಯಿಯಾಗಿದ್ದಾಳೆ. ಇಡೀ ತನ್ನ ಜೀವನ ಸವೆಸಿ, ಮಕ್ಕಳನ್ನು ದೊಡ್ಡವರನ್ನಾಗಿ ಮಾಡಿದ ತಾಯಿಯನ್ನು, ಆಕೆಯ ಇಳಿವಯಸ್ಸಿನಲ್ಲಿ ಸರಿಯಾಗಿ ನೋಡಿಕೊಳ್ಳದೆ, ವೃದ್ಧಾಶ್ರಮಕ್ಕೆ ನೂಕುವ ಅಮಾನವೀಯ ಕೆಲಸ ಮಾಡದೆ, ಪೂಜ್ಯನೀಯ ಸ್ಥಾನವನ್ನು ನೀಡಿ, ಗೌರವಿಸಬೇಕಾದದ್ದು ಅವಶ್ಯಕವಾಗಿದೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಹೊರವಲಯದ ಸೈಯದ್ ಚಿಂಚೋಳಿ ಕ್ರಾಸ್ ಸಮೀಪದಲ್ಲಿರುವ ‘ಮಹಾದೇವಿ ತಾಯಿ ಮಹಿಳಾ ವಿದ್ಯಾವರ್ಧಕ ಸಂಘದ ವೃದ್ಧಾಶ್ರಮ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ಜರುಗಿದ ‘ವಿಶ್ವ ತಾಯಂದಿರ ದಿನಾಚರಣೆ’ಯ ಪ್ರಯುಕ್ತ ವೃದ್ಧಾಶ್ರಮದಲ್ಲಿರುವ ತಾಯಂದಿರಗೆ ಹಣ್ಣುಗಳನ್ನು ವಿತರಿಸಿ ಅವರು ಮಾತನಾಡುತ್ತಿದ್ದರು.
‘ತಾಯಿ’ ಎನ್ನುವುದು ಬರೀ ಹೆಣ್ಣನ್ನು ಕುರಿತು ಹೇಳುವುದಲ್ಲ. ಭೂಮಿ, ದೇಶ, ನದಿ, ಪರಿಸರಕ್ಕೆ ತಾಯಿಯ ಸ್ವರೂಪದ ಹೆಸರನ್ನಿಟ್ಟು ಕರೆಯುವುದು ಆಕೆಯ ಮಹತ್ವವನ್ನು ಸಾರುತ್ತದೆ. ತಾಯಿಯು ಪ್ರೀತಿ, ಕರುಣೆ, ಮಾನವೀಯತೆಯನ್ನು ಉಳಿಸಿ, ಬೆಳೆಸುವ ಮಹಾನ ವ್ಯಕ್ತಿಯಾಗಿದ್ದಾಳೆ. ಎಲ್ಲರನ್ನು ಒಂದೂಗೂಡಿಸುವ ಶಕ್ತಿ ಆಕೆಯಲ್ಲಿದೆ. ‘ತಾಯಿಯೇ ಮೊದಲು ಗುರು’ ಎಂಬ ಮಾತು ಮಕ್ಕಳನ್ನು, ಮಹಾನ ವ್ಯಕ್ತಿಯನ್ನಾಗಿಸುವಲ್ಲಿ ಆಕೆಯ ಔಚಿತ್ಯವನ್ನು ತೋರಿಸುತ್ತದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಸಹಾಯಕ ಕೃಷಿ ಅಧಿಕಾರಿ ಶಿವಯೋಗಪ್ಪ ಬಿರಾದಾರ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಪತ್ರಿಕಾ ಕಾರ್ಯದರ್ಶಿ ದೇವೇಂದ್ರಪ್ಪ ಗಣಮುಖಿ, ಬಸಮ್ಮ ಕೆ.ಸ್ಥಾವರಮಠ ಸೇರಿದಂತೆ ಮತ್ತಿತರರಿದ್ದರು.